Advertisement
ಇನ್ನೊಂದೆಡೆ, ಸಮುದಾಯದಲ್ಲಿ ಪರ್ಯಾಯ ನಾಯಕರಾಗಿ ಬೆಳೆಯಲಿದ್ದಾರೆ ಎಂದೇ ಬಿಂಬಿತವಾಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಅಥಣಿ ಟಿಕೆಟ್ ಕೈತಪ್ಪಿರುವುದು ಸಹ ಯಡಿಯೂರಪ್ಪ ಅವರ ಜಾಣ್ಮೆಯ ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಆ ಮೂಲಕ ವರಿಷ್ಠರ ಮೂಲಕವೇ ಸಮುದಾಯ ಹಾಗೂ ಸರ್ಕಾರದಲ್ಲಿ ಪರ್ಯಾಯ ನಾಯಕರಾಗಿ ರೂಪುಗೊಳುವ ಲಕ್ಷ್ಮಣ ಸವದಿ ಅವರ ಪ್ರಯತ್ನಕ್ಕೂ “ಬ್ರೇಕ್’ ಹಾಕುವ ಪ್ರಯತ್ನ ನಡೆದಂತಿದೆ ಎನ್ನಲಾಗಿದೆ.
Related Articles
Advertisement
ಬಂಡಾಯ ಉಪಶಮನಕ್ಕೆ ಒತ್ತು: ಅನರ್ಹ ಶಾಸಕರಿಗೆ ಟಿಕೆಟ್ ನೀಡಿರುವುದಕ್ಕೆ ಅಸಮಾಧಾನಗೊಂಡಿರುವ ಪಕ್ಷದ ಮುಖಂಡರು, ಪರಾಜಿತ ಅಭ್ಯರ್ಥಿಗಳು, ಮಾಜಿ ಶಾಸಕರನ್ನು ಖುದ್ದು ಯಡಿಯೂರಪ್ಪ ಅವರೇ ಸಮಾಧಾನಪಡಿಸುತ್ತಿರುವುದು ಗಮನಾರ್ಹ ಸಂಗತಿ. ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯ ಅವರ ಕ್ಷೇತ್ರದಲ್ಲಿ ಬಂಡಾಯದ ಅಪಸ್ವರ ತೆಗೆದವರೊಂದಿಗೆ ಯಡಿಯೂರಪ್ಪ ಅವರೇ ಮಾತುಕತೆ ನಡೆಸಿದ್ದು, ಅವರೆಲ್ಲ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸು ವುದಾಗಿ ಪ್ರಕಟಿಸಿದ್ದಾರೆ. ಉಳಿದ ಕ್ಷೇತ್ರಗಳಲ್ಲೂ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ಸಚಿವರು, ಕೇಂದ್ರ ಸಚಿವರ ಮೂಲಕ ಮನವೊಲಿಕೆ ಪ್ರಯತ್ನ ನಡೆಸುವ ಮೂಲಕ ಭಿನ್ನಮತ ತಲೆದೋರದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.
ಸ್ಥಾನ ಭದ್ರಕ್ಕೆ ಆದ್ಯತೆ: ಅನರ್ಹ ಶಾಸಕರು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ತಾವೇ ಖುದ್ದು ಪ್ರಚಾರ ನಡೆಸಲು ಯಡಿಯೂರಪ್ಪ ಸಜ್ಜಾಗಿದ್ದಾರೆ. ಜತೆಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉಪಚುನಾವಣೆಯನ್ನು ಎದುರಿಸಬೇಕು ಎಂದು ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಸದ್ಯ ವಿಧಾನಸಭೆಯಲ್ಲಿ ಬಿಜೆಪಿ 105 ಶಾಸಕರ ಬಲವಿದ್ದು, ಪಕ್ಷೇತರ ಎಚ್.ನಾಗೇಶ್ ಬೆಂಬಲ ನೀಡಿದ್ದು 106 ಸದಸ್ಯ ಬಲವಿದೆ. ಉಪಚುನಾವಣೆ ನಡೆದಿರುವ 15 ಕ್ಷೇತ್ರಗಳ ಪೈಕಿ 10 ಸ್ಥಾನ ಗೆದ್ದರೂ ಬಿಜೆಪಿ ಸರ್ಕಾರವು ಸ್ಪಷ್ಟ ಬಹುಮತಕ್ಕಿಂತಲೂ ಹೆಚ್ಚು ಸ್ಥಾನಕ್ಕೆ ಏರಲಿದೆ. ಆ ಮೂಲಕ ಬಾಕಿಯಿರುವ ಮೂರು ವರ್ಷಗಳ ಆಡಳಿತವನ್ನೂ ಪೂರ್ಣಗೊಳಿಸುವ ಲೆಕ್ಕಾಚಾರದಲ್ಲಿ ಯಡಿಯೂರಪ್ಪ ಅವರು ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ಹೆಚ್ಚು ಸ್ಥಾನ ಗೆದ್ದು ಸ್ಥಾನ ಭದ್ರಪಡಿಸಿಕೊಳ್ಳುವತ್ತ ಚಿತ್ತ ಹರಿಸಿದ್ದಾರೆ ಎನ್ನಲಾಗಿದೆ.
ಸವದಿ ವೇಗಕ್ಕೆ ಬ್ರೇಕ್: ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಲಕ್ಷ್ಮಣ ಸವದಿ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಯಡಿಯೂರಪ್ಪ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೇ ನೆರೆ ಪರಿಹಾರಕ್ಕೆ ಮನವಿ ಮಾಡುವ ಸಂಬಂಧ ಯಡಿಯೂರಪ್ಪ ಅವರು ಪ್ರಧಾನಿ ಸೇರಿದಂತೆ ವರಿಷ್ಠರ ಭೇಟಿಗೆ ಪ್ರಯತ್ನ ನಡೆಸಿದರೂ ಅವಕಾಶ ಸಿಕ್ಕಿರಲಿಲ್ಲ. ಆದರೆ ಲಕ್ಷ್ಮಣ ಸವದಿಯವರು ನೇರವಾಗಿ ವರಿಷ್ಠರನ್ನು ಭೇಟಿಯಾಗಿ ಚರ್ಚಿಸುತ್ತಿದ್ದುದು ಅಸಮಾಧಾನ ಹೆಚ್ಚಿಸಿದ್ದರೂ, ಯಡಿಯೂರಪ್ಪ ಸುಮ್ಮನಿದ್ದರು. ಉಪ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಅನರ್ಹ ಶಾಸಕರ ಹಿತ ಕಾಪಾಡುವುದು, ಕೊಟ್ಟ ಮಾತು ಉಳಿಸಿ ಕೊಳ್ಳಬೇಕಾದ ಕಾರಣ ಅಥಣಿ ಕ್ಷೇತ್ರದ ಟಿಕೆಟ್ ಅನ್ನು ಮಹೇಶ್ ಕುಮಟಳ್ಳಿ ಅವರಿಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಆರು ತಿಂಗಳಲ್ಲಿ ವಿಧಾನ ಸಭೆಗೆ ಆಯ್ಕೆಯಾಗಿ ಉಪಮುಖ್ಯಮಂತ್ರಿ ಸ್ಥಾನ ಭದ್ರಪಡಿಸಿಕೊಳ್ಳುವ ಲಕ್ಷ್ಮಣ ಸವದಿ ಅವರ ಲೆಕ್ಕಾಚಾರ ತಲೆಕೆಳಗಾದಂತಾಗಿದೆ ಎನ್ನಲಾಗಿದೆ.
* ಎಂ.ಕೀರ್ತಿಪ್ರಸಾದ್