ಕಲಾದಗಿ: ಕಳೆದ ವರ್ಷ ಪ್ರವಾಹದಿಂದ ನಲುಗಿದ ರೈತ ಪ್ರಸಕ್ತ ವರ್ಷ ಕೋವಿಡ್ ಗೆ ಸಿಲುಕಿ ಸಂಕಷ್ಟ ಅನುಭವಿಸುತ್ತಿದ್ದಾನೆ. ಈಗ ಈರುಳ್ಳಿ ಬೆಳೆ ಕೈಗೆ ಬರುವ ಮುಂಚೆ ರೋಗಕ್ಕೆ ತುತ್ತಾಗಿ ಮಗುಚಿ ಬೀಳುತ್ತಿದ್ದು, ರೈತನನ್ನು ಮಕಾಡೆ ಮಲಗಿಸುತ್ತಿದೆ.
ಈ ಭಾಗದ ಸತ್ತಮುತ್ತಲಿನ ಗ್ರಾಮದಲ್ಲಿ ಬಹುತೇಕ ರೈತರು ಪ್ರತಿ ವರ್ಷ ಜೂನ್ ತಿಂಗಳಲ್ಲಿ ಈರುಳ್ಳಿ ಬಿತ್ತನೆ ಮಾಡಿ ಬೆಳೆಗಾಗಿ ಸಾಕಷ್ಟು ಶ್ರಮ ವಹಿಸಿ ಬೆಳೆ ಕಾಳಜಿ ವಹಿಸುತ್ತಿದ್ದು, ಕಲಾದಗಿ ಹೋಬಳಿ ವ್ಯಾಪ್ತಿಯಲ್ಲಿ 1500 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿದೆ. ಬಹುತೇಕ ಈರುಳ್ಳಿಗೆ ಹಳದಿ ರೋಗ ಕಾಡುತ್ತಿದೆ. ಕಳೆದ ಬಾರಿ ಪ್ರವಾಹಕ್ಕೆ ಈರುಳ್ಳಿ ಬೆಳೆ ಹಾನಿಯಾಗಿತ್ತು. ಈ ಬಾರಿಯಾದರೂ ಈರುಳ್ಳಿ ರೈತರ ಕಣ್ಣಿರು ಒರೆಸಲಿದೆ ಎನ್ನುವ ಭರವಸೆ ಹೊಂದಿದ್ದ. ಆದರೆ, ರೈತನಿಗೆ ಹುಲುಸಾಗಿ ಬಂದ ಈರುಳ್ಳಿ ಹೊಲದಲ್ಲಿಯೇ ರೊಗಕ್ಕೆ ತುತ್ತಾಗಿ ಹಳದಿ ಹೊಂದಿ ಒಣಗಿ ಕೊಳೆತು ಹೋಗುತ್ತಿದೆ.ಎಷ್ಟೇ ಔಷಧ ಸಿಂಪಡಣೆ ಮಾಡಿದರೂ ಹತೋಟಿಗೆ ಬಾರದೆ ರೈತ ಕಂಗಾಲಾಗಿದ್ದಾನೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾರ್ಗದರ್ಶನ ಮಾಡಿ ಅಳಿದುಳಿದ ಈರುಳ್ಳಿ ಬೆಳೆಯಾದರೂ ಕೈಗೆ ಬರುವಂತೆ ಮಾಡಬೇಕೆಂಬುದೇ ರೈತನ ಒತ್ತಾಸೆಯ ಅಳಲು.
ಈರುಳ್ಳಿ ಬೆಳೆ ಉತ್ತಮವಾಗಿಯೇ ಇತ್ತು. ಕಳೆದ 15 ದಿನದಿಂದ ಬೆಳೆಗೆ ಹಳದಿ ರೋಗ ತಗುಲಿ ಬೆಳೆ ಹಳದಿ ಹೊಂದಿ ಸಸಿಗಳು ಸಾಯುತ್ತಿವೆ. ಸ್ಥಳೀಯ ಕೃಷಿ, ತೋಟಗಾರಿಕೆ ಕೇಂದ್ರದ ಅಧಿಕಾರಿಗಳು ರೈತರ ತೋಟಕ್ಕೆ ಬಂದು ಸೂಕ್ತ ಮಾರ್ಗದರ್ಶನ ಮಾಡುತ್ತಿಲ್ಲ, ಕೆಲ ಗ್ರಾಮಗಳಿಗೆ ಕೃಷಿ ಗ್ರಾಮ ಸಹಾಯಕ ಯಾರು ಎಂಬುದು ರೈತರಿಗೆ ಮಾಹಿತಿ ಇಲ್ಲ ಎಂದು ಆರೋಪಿಸಿದ್ದಾರೆ. ರೈತರ ತೋಟಗಳಿಗೆ ಕೃಷಿ, ತೋಟಗಾರಿಕೆ ಇಲಾಖೆ ಅಧಿ ಕಾರಿಗಳು ಭೇಟಿ ನೀಡಿ ಸೂಕ್ತ ಮಾರ್ಗದರ್ಶನ ಬೆಳೆ ನಿರ್ವಹಣೆ ಮಾಹಿತಿ ಮಾಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ತೋಟಗಳಿಗೆ ಭೇಟಿ ನೀಡಿ ಸೂಕ್ತ ಮಾರ್ಗದರ್ಶನ ಮಾಡದೇ ಇರುವುದರಿಂದ ಈರುಳ್ಳಿ ಬೆಳೆ ಕೈಗೆ ಬರುವ ಮೊದಲೇ ಕೊಳೆಯುತ್ತಿದೆ. ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ.-
ರಾಜು ಅರಕೇರಿ, ಶಾರದಾಳ ಗ್ರಾಮದ ರೈತ
ಈರುಳ್ಳಿ ಬೆಳೆಗೆ ಗೊಣ್ಣೆ ಹುಳು ಬಾಧೆ ಹೆಚ್ಚಾಗಿದೆ. ಕೊಳೆ ರೋಗ ಇದ್ದಲ್ಲಿ ಮೈಕೋಪಾಲ್ ಎಂ 45 ಎರಡು ಅದರ ಜತೆಗೆ ಮ್ಯಾಗ್ನೇಸಿಂ ಸಲ್ಫೆàಟ್ ಸೇರಿಸಿ ಸಿಂಪಡಣೆ ಮಾಡಿದರೆ ರೋಗ ಹತೋಟಿಗೆ ಬರುತ್ತಿದೆ. ಗೊಣ್ಣೆ ಹುಳು ರೋಗಕ್ಕೆ ಅಟ್ರಾಜಿನ್ ಬಳಕೆ ಮಾಡಬೇಕು. ಶೀಘ್ರ ಕಲಾದಗಿ ಭಾಗಕ್ಕೆ ಭೇಟಿ ನೀಡಿ ಪರಿಶೀಲಿಸುವೆ.-
ಸುಭಾಸ ಸುಲ್ಪಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ