ಕುಷ್ಟಗಿ :‘ಕಳೆದ 20 ವರ್ಷಗಳ ಹಿಂದೆ ಬಿಜೆಪಿ ಪಕ್ಷವು ಕೇವಲ ನಗರಗಳಿಗೆ ಸೀಮಿತವಾದ ಪಕ್ಷವಾಗಿತ್ತು. ಅದನ್ನು ಪ್ರತಿ ಹಳ್ಳಿಗಳಿಗೂ ತಲುಪಿಸಿದ ಕೀರ್ತಿ ಯಡಿಯೂರಪ್ಪ ನವರಿಗೆ ಸಲ್ಲುತ್ತದೆ’ ಎಂದು ಗುರುವಾರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಕುಷ್ಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ ,’ಪಂಜಾಬ್ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಇಬ್ಭಾಗವಾದಂತೆ ಕರ್ನಾಟಕದಲ್ಲೂ ಒಡೆದು ಹೋಗಿ ಮೂಲೆಗುಂಪಾಗುವದರಲ್ಲಿ ಯಾವುದೇ ಅನುಮಾನವಿಲ್ಲ. ಸಿಂದಗಿ ಮತ್ತು ಹಾನಗಲ್ ಉಪ ಚುನಾವಣೆಯಲ್ಲಿ ಆ ಕ್ಷೇತ್ರಗಳ ಪ್ರಜ್ಞಾವಂತ ಮತದಾರರು ತಮ್ಮ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿ ಪಕ್ಷಕ್ಕೆ ಆಶೀರ್ವಾದ ಮಾಡುತ್ತಾರೇನ್ನುವ ವಿಶ್ವಾಸವಿದೆ’ ಎಂದರು.
‘ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರದಲ್ಲಿ ಶಾಸಕರುಗಳು ಸಚಿವ ಸ್ಥಾನಕ್ಕಾಗಿ ಬಂಡಾಯ ಏಳುವ ಪ್ರಶ್ನೆಯೇ ಇಲ್ಲ. ಮುಖ್ಯ ಮಂತ್ರಿಗಳು ಎಲ್ಲರನ್ನೂ ಸರಿದೂಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರುಗಳಿಗೆ ಜನರ ಮುಂದೆ ತಮ್ಮ ಸಾಧನೆಗಳನ್ನು ಹೇಳಿಕೊಳ್ಳಲು ಏನು ಉಳಿದುಕೊಂಡಿಲ್ಲ. ಹಾಗಾಗಿ ಕಾಂಗ್ರೆಸ್ ಪಕ್ಷದವರು ಮಾನ್ಯ ಪ್ರಧಾನ ಮಂತ್ರಿ ಯವರ ಮೇಲೆ ಹಾಗೂ ಜೆಡಿಎಸ್ ಪಕ್ಷದವರುಆರ್ ಎಸ್ಎಸ್ ಮೇಲೆ ವಿನಾಕಾರಣ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ’ ಎಂದರು.
‘ಕಾಂಗ್ರೆಸ್ ಪಕ್ಷದವರಿಗೆ ಮಾತನಾಡಲು ಯಾವುದೇ ನೈತಿಕತೆಯಿಲ್ಲ. ವಿನಾಕಾರಣ ಚುನಾವಣಾ ಸಂದರ್ಭದಲ್ಲಿ ಹಾಗೂ ದೇಶದಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ಹತಾಶೆಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಇನ್ನಿತರ ಕಾಂಗ್ರೆಸ್ ಮುಖಂಡರುಗಳು ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಿರುವುದರಿಂದ ಅವರೇನು ದೊಡ್ಡ ಮನುಷ್ಯರಾಗುವದಿಲ್ಲ, ಅವರಿಗೆ ಶೋಭೆ ತರುವುದಿಲ್ಲ’ ಎಂದರು.
‘ಐಟಿ ಯವರು ಯಾರಿಗೆ ದಾಳಿ ಮಾಡಬೇಕು, ಯಾವಾಗ ದಾಳಿ ಮಾಡಬೇಕು ಎಂಬುದು ಅವರ ವಿವೇಚನೆಗೆ ಬಿಟ್ಟಿದ್ದು. ಯಡಿಯೂರಪ್ಪ ಆಪ್ತರ ಮನೆ ಮೇಲೆ ಐಟಿ ದಾಳಿ ಮಾಡಿರುವುದಕ್ಕೂ ಯಡಿಯೂರಪ್ಪನವರಿಗೂ ಯಾವುದೇ ಸಂಬಂಧವಿಲ್ಲ’ ಎಂದರು.