Advertisement

ಆನಂದಸಿಂಗ್‌ ಪಕ್ಷದಲ್ಲಿಯೇ ಇದ್ದಾರೆ: ಯಡಿಯೂರಪ್ಪ

02:05 PM Jan 06, 2018 | Team Udayavani |

ಬಳ್ಳಾರಿ: ವಿಜಯನಗರ ಶಾಸಕ ಆನಂದಸಿಂಗ್‌ ಪಕ್ಷದಲ್ಲಿಯೇ ಇದ್ದಾರೆ. ಅವರೊಡನೆ ಈಗಷ್ಟೇ ಮಾತನಾಡಿದ್ದೇನೆ. ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಜಿಲ್ಲೆಯ ಎಲ್ಲಾ 9 ವಿಧಾನಸಭಾ ಕ್ಷೇತ್ರಗಳಲ್ಲಿ 8ರಲ್ಲಿ ಗೆಲ್ಲಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ .ಯಡಿಯೂರಪ್ಪ ತಿಳಿಸಿದರು.

Advertisement

ನಗರದಲ್ಲಿ ಶುಕ್ರವಾ ರಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್‌ ಸರ್ಕಾರದ ದುರಾಡಳಿತದಿಂದ ಬೇಸತ್ತಿರುವ ರಾಜ್ಯದ ಮತದಾರರು ಬಿಜೆಪಿಯನ್ನು ಬೆಂಬಲಿಸಿ ಸರ್ಕಾರ ರೂಪಿಸುವ ನಿಟ್ಟಿನಲ್ಲಿ ಆಶೀರ್ವದಿಸಲಿದ್ದಾರೆ. ಪರಿವರ್ತನಾ ರ್ಯಾಲಿ ಸಂದರ್ಭ ರಾಜ್ಯದ ಎಲ್ಲ ಕಡೆಗಳಿಂದಲೂ ಬಿಜೆಪಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ರಾಜ್ಯದ ಕಾಂಗ್ರೆಸ್‌ ಆಡಳಿತದಿಂದ ರೋಸಿ ಹೋಗಿರುವ ಜನರು, ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದಾರೆ ಎಂದರು. ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ಅ ನೆಲೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಅಧಿಕಾರಕ್ಕೆ ಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದುವರೆಗೂ ರಾಜ್ಯದ 155 ವಿಧಾನಸಭಾ ಕ್ಷೇತ್ರಗಳಲ್ಲಿ ಪೂರ್ಣಗೊಳಿಸಿದ ಪರಿವರ್ತನಾ ಯಾತ್ರೆಯ ಸಂದರ್ಭದಲ್ಲಿ ಪಕ್ಷದ 1.50 ಕೋಟಿ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರನ್ನು ಭೇಟಿಯಾಗಿದ್ದೇವೆ. ಈ ಸಂದರ್ಭ ರಾಜ್ಯದ ಜನರ ಸಮಸ್ಯೆಗಳನ್ನು ಆಲಿಸಿದ್ದೇವೆ. ಅವರ ಅಳಲನ್ನು ನೋಡಿದ್ದೇವೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಹಿಂದು ಯುವಕರ ಹತ್ಯೆ ಸರಣಿ ಮುಂದುವರಿದಿದೆ. ಹಿಂದೂ ಯುವಕರ ಹತ್ಯೆಗಳ ಕುರಿತು ಗೃಹಮಂತ್ರಿ ರಾಮಲಿಂಗಾರೆಡ್ಡಿ ಬೇಜವಾಬ್ದಾರಿಯ ಹೇಳಿಕೆ
ನೀಡುತ್ತಿದ್ದಾರೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬೆಂಗಳೂರು ನಗರವೊಂದರಲ್ಲಿಯೇ 45,547 ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.

ಇದು ದೇಶದ ಅತ್ಯಂತ ದೊಡ್ಡ ನಗರ ಎನಿಸಿದ ಮುಂಬೈ ನಗರಕ್ಕಿಂತಲೂ ಹೆಚ್ಚು ಅಪರಾಧ ಪ್ರಕರಣಗಳು ಬೆಂಗಳೂರಿನಲ್ಲಿ ಜರುಗಿವೆ. ಈ ಹಿಂದೆ ಗಾರ್ಡನ್‌ ಸಿಟಿ, ಸಿಲಿಕಾನ್‌ ಸಿಟಿ ಎಂಬ ಖ್ಯಾತಿ ಪಡೆದಿದ್ದ ಬೆಂಗಳೂರು ಇದೀಗ ರೇಪ್‌ ಸಿಟಿಯಾಗಿ ಬದಲಾಗಿದೆ ಎಂದರು. ಎರಡು ವರ್ಷಗಳ ಕೆಳಗೆ ವಿಚಾರವಾದಿ ಡಾ| ಎಂ.ಎಂ. ಕಲಬುರ್ಗಿ ಅವರ ಹತ್ಯೆ ಜರುಗಿತು. ಕೆಲ ತಿಂಗಳ ಹಿಂದೆ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಜರುಗಿತು. ಆದರೆ, ರಾಜ್ಯ ಸರ್ಕಾರ ಆರೋಪಿಗಳನ್ನು ಹಿಡಿಯುವಲ್ಲಿ ವಿಫಲವಾಗಿದೆ. ಇದು ರಾಜ್ಯದ ಕಾನೂನು ಸುವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದರು.

ಸಂಸದ ಪ್ರತಾಪ ಸಿಂಹ ಅವರ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಕುರಿತು ಪ್ರತಿಕ್ರಿಯಿಸಿದ ಬಿಎಸ್‌ ವೈ, ಪಕ್ಷ ಹಾಗೂ ಸಮಾಜದ ಸೌಹಾರ್ದಕ್ಕೆ ಧಕ್ಕೆಯಾಗುವ ನಿಟ್ಟಿನಲ್ಲಿ ಯಾರೇ ಆಗಲಿ ಇಂತಹ ಹೇಳಿಕೆ ನೀಡಬಾರದು. ಅದು ಅಕ್ಷಮ್ಯ. ಇಂತಹ ಪ್ರಕರಣಗಳನ್ನು ನಾನು ಬೆಂಬಲಿಸುವುದಿಲ್ಲ. ಈ ಕುರಿತು ಸಂಸದ ಪ್ರತಾಪ್‌ ಸಿಂಹ ಅವರಿಗೆ ಎಚ್ಚರಿಕೆ ನೀಡಲಾಗಿದೆ. ಅವರು ಈ ರೀತಿ ಮುಂದುವರಿದರೆ, ಪಕ್ಷದ ಶಿಸ್ತನ್ನು ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಜನವರಿ 28 ರಂದು ನಡೆಯಲಿರುವ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪದಲ್ಲಿ ಪಾಲ್ಗೊಳ್ಳಲಿದ್ದಾರೆ. ಜ. 7ರಂದು ಬೆಂಗಳೂರಿನಲ್ಲಿ ಪರಿವರ್ತನಾ ಯಾತ್ರೆ ಸಮಾವೇಶ ನಡೆಯಲಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಭಾಗವಹಿಸಲಿದ್ದಾರೆ. ಜ. 8ರಂದು ಹಿಂದು ಯುವಕ ದೀಪಕ್‌ ರಾವ್‌ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ಬಿಜೆಪಿಯಿಂದ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ. ಜ.10ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಪಕ್ಷ ಸಂಘಟನೆಗೆ ಚಿತ್ರದುರ್ಗಕ್ಕೆ ಆಗಮಿಸಲಿದ್ದಾರೆ. 
ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next