Advertisement
ಎಳ್ಳಮಾವಾಸ್ಯೆ ಹಬ್ಬದಾಚರಣೆಗೆ ರೈತರು ಹೊಲದಲ್ಲಿ ಕೊಂಪೆ ಮಾಡಿ ಲಕ್ಷ್ಮೀ ಮತ್ತು ಪಾಂಡವರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ ಹಬ್ಬದೂಟ ಸವಿಯುವ ಪರಿಪಾಠವುಂಟು. ಎರಡು ದಿನ ಮುಂಚಿತವಾಗಿ ಹಬ್ಬದ ಸಿದ್ಧತೆ ನಡೆಯುತ್ತದೆ. ತರಕಾರಿ ಸೋಸುವ (ಕಾಯಿಪಲ್ಯ) ದಿನದಂದು ಎಲ್ಲ ತರಕಾರಿ ಸ್ವತ್ಛಗೊಳಿಸಿ ಸಿದ್ಧ ಮಾಡಲಾಗುತ್ತದೆ.
ಚರಗ ಚೆಲ್ಲಿ ಪ್ರಾರ್ಥನೆ: ಪಾಂಡವರು, ಲಕ್ಷ್ಮೀಗೆ ನೈವೇದ್ಯ ಅರ್ಪಿಸಿ, ಹಿಂಗಾರು ಬೆಳೆಗಳಿಗೆ ಯಾವುದೇ ರೋಗಬಾಧೆ ಬಾರದಿರಲಿ ಹಾಗೂ ಉತ್ತಮ ಫಸಲು ಬರಲೆಂದು ರೈತರು “ವಲಗೈ ವಲಗೈ ಚಾಲೋನ ಪಲಗೈ’ (ಯಾವ ತಾಯಿ ಕೊಟ್ಟಳು.. ಭೂಮಿ ತಾಯಿ ಕೊಟ್ಟಳು..) ಎನ್ನುವ ಘೋಷದೊಂದಿಗೆ ಹೊಲದ ತುಂಬ ಚರಗ ಚೆಲ್ಲಿ ಉತ್ತಮ ಫಸಲಿಗಾಗಿ ಭೂತಾಯಿಯನ್ನು ಪ್ರಾರ್ಥಿಸುತ್ತಾರೆ. ಹೆಚ್ಚಾದ ಬೆಲೆ: ಪ್ರಸಕ್ತ ವರ್ಷ ಮುಂಗಾರು-ಹಿಂಗಾರು ಮಳೆ ಅಭಾವದಿಂದಾಗಿ ಈ ಬಾರಿ ತಾಲೂಕನ್ನು ಬರ ಪ್ರದೇಶ ಎಂದು ಘೋಷಿಸಲಾಗಿದೆ. ಮುಂಗಾರು-ಹಿಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಫಸಲು ಕಾಣದಿರುವುದರಿಂದ ತರಕಾರಿ, ಕಾಯಿಪಲ್ಯೆಗಳ ಬೆಲೆ ಗಗನಕ್ಕೇರಿದೆ. ಗಜ್ಜರಿ ಕೆ.ಜಿ- 40 ರೂ., ಮೆಂತೆಸೊಪ್ಪು -30 ರೂ. ಅವರೆಕಾಯಿ ಬೀಜ-80 ರೂ., ಹಸಿ ಮೆಣಸಿನಕಾಯಿ-40 ರೂ., ಹಸಿ ಹುಣಸೆಕಾಯಿ-40 ರೂ. ಮಾರಾಟವಾಗುತ್ತಿದ್ದರೂ ಹಬ್ಬದ ಉತ್ಸುಕತೆ, ಸಂಭ್ರಮಕ್ಕೆ ಕೊರತೆಯಾಗಿಲ್ಲ. ಒಟ್ಟಿನಲ್ಲಿ ತರಕಾರಿ ಬೆಲೆ ಎಷ್ಟೇ ಗಗನಕ್ಕೇರುತ್ತಿದ್ದರೂ ರೈತರು ಮಾತ್ರ ಎಲ್ಲ ರೀತಿಯ ತರಕಾರಿ ಖರೀದಿಸಿ ಹಬ್ಬದಾಚರಣೆಗೆ ಸಿದ್ಧರಾಗಿದ್ದಾರೆ.
Related Articles
Advertisement