ಗಜೇಂದ್ರಗಡ: ಅನ್ನದಾತರ ಅಚ್ಚುಮೆಚ್ಚಿನ ಹಬ್ಬವಾದ ಎಳ್ಳು ಅಮಾವಾಸ್ಯೆ ಚರಗ ಪ್ರಯುಕ್ತ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತ ಸಮೂಹ ಹೊಲದಲ್ಲಿ ಬೆಳೆದ ಬೆಳೆಗಳ ಮಧ್ಯೆ ಬನ್ನಿ ವೃಕ್ಷಕ್ಕೆ ಮತ್ತು ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಶುಕ್ರವಾರ ಸಂಭ್ರಮದಿಂದ ಚರಗದ ಹಬ್ಬ ಆಚರಿಸಲಾಯಿತು.
ಈ ಬಾರಿ ಎಳ್ಳ ಅಮಾವಾಸ್ಯೆ ದಿನವೇ ಕಂಕಣ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಕೆಲ ರೈತರು ಅಮಾವಾಸ್ಯೆ ಮುನ್ನಾ ದಿನವೇ ಹಬ್ಬ ಆಚರಿಸಿದರೆ ಇನ್ನು ಕೆಲ ರೈತರು ಗ್ರಹಣ ಕಳೆದ ಮರುದಿನ ಶುಕ್ರವಾರ ಸಂಪ್ರದಾಯ ಬದ್ಧವಾಗಿ ಒಕ್ಕಲುತನದ ಹಬ್ಬ ಆಚರಿಸಿದರು. ಬೆಳಗ್ಗೆ ರೈತರು ನಿತ್ಯದ ಒಡನಾಡಿ ಎತ್ತುಗಳನ್ನು ಮೈ ತೊಳೆದು ಸಿಂಗರಿಸಿ ಹೂಡಿದ ಬಂಡಿ, ಟ್ರಾಕ್ಟರ್, ಟಂಟಂ ವಾಹನಗಳಲ್ಲಿ ಕುಟುಂಬ ಮಹಿಳೆಯರು, ಮಕ್ಕಳು, ಗೆಳೆಯರು ಹಾಗೂ ವಿಶೇಷ ಆಮಂತ್ರಿತರ ಜೊತೆಗೂಡಿ ಬುತ್ತಿ ಸಮೇತ ಹೊಲಗಳಿಗೆ ತೆರಳಿ ಹರ್ಷದಿಂದ ಬನ್ನಿಗಿಡಕ್ಕೆ ಸಾಮೂಹಿಕ ಪೂಜೆ ಸಲ್ಲಿಸಿದರು.
ಹಿಂಗಾರಿ ಹಂಗಾಮಿನಲ್ಲಿ ಹುಲುಸಾಗಿ ಮೈ ಕೊಡವಿ ನಿಂತಿರುವ ಜೋಳ, ಕಡಲೆ, ಗೋಧಿಯ ಬೆಳೆಯಲ್ಲಿ ಹುಲಿಗ್ಯೋಸುರಂಬಳಗ್ಯೊ ಎನ್ನುವ ಉದ್ಘೋಷ ಹಾಕುತ್ತಾ, ಗಂಗಾ ಸ್ವರೂಪ ನೀರಿನ ಜೊತೆ ಸಿದ್ಧಪಡಿಸಿದ ಯಳ್ಳು ಹೊಳಿಗೆ ಭೂತಾಯಿ ಮಡಲಿಗೆ ಸಮರ್ಪಿಸಿ ನಮಿಸಿದರು.
ಮಹಿಳೆಯರು ಕಳೆದ ಮೂರ್‍ನಾಲ್ಕು ದಿನಗಳಿಂದ ಶ್ರಮಪಟ್ಟು ಸಿದ್ಧಪಡಿಸಿದ ವಿಶೇಷ ಖಾದ್ಯಗಳಾದ ಕಡಬು, ಎಳ್ಳು ಹೋಳಿಗೆ, ಜೋಳದ ರೊಟ್ಟಿ, ಸಜ್ಜಿರೊಟ್ಟಿ, ಚಪಾತಿ, ಯಣ್ಣಿಗಾಯಿ, ಹೆಸರು ಕಾಳು ಪಲ್ಲೆ, ಶೇಂಗಾ, ಗುರೆಳ್ಳು, ಚಟ್ನಿ, ಕೆನಿ ಮೊಸರಿನ ಊಟವನ್ನು ಕುಟುಂಬ ಹಿತೈಸಿಗಳ ಜತೆ ಸವಿದರು. ವರ್ಷಪೂರ್ತಿ ಹೊಲದ ಮುಖ ನೋಡದ ಸರಕಾರಿ ನೌಕರರು, ಬ್ಯಾಂಕ್ ಅಧಿಕಾರಿಗಳು, ವರ್ತಕರು, ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಮಾಡುವ ಜನರು ಹೊಲದ ಊಟದಲ್ಲಿ ಪಾಲ್ಗೊಂಡು ಒತ್ತಡದ ಬದುಕಿಗೆ ಕೆಲ ಸಮಯ ವಿದಾಯ ಹೇಳಿದರು.
ಊಟ ಮಾಡಿದ ಬಳಿಕ ಮಹಿಳೆಯರು ಮಕ್ಕಳು ಹೊಲದ ತುಂಬೆಲ್ಲ ಸುತ್ತಾಡಿ ಕಡಲೆ, ಬದುವಿನಲ್ಲಿ ಬೆಳೆದಿರುವ ತರಕಾರಿ ಪಡೆದರು. ವಿಶ್ರಾಂತಿ ನಂತರ ಗೋಧೂಳಿಯ ಸಮಯದಲ್ಲಿ ಬರಿದಾದ ಬುತ್ತಿ ಗಂಟಿನ ಸಾಮಾನುಗಳ ಸಮೇತ ಒಲ್ಲದ ಮನಸ್ಸಿನಿಂದ ಬಂಡಿ ಹತ್ತಿ ಮನೆಗಳಿಗೆ ತೆರಳಿದರು.