Advertisement

“ಯಡಿಯೂರಪ್ಪ ಬಿಜೆಪಿಗೆ ಬೇಡವಾದ ಶಿಶು’

11:35 PM Sep 01, 2019 | Lakshmi GovindaRaj |

“ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಿಜೆಪಿಗೆ ಬೇಡವಾದ ಶಿಶು’ ಎಂಬ ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಸಿದ್ದು ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ , ಬಿಎಸ್‌ವೈ ವಿರುದ್ಧ ಟೀಕೆ ಮಾಡುವುದಕ್ಕೂ ಮೊದಲು ಕಾಂಗ್ರೆಸ್‌ ಪಕ್ಷದಲ್ಲಿ ತಮ್ಮ ಸ್ಥಾನ ಏನಿದೆ ಎಂಬುದನ್ನು ಸಿದ್ದರಾಮಯ್ಯ ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ. ಇದೇ ವೇಳೆ, ಸಿದ್ದು ಹೇಳಿಕೆಗೆ ಕಿಡಿ ಕಾರಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ, “ಸಿದ್ದರಾಮಯ್ಯನವರೇ, ನನಗೂ ಕೆಟ್ಟ ಭಾಷೆ ಬಳಸೋದು ಗೊತ್ತು. ಮೋದಿ, ಯಡಿಯೂರಪ್ಪ ವಿರುದ್ಧ ವೈಯಕ್ತಿಕ ಟೀಕೆ ಮಾಡೋದನ್ನು ಬಿಡಿ ಎಂದು ಕಿಡಿಕಾರಿದ್ದಾರೆ. ನಾಯಕರ ನಡುವಿನ ವಾಗ್ಧಾಳಿಯ ಪರಿ ಇಲ್ಲಿದೆ.

Advertisement

ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ: ಸಿದ್ದು
ಮೈಸೂರು: “ಯಡಿಯೂರಪ್ಪ ಬಿಜೆಪಿಗೆ ಬೇಡವಾದ ಶಿಶು’ ಎಂದು ಪುನರುಚ್ಚರಿಸಿರುವ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, 20 ದಿನ ಬಿ.ಎಸ್‌.ಯಡಿ ಯೂರಪ್ಪ ಒಬ್ಬರೇ ಸರ್ಕಾರದಲ್ಲಿದ್ದರು. ಈಗ 17 ಜನ ಸಚಿವರಾದರೂ ಪೂರ್ಣಪ್ರಮಾಣ ದಲ್ಲಿ ಸರ್ಕಾರ ಇಲ್ಲ. ಹೀಗಿರುವಾಗ ಟೇಕಾಫ್ ಸರ್ಕಾರ ಹೇಗಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಭಾನುವಾರ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಂತ್ರಸ್ತರ ಅಹವಾಲು ಆಲಿಸಿದರು.

ಈ ವೇಳೆ, ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದಲ್ಲಿ ಸುಭದ್ರ ಸರ್ಕಾರ ಇದ್ದರೆ ತಾನೇ ಟೇಕಾಫ್ ಆಗೋದು. ಪ್ರಜಾಪ್ರಭುತ್ವದ ಆಶಯವನ್ನು ಗಾಳಿಗೆ ತೂರಿ ಅಧಿಕಾರಕ್ಕೆ ಬಂದ ಬಿಜೆಪಿಯಿಂದ ಯಾವ ಕೆಲಸವೂ ಆಗುತ್ತಿಲ್ಲ. ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ. 20 ದಿನ ಬಿ.ಎಸ್‌.ಯಡಿಯೂರಪ್ಪ ಒಬ್ಬರೇ ಸರ್ಕಾರದಲ್ಲಿದ್ದರು. ಈಗ 17 ಜನ ಸಚಿವರಾದರೂ ಪೂರ್ಣ ಪ್ರಮಾಣದಲ್ಲಿ ಸರ್ಕಾರ ಇಲ್ಲ. ಹೀಗಿರುವಾಗ ಟೇಕಾಫ್ ಸರ್ಕಾರ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.

ಉಪಚುನಾವಣೆಗೆ ನಾವು ರೆಡಿ: ರಾಜ್ಯದ 17 ಕ್ಷೇತ್ರಗಳಿಗೆ ಯಾವುದೇ ಕ್ಷಣ ದಲ್ಲಿ ಉಪ ಚುನಾವಣೆ ನಡೆದರೂ ಎದು ರಿಸಲು ನಾವು ತಯಾರಿದ್ದೇವೆ. ಹುಣ ಸೂರು ಕ್ಷೇತ್ರಕ್ಕೆ ಎಚ್‌.ಸಿ.ಮಹದೇವಪ್ಪ ನೇತೃತ್ವದ ಸಮಿತಿ ರಚನೆ ಮಾಡಲಾಗಿದೆ. ಚುನಾವಣೆ ಯಾವಾಗ ಬಂದರೂ ನಾವು ರೆಡಿಯಾಗಿ ಇರಬೇಕು. ಅದಕ್ಕಾಗಿ ಎಲ್ಲಾ ಕ್ಷೇತ್ರಗಳಿಗೂ ಉಸ್ತುವಾರಿಯನ್ನು ನಿಯೋಜಿಸಲಾಗಿದೆ. ಚುನಾವಣೆಯಲ್ಲಿ ಮೈತ್ರಿ ವಿಚಾರ ಬಗ್ಗೆ ಹೈಕಮಾಂಡ್‌ ತೀರ್ಮಾನ ಮಾಡುತ್ತದೆಯೇ ಹೊರತು ಈ ಬಗ್ಗೆ ನಾನೇನೂ ಹೇಳಲಾರೆ ಎಂದರು.

ಉತ್ತರ ಕರ್ನಾಟಕದಲ್ಲಿ ನೆರೆಯಿಂದ ಜನ ಮನೆ, ಮಠ, ಬಟ್ಟೆ ಸೇರಿ ಸಂಪೂರ್ಣ ದಾಖಲೆ ಕಳೆದುಕೊಂಡಿದ್ದಾರೆ. ತೊಟ್ಟಿದ್ದ ಬಟ್ಟೆಯಲ್ಲೇ ಮನೆ ಬಿಟ್ಟು ಬಂದಿದ್ದಾರೆ. ಅವರಿಗೆ ನೆಪ ಮಾತ್ರಕ್ಕೆ ಹತ್ತು ಸಾವಿರ ರೂ.ಪರಿಹಾರ ಕೊಟ್ರೆ ಸಾಕಾ? ತಕ್ಷಣವೇ ಒಂದು ಲಕ್ಷ ರೂಪಾಯಿ ಪರಿಹಾರ ಕೊಡಬೇಕು.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Advertisement

ಕಾಂಗ್ರೆಸ್‌ನಲ್ಲಿ ಸಿದ್ದುಗೆ ಯಾವ ಸ್ಥಾನ?
ಹುಬ್ಬಳ್ಳಿ: “ಯಡಿಯೂರಪ್ಪ ಬಿಜೆಪಿಗೆ ಬೇಡವಾದ ಶಿಶು’ ಎನ್ನುವುದಕ್ಕೂ ಮೊದಲು ಕಾಂಗ್ರೆಸ್‌ ಪಕ್ಷದಲ್ಲಿ ತಮ್ಮ ಸ್ಥಾನ ಏನಿದೆ ಎಂಬುದನ್ನು ಸಿದ್ದರಾಮಯ್ಯ ತಿಳಿದುಕೊಳ್ಳಲಿ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ತಿರುಗೇಟು ನೀಡಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲು ಅವರ ಹೈಕಮಾಂಡ್‌ ಮನಸ್ಸು ಮಾಡುತ್ತಿಲ್ಲ. ಈ ಬಗ್ಗೆ ಕಾಂಗ್ರೆಸ್‌ನಲ್ಲಿ ಸಾಕಷ್ಟು ಗೊಂದಲಗಳಿವೆ.

ಡಾ| ಜಿ.ಪರಮೇಶ್ವರ್‌, ಡಿ.ಕೆ.ಶಿವಕುಮಾರ್‌ ಸೇರಿದಂತೆ ಇನ್ನೂ ಅನೇಕರ ಹೆಸರು ಈ ಹುದ್ದೆಗೆ ಓಡುತ್ತಿವೆ. ವಿಧಾನಸಭೆಯಲ್ಲಿ ವಿಪಕ್ಷ ನಾಯಕನ ಆಯ್ಕೆ ಮಾಡುವುದಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ಗೆ ಸಾಧ್ಯವಾಗದ ಸ್ಥಿತಿ ಇದೆ. ಇದರಿಂದ ಕಾಂಗ್ರೆಸ್‌ ಸ್ಥಿತಿ ಎಲ್ಲಿಗೆ ಬಂದಿದೆ ಎಂಬುದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಲಿ. ನಮ್ಮ ಹೈಕಮಾಂಡ್‌ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ.

ಈಗಾಗಲೇ ಅವರು ಕೆಲಸ ಆರಂಭಿಸಿದ್ದಾರೆ. “ಯಡಿಯೂರಪ್ಪ ಬಿಜೆಪಿಗೆ ಬೇಡವಾದ ಶಿಶು’ ಎನ್ನುವುದರಲ್ಲಿ ಅರ್ಥವಿಲ್ಲ. ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಅಷ್ಟೊಂದು ಪ್ರಾಮುಖ್ಯತೆ ಕೊಡಬೇಕಾಗಿಲ್ಲ ಎಂದರು. ಪಕ್ಷದ ಸಂಘಟನೆ ಸೇರಿದಂತೆ ಹಲವು ಕಾರಣಗಳಿಂದ ಮೂರು ಉಪಮುಖ್ಯಮಂತ್ರಿಗಳನ್ನು ಮಾಡಿರುವುದು ನಮ್ಮ ಪಕ್ಷದ ನಿರ್ಧಾರ. ಇದೊಂದು ಆಂತರಿಕ ವಿಷಯ. ಸಿದ್ದರಾಮಯ್ಯನವರು ತಾವು ಹಿಂದೆ ಉಪ ಮುಖ್ಯಮಂತ್ರಿಯಾಗಿದ್ದನ್ನು ಮರೆಯಬಾರದು ಎಂದು ಹೇಳಿದರು.

ನನಗೂ ಕೆಟ್ಟ ಭಾಷೆ ಬಳಸೋದು ಗೊತ್ತು
ಶಿವಮೊಗ್ಗ: “ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಪ್ರಧಾನಿ ಮೋದಿ ವಿರುದ್ಧ ಸಿದ್ಧರಾಮಯ್ಯ ಬಳಸುತ್ತಿರುವ ಭಾಷೆ ಸರಿಯಿಲ್ಲ. ನನಗೂ ಕೆಟ್ಟ ಭಾಷೆ ಬಳಸುವುದು ಗೊತ್ತಿದೆ. ಸಿದ್ಧರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಎಂದು ಸುಮ್ಮನಿದ್ದೇನೆ. ಇಲ್ಲವಾದಲ್ಲಿ ಅವರ ವಿರುದ್ಧವೂ ಕೆಟ್ಟ ಭಾಷೆ ಬಳಸುತ್ತಿದ್ದೆ. ನಾನು ಅದನ್ನೆಲ್ಲ ಅದುಮಿಟ್ಟುಕೊಂಡಿದ್ದೇನೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, “ಸಿದ್ದರಾಮಯ್ಯನವರಲ್ಲಿ ನಾನು ವೈಯಕ್ತಿಕವಾಗಿ ಪ್ರಾರ್ಥನೆ ಮಾಡುತ್ತೇನೆ. ವಿರೋಧ ಪಕ್ಷದಲ್ಲಿದ್ದು ಅವಶ್ಯವಿದ್ದಾಗ ಟೀಕೆ ಮಾಡಿ ತೊಂದರೆ ಇಲ್ಲ. ಆದರೆ, ಪ್ರಧಾನಿ ಹಾಗೂ ಸಿಎಂ ಬಗ್ಗೆ ವೈಯಕ್ತಿಕ ಟೀಕೆ ಮಾಡುವುದು ಸರಿಯಿಲ್ಲ’ ಎಂದರು.

“ನರೇಂದ್ರ ಮೋದಿ ಕೋಮುವಾದಿ, ಕೊಲೆಗಡುಕ ಎನ್ನುತ್ತಾರೆ. ಸುಳ್ಳಿನ ಸರದಾರ ಎಂದು ಹಗುರವಾದ ಪದ ಬಳಕೆ ಮಾಡುತ್ತಿದ್ದಾರೆ. ಯಡಿಯೂರಪ್ಪನವರಿಗೆ ಹಸಿರು ಶಾಲು ಹಾಕಿಕೊಳ್ಳುತ್ತಾರೆ, ನಾಚಿಕೆ ಆಗಲ್ವ ಎಂದೆಲ್ಲ ಟೀಕೆ ಮಾಡುತ್ತಾರೆ. ಸಿದ್ದರಾಮಯ್ಯನವರ ಭಾಷೆ ಸರಿ ಇಲ್ಲ. ಇಡೀ ಪ್ರಪಂಚ ಮೆಚ್ಚಿದ ವ್ಯಕ್ತಿಯಾಗಿರುವ ಮೋದಿಯವರ ಬಗ್ಗೆ ಹಗುರವಾದ ಮಾತುಗಳು ಸಲ್ಲದು. ರೈತ ನಾಯಕ ರಾಗಿರುವ ಯಡಿಯೂರಪ್ಪ, ರೈತರ ಪರವಾಗಿ ಹಲವಾರು ಹೋರಾಟ ಮಾಡಿ ಈ ಮಟ್ಟಕ್ಕೆ ಬಂದವರು ಎಂಬುದನ್ನು ಸಿದ್ದರಾಮಯ್ಯ ಮರೆಯ ಬಾರದು’ ಎಂದರು.

ರಾಜ್ಯದಲ್ಲಿ ಅನೇಕ ಕಡೆ ಈ ಬಾರಿ ಪ್ರವಾಹ ಬಂದು ಅಪಾರ ಹಾನಿಯಾಗಿದ್ದು, ಹಿಂದೆ ಯಾವುದೇ ಸರ್ಕಾರ ನೀಡದ ರೀತಿಯಲ್ಲಿ ನಮ್ಮ ಸರ್ಕಾರ ಪರಿಹಾರ ನೀಡುತ್ತಿದೆ. ಪ್ರಧಾನಿ ಮೋದಿಯವರು ನಮ್ಮ ನಿರೀಕ್ಷೆ ಮೀರಿ ಪರಿಹಾರ ಬಿಡುಗಡೆ ಮಾಡುವ ಆಶಯ ಹೊಂದಿದ್ದೇವೆ. ಕೇಂದ್ರದಿಂದ ಅತಿ ಹೆಚ್ಚು ಅನುದಾನ ತರುವ ನಿರೀಕ್ಷೆಯಲ್ಲಿದ್ದೇವೆ. ನೆರೆ ವಿಚಾರದಲ್ಲಿ ದಯಮಾಡಿ ಯಾರೂ ರಾಜಕೀಯ ಮಾಡಬಾರದು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next