ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಮೂರರಿಂದ ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಿದೆ.
ಉತ್ತರ ಒಳನಾಡು ಹಾಗೂ ಕರಾವಳಿ ಭಾಗದ ವಿವಿಧ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಮುಂದಿನ 24 ಗಂಟೆ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಅಲ್ಲದೆ.ಜೂನ್ 23ರವರೆಗೆ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.
ಜು.22ರಿಂದ ದಕ್ಷಿಣ ಒಳನಾಡು ಹಾಗೂ ಮಲೆನಾಡು ಭಾಗದ ವಿವಿಧ ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹವಮಾನ ಇಲಾಖೆಯು ಗುರುವಾರ ಬೆಳಗ್ಗೆ 8.30ಕ್ಕೆ ನೀಡಿದ ಅಂಕಿ- ಅಂಶದ ಪ್ರಕಾರ ಉಡುಪಿಯ ಕೋಟದಲ್ಲಿ 12 ಸೆಂ.ಮೀ, ಮಳೆಯಾಗಿದೆ. ಕಾರವಾರ ಹಾಗೂ ಭಾಗಮಂಡಲದಲ್ಲಿ ತಲಾ 11 ಸೆಂ.ಮೀ, ಅಂಕೋಲಾ, ಶಿರಾಲಿ ಹಾಗೂ ಕದ್ರಾದಲ್ಲಿ ತಲಾ 9 ಸೆಂ.ಮೀ, ಕುಮಟಾ ಹಾಗೂ ಸಿದ್ಧಪುರದಲ್ಲಿ ತಲಾ 8 ಸೆಂ. ಮೀ ಮಳೆಯಾಗಿರುವುದು ವರದಿಯಾಗಿದೆ.