ಬೆಂಗಳೂರು: ನಿರಂತರ ಪ್ರವಾಸ, ಹೋರಾಟದಲ್ಲೇ ತೊಡಗಿಸಿಕೊಂಡಿದ್ದ ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕೆಲ ದಿನಗಳ ಮಟ್ಟಿಗೆ ವಿಶ್ರಾಂತಿ ಪಡೆಯಲು ಕೇರಳಕ್ಕೆ ತೆರಳಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆ, ಫಲಿತಾಂಶ ಪ್ರಕಟವಾದ ನಂತರದ ಬೆಳವಣಿಗೆ, ಬಳಿಕ ಎದುರಾದ ಉಪಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ದಣಿದಂತಿದ್ದ ಯಡಿಯೂರಪ್ಪ ಅವರು ಕೆಲವು ದಿನ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ.
ಬೆಂಗಳೂರು ಇಲ್ಲವೇ ಶಿವಮೊಗ್ಗದಲ್ಲಿದ್ದರೆ ನಿರಂತರವಾಗಿ ನಾಯಕರು, ಮುಖಂಡರು, ಕಾರ್ಯಕರ್ತರು ಭೇಟಿಯಾಗುವುದರಿಂದ ವಿಶ್ರಾಂತಿಗೆ ಅಡ್ಡಿಯಾಗಲಿದೆ ಎಂಬ ಕಾರಣಕ್ಕೆ ಕೇರಳದಲ್ಲಿ ವಿಶ್ರಾಂತಿ ಪಡೆಯಲು ಮುಂದಾಗಿದ್ದಾರೆ. ಕೆಲ ದಿನಗಳ ವಿಶ್ರಾಂತಿ ಬಳಿಕ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ವಿರುದ್ಧ ನಡೆಸಬೇಕಾದ ಹೋರಾಟ ಹಾಗೂ ಡಿ.10ರಂದು ಒಂದು ಲಕ್ಷ ರೈತರನ್ನು ಒಟ್ಟುಗೂಡಿಸಿ ನಡೆಸಲಿರುವ ಬೃಹತ್ ಪ್ರತಿಭಟನೆಗೆ ಸಜ್ಜಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯಲ್ಲಿ ಅಪಸ್ವರ
ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಗುರುವಾರ ಸಂಜೆ ನಡೆದ ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಕೆಲ ಮುಖಂಡರಿಗೆ ಮಾತನಾಡಲು ಅವಕಾಶ ನೀಡಿಲ್ಲ ಎಂಬ ಅಪಸ್ವರ ಕೇಳಿಬಂದಿದೆ.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಲು ಅವಕಾಶ ನೀಡಿ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ಭಾಷಣಕ್ಕೆ ಅವಕಾಶ ನೀಡಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಅನಂತಕುಮಾರ್ ಅವರ ಅಕಾಲಿಕ ನಿಧನದ ಬಳಿಕ ಅವರು ನಿರ್ವಹಿಸುತ್ತಿದ್ದ ಖಾತೆಗಳ ಪೈಕಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯನ್ನು ಡಿ.ವಿ.ಸದಾನಂದಗೌಡರಿಗೆ ನೀಡಲಾಗಿದ್ದು, ಅವರು ನುಡಿನಮನ ಸಲ್ಲಿಸಲು ಅವಕಾಶ ನೀಡಬೇಕಿತ್ತು ಎಂಬುದು ಕೆಲ ಮುಖಂಡರ ವಾದ.
ಆದರೆ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸುವ ಗಣ್ಯರ ಪಟ್ಟಿಯಲ್ಲಿ ಸದಾನಂದಗೌಡರ ಹೆಸರು ಇರಲಿಲ್ಲ. ಅನಂತ ಕುಮಾರ್ ಅವರ ವೈಕುಂಠ ಸಮಾರಾಧನೆ ದಿನದಂದೇ ಸದಾನಂದಗೌಡರು ಮಾತನಾಡಲು ಅವಕಾಶ ನೀಡಲಾಗಿತ್ತು. ಹಾಗಾಗಿ ಗುರುವಾರದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸದಾನಂದಗೌಡರಿಗೆ ಅವಕಾಶ ನೀಡಿರಲಿಲ್ಲ. ಹಾಗಾಗಿ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ರಾಜ್ಯ ನಾಯಕರೊಬ್ಬರು ತಿಳಿಸಿದ್ದಾರೆ.