Advertisement

ನಾನು ಸಚಿವನಾಗಲು, ಸಿಎಂ ಆಗಲು ಯಡಿಯೂರಪ್ಪ ಕಾರಣ : ಬಸವರಾಜ ಬೊಮ್ಮಾಯಿ

03:16 PM Oct 22, 2021 | Team Udayavani |

ಹಾವೇರಿ: ‘ನಾನು ಬಿಜೆಪಿಗೆ ಬರಲು, ಶಾಸಕನಾಗಲು, ಸಚಿವನಾಗಲು ಮತ್ತು ಮುಖ್ಯಮಂತ್ರಿಯಾಗಲು ಯಡಿಯೂರಪ್ಪ ಅವರು ಕಾರಣ’ ಎಂದು ಸಿಎಂ ಬಸವರಾಜ ಬೊಮ್ಮಾಯಿ ಶುಕ್ರವಾರ ಹೇಳಿಕೆ ನೀಡಿದ್ದಾರೆ.

Advertisement

ಬೊಮ್ಮನಹಳ್ಳಿಯಲ್ಲಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಎಂ , ‘ನಮ್ಮ ನಾಯಕ ಯಡಿಯೂರಪ್ಪ ಅವರು ಇಲ್ಲಿಗೆ ನೂರು ಬಾರಿ ಬಂದಿದ್ದಾರೆ, ಅವರು ಹಾಗೂ ಸಿಎಂ ಉದಾಸಿ ಅವರ ಚಿಂತನೆಯನ್ನು ಇಡಿ ನಾಡು ನೋಡಿದೆ. ರೈತರ ವಿಚಾರದಲ್ಲಿ ಯಡಿಯೂರಪ್ಪ ಎಂದು ರಾಜಿ‌ ಮಾಡಿಕೊಂಡಿಲ್ಲ. ಬಿಜೆಪಿ ಮಾಡಿರುವ ಯೋಜನೆಗಳು ನೆನಪು ‌ಮಾಡಿಕೊಂಡರೆ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದೇವೆ’ ಎಂದರು.

‘ಉದಾಸಿ ಅವರ ಅಭಿವೃದ್ಧಿ ‌ಪರ ಚಿಂತನೆ, ಯುವಕರಿಗೆ ಮಾದರಿಯಾಗಿದೆ. ಬಹಳಷ್ಟು ಕೆಲಸ ಮಾಡುವ ಜನರನ್ನು ನಾವು ಗುರುತಿಸಲಿಲ್ಲ. ಈ ಕ್ಷೇತ್ರದ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿ ‌ಮಾಡಿದ್ದಾರೆ. ಈ ಹಿಂದೆ ಅಂದಿನ ಕಾಂಗ್ರೆಸ್ ಸರಕಾರ ನೀರು ಬಿಡದೇ ವಾಟರ್ ಟ್ಯಾಕ್ಸ್ ಹಾಕಿದಾಗ ಅದನ್ನು ಖಂಡಿಸಿ, ರೈತರನ್ನು ಜಾಗೃತಿ ‌ಮೂಡಿಸಿ ಸ್ವಂತ ಬಲದ ಮೇಲೆ ಶಾಸಕರಾಗಿ ಆಯ್ಕೆಯಾದರು.1983 ರಲ್ಲಿ ಬಹಳ ದೊಡ್ಡ ಬದಲಾವಣೆ ಆದ ಪರಿಣಾಮ ಕಬ್ಬುಬೆಳೆಗಾರ ಸಂಘವನ್ನು ರೈತ ಸಂಘವನ್ನಾಗಿ ಮಾಡಿದರು’ ಎಂದರು.

‘ಮಾತಿಗೆ ಮಾತು ಹಾಕಿ ಸುಳ್ಳು ರಾಜಕಾರಣ ಮಾಡುವವರನ್ನು ನೀವು ಪ್ರಶ್ನೆ ‌ಮಾಡಬೇಕು. ಈ ಹೋರಾಟದಿಂದ ಬಂದ ರಾಜಕಾರಣ ಇಂದು ಇಷ್ಟು ದೊಡ್ಡ ಮಟ್ಟಿಗೆ ಬೆಳೆದು ನಿಂತಿದೆ. ರೈತರಿಗೆ ಇಂದು ವರ್ಷಕ್ಕೆ 4 ಸಾವಿರ ಕೋಟಿ ನೀಡುತ್ತ ಬಂದಿದೆ. ಯಡಿಯೂರಪ್ಪ ಅವರು ಎಲ್ಲ ವರ್ಗದ ಜನರ ಮಾಸಾಶನ ನೀಡುವ ಯೋಜನೆ ಬಡವರ ಪರವಾಗಿ ಜಾರಿಗೆ ತಂದರು. ಹೆಣ್ಣು ಮಕ್ಕಳು ಹುಟ್ಟಿದರೆ ಶಾಪ ಎನ್ನುವ ಕಾಲದಲ್ಲಿ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದರು. ಅಂದು ಯಡಿಯೂರಪ್ಪ ಅವರು ಕೊಟ್ಟ ಸೈಕಲ್‌ ನಲ್ಲಿ ಶಾಲೆಗೆ ಹೊದವರು ಇಂದು ದೊಡ್ಡವರಾಗಿದ್ದು, ಅವರು ಯಾರಿಗೆ ಮತ ನೀಡುತ್ತಾರೆ? ಇಲ್ಲಿ ಇದೇ ನಿಮಗೆ ಉತ್ತರ ನೋಡಿ’ ಎಂದರು.

‘ಸ್ವಾತಂತ್ರ್ಯ ಬಂದ ಮೇಲೆ ಪಡಿತರದಲ್ಲಿ ಅಕ್ಕಿ ಕೊಟ್ಟಿಲ್ಲ, ಇವರು ಬಂದ ಮೇಲೆ ಕೊಟ್ಟಂತೆ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಪಡಿತರದಲ್ಲಿ ಒಂದು ಕೆಜಿ ಅಕ್ಕಿಗೆ 29 ರೂ ನೀಡುವುದು ಕೇಂದ್ರ ಸರಕಾರ, ಮೂರು ರೂಪಾಯಿ ಕೊಟ್ಟು ಪೋಟೋ ಹಾಕಿಸಿಕೊಂಡರು. 30 ಕೆ.ಜಿಯನ್ನು 7 ಕೆ.ಜಿಗೆ ತಂದರು. ಮಧ್ಯದಲ್ಲಿ ಚುನಾವಣೆ ಬಂದಾಗ 4 ಕೆ.ಜಿ.ಗೆ ತಂದು ಇಟ್ಟಿದ್ದರು. ಅವರು ತಂದ ಭಾಗ್ಯದ ಯೋಜನೆಗಳು ಬಾಗಿಲು ಮುಟ್ಟಿಲ್ಲ ಎಂದು ಅವರನ್ನು ಮನೆಗೆ ಕಳುಹಿಸಿದರು. ಈ ಕ್ಷೇತ್ರದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಎಂದರೆ ಏನು ಎನ್ನುವುದನ್ನು ಯಡಿಯೂರಪ್ಪ ಹಾಗೂ ಸಿ.ಎಂ.ಉದಾಸಿ ತೋರಿಸಿಕೊಟ್ಟಿದ್ದಾರೆ’ ಎಂದರು.

Advertisement

‘ಈ ಬಾರಿ ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಬಾಳಂಬೀಡ – ಹೀರೇಕೌಂಶಿ ಏತನೀರಾವರಿ ಯೋಜನೆಯನ್ನು ‌ನೀಡಿದ್ದಾರೆ. ಹೊಂಕಣ, ತಿಳವಳ್ಳಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಡಿಸೆಂಬರ್ ಕೊನೆಗೆ ಈ ಎಲ್ಲಾ ಯೋಜನೆಗಳು ಪೂರ್ಣಗೊಳ್ಳಲಿವೆ. ಬರುವ ವರ್ಷದಲ್ಲಿ 2500 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಾಗುತ್ತಿದೆ. ಮುಂದಿನ ದಿನಗಳಲ್ಲಿ 5000 ಹೆಕ್ಟೇರ್ ಬೆಳೆ ಬೆಳೆಯಲು ಯೋಜನೆ ರೂಪಿಸಲಾಗುವುದು’ ಎಂದರು.

‘ನಮ್ಮ ಅಜೆಂಡಾ ಅಭಿವೃದ್ಧಿ, ಅಭಿವೃದ್ಧಿಯಾಗಿದೆ. ಹಣದ ಬಲದಿಂದ ಜನರು ಓಟು ಹಾಕುವುದಿಲ್ಲ, ಸೋಲುವ ಭಯದಿಂದ ಅವರು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಮೊದಲು ಇಂತಹ ಹೇಳಿಕೆ ನೀಡುವ ಮುಂಚೆ ಗುಂಡ್ಲುಪೇಟೆ, ಕುಂದಗೋಳ ಚುನಾವಣೆ ಹೇಗೆ ಮಾಡಿದರು ಎಂದು ನೆನಪು ‌ಮಾಡಿಕೊಳ್ಳಲಿ’ ಎಂದರು.

‘ನಿಮ್ಮ ಮತಕ್ಕೆ ಹೂವು ತರುತ್ತೇವೆ, ಹುಲ್ಲು ತರುವುದಿಲ್ಲ. ಮಾನವಿಯತೆಯಿಂದ ಕೊಟ್ಟಿರುವ ಕಿಟ್ ಗಳನ್ನು ಈ ಸಮಯದಲ್ಲಿ ಬಂಡವಾಳ ಮಾಡಿಕೊಂಡಿರುವ ಇವರು ಮುಂದಿನ ದಿನಗಳಲ್ಲಿ ಮತ್ತೆ ಏನೇನಕ್ಕೂ ಬಂಡವಾಳ ಮಾಡಿಕೊಳ್ಳಬಹುದು ಎಂದು ಈ ಕ್ಷೇತ್ರದ ಜನರು ಯೋಚಿಸಬೇಕು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next