Advertisement

ತ್ರಿಕರಣ ಶುದ್ಧಿ ಅತೀವ ಯಶಸ್ಸಿಗೆ ಪ್ರೇರಕ: ಎಡನೀರು ಶ್ರೀ 

03:40 AM Jul 04, 2017 | Karthik A |

ಬೆಳ್ತಂಗಡಿ: ಶುದ್ಧ ಮನದಿಂದ, ನಿಸ್ವಾರ್ಥ ಭಾವದಿಂದ ಮಾಡುವ ಯಾವುದೇ ಕಾರ್ಯ ಭಗವಂತನ ಪ್ರೀತಿಗೆ ಪಾತ್ರವಾಗುತ್ತದೆ. ದೇವಾಲಯದ ಪುನರ್‌ ನಿರ್ಮಾಣದಂತಹ ಪುಣ್ಯ ಕಾರ್ಯದಲ್ಲಿ ಭಕ್ತ ಜನತೆಯ ಪಾಲ್ಗೊಳ್ಳುವಿಕೆಯಲ್ಲಿ ತ್ರಿಕರಣ ಶುದ್ಧಿ ಅತೀವ ಯಶಸ್ಸಿಗೆ ಪ್ರೇರಕವಾಗಲಿದೆ ಎಂದು ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು ತಿಳಿಸಿದರು. ಅವರು ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ 8 ಶತಮಾನಗಳ ಇತಿಹಾಸವನ್ನು ಹೊಂದಿರುವ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಪುನರ್‌ ನಿರ್ಮಾಣದ ಹಿನ್ನೆಲೆಯಲ್ಲಿ ನೂತನ ಗರ್ಭಗುಡಿಯ ಶಿಲಾನ್ಯಾಸವನ್ನು ನೆರವೇರಿಸಿ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

Advertisement

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ಪುರೋಹಿತ ಕೇಶವ ಜೋಗಿತ್ತಾಯ ಮಾತನಾಡಿ, ಮನದ, ಮನೆಯ, ಸಮಾಜದ ಶಾಂತಿ ಎಲ್ಲದಕ್ಕೂ ಭಗವಂತನೇ ಕಾರಣ. ಅವನನ್ನು ಸ್ಮರಿಸುವುದೇ ನಮ್ಮ ಕರ್ತವ್ಯ. ಅವನ ಸ್ಮರಣೆಗೆ ಅನುವು ಮಾಡಿಕೊಡುವುದೇ ದೇವಾಲಯಗಳ ಕಾರ್ಯ. ಅಂತಹ ದೇವಾಲಯಗಳ ನಿರ್ಮಾಣದಿಂದ ಸಮಾಜದಲ್ಲಿ ಉನ್ನತಿಯ ಬೆಳಕು ಪ್ರಕಾಶಮಾನವಾಗಿ ಗೋಚರಿಸಲಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ  ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಮಾತನಾಡಿ, ಸಮಾಜದಲ್ಲಿ ಶಕ್ತಿ ಕೇಂದ್ರವಾಗಿ ಕಾರ್ಯನಿರ್ವಹಿಸಬೇಕಾದರೆ ಸಮಾಜದ ಪ್ರತಿ ಮನೆಯೂ ದೇವಾಲಯದ ನಿರ್ಮಾಣದಲ್ಲಿ ಕೈಜೋಡಿಸಬೇಕು. ದೇವರ ಮುಂದೆ ಭಕ್ತರೆಲ್ಲರೂ ಅವನ ಮಕ್ಕಳೇ. ದೇವರಿಗಿಲ್ಲದ ಭೇದಭಾವ ನಮ್ಮೊಳಗೆ ಇರದಂತೆ ನೋಡಿಕೊಳ್ಳುವ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಶ್ರಮಿಸೋಣ ಎಂದರು ಕಾರ್ಯಕ್ರಮದಲ್ಲಿ ದೇಗುಲದ ಅಭಿವೃದ್ಧಿ ಸಲಹಾ ಸಮಿತಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ, ಉದ್ಯಮಿ ಸುರೇಂದ್ರನಾಥ ಆಳ್ವ, ದೇಗುಲದ ಆನುವಂಶೀಯ ಆಡಳಿತ ಮೊಕ್ತೇಸರ ಸುಂದರ ನೂರಿತ್ತಾಯ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಮನೋಹರ ಶೆಟ್ಟಿ ಬಾರ್ಯ, ಗೌರವಾಧ್ಯಕ್ಷ  ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಮೊದಲಾದವರು ಉಪಸ್ಥಿತರಿದ್ದರು. ಕ್ಷೇತ್ರದ ತಂತ್ರಿ ಕೆಮ್ಮಿಂಜೆ ನಾಗೇಶ್‌ ತಂತ್ರಿಗಳ ನೇತೃತ್ವದಲ್ಲಿ ಪವಿತ್ರಪಾಣಿ ಸೂರ್ಯನಾರಾಯಣ ಕುದ್ದಾಣಾಯ ಅವರ ಉಪಸ್ಥಿತಿಯಲ್ಲಿ ವೈದಿಕ ವಿಧಿವಿಧಾನಗಳು ನಡೆದು ಗರ್ಭಗುಡಿಯ ಶಿಲಾನ್ಯಾಸ ನೆರವೇರಿತು. ಕಾರ್ಯಕ್ರಮದಲ್ಲಿ ನವೀನ್‌ ರೈ, ಗುಣಾಕರ ಅಗ್ನಾಡಿ, ರಾಜೀವ ರೈ, ಮಂಜುನಾಥ ಸಾಲ್ಯಾನ್‌, ಭಾಸ್ಕರ್‌ ಬಾರ್ಯ, ರಾಜೇಶ್‌ ರಾವ್‌, ಹೇಮಾವತಿ, ಗುರುಪ್ರಸಾದ್‌, ಕೃಷ್ಣ ಮಣಿಯಾಣಿ, ರಮೇಶ್‌ ಕಜೆ, ಜಯಲಕ್ಷ್ಮೀ  ಮೊದಲಾದ ಪ್ರಮುಖರು ಭಾಗವಹಿಸಿದ್ದರು. ರಾಜೇಶ್‌ ರೈ ಕಾರ್ಯಕ್ರಮ ನಿರೂಪಿಸಿ, ಮನೋಹರ ಶೆಟ್ಟಿ ಸ್ವಾಗತಿಸಿದರು. ಸಮಿತಿ ಕಾರ್ಯದರ್ಶಿ ಗಣೇಶ್‌ ಪಿ. ವಂದಿಸಿದರು.

ಏಕತೆಯಿಂದ ದೇಗುಲ ಪುನರ್‌ ನಿರ್ಮಿಸಿ 
ಭಗವಂತನ ಅನುಗ್ರಹ ಇದೆ ಎಂದರೆ ಯಾವುದೇ ಕಾರಣಕ್ಕೂ ಸೋಲು ಎದುರಾಗದು. ಉತ್ತಮ ಕಾರ್ಯ ಮಾಡಲು ಸಂಕಲ್ಪ ತಾಳುವುದು ನಮ್ಮ ಪಾಲಿನ ಕರ್ತವ್ಯ. ಅಂತೆಯೇ ಅದರ ಅನುಷ್ಠಾನಕ್ಕೆ ಶ್ರಮಿಸುವುದು ನಮ್ಮ ಪಾಲಿನ ಕರ್ತವ್ಯ. ಅದರ ಫ‌ಲಿತಾಂಶ ಮಾತ್ರ ದೇವನ ಇಚ್ಛೆಯಂತೆಯೇ ಆಗಿರುವುದರಿಂದ ಉತ್ತಮ ಧ್ಯೇಯೋದ್ದೇಶದಿಂದ ಗ್ರಾಮದ ಎಲ್ಲರೂ ಒಗ್ಗೂಡಿ ಏಕತಾ ಭಾವದಿಂದ ದೇವಾಲಯದ ಪುನರ್‌ ನಿರ್ಮಾಣಕ್ಕೆ ಶ್ರಮಿಸಿ. ಅತ್ಯುತ್ತಮ ಯಶಸ್ಸನ್ನು ನಿಮ್ಮದಾಗಿಸಿಕೊಳ್ಳಿ.
– ಎಡನೀರು ಶ್ರೀ 

Advertisement

Udayavani is now on Telegram. Click here to join our channel and stay updated with the latest news.

Next