ಹಾವೇರಿ: ಜಿಲ್ಲಾದ್ಯಂತ ಸೋಮವಾರ 1ರಿಂದ 10ನೇ ತರಗತಿಯ ಶಾಲೆಗಳು ಆರಂಭಗೊಂಡಿದ್ದು, ತಳಿರು ತೋರಣ, ರಂಗೋಲಿಗಳಿಂದ ಸಿಂಗರಿಸಿದ್ದ ಶಾಲೆಗಳತ್ತ ಮಕ್ಕಳು ಸಂಭ್ರಮದಿಂದ ಹೆಜ್ಜೆಹಾಕಿದರು.
ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಶೈಕ್ಷಣಿಕ ವಾತಾವರಣ ಕಳೆಕುಂದಿತ್ತು. ಈ ಬಾರಿ ಕೊರೊನಾ ನೇಪಥ್ಯಕ್ಕೆ ಸರಿದಿದ್ದು, ಶಾಲಾ ಆವರಣ ಲವಲವಿಕೆಯಿಂದ ಕೂಡಿತ್ತು. ಕೆಲವು ಶಾಲೆಗಳಲ್ಲಿ ಶಿಕ್ಷಕರು ಸಿಹಿ ವಿತರಣೆ, ಪುಷ್ಪಗುಚ್ಛ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.
ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಸುಮಾರು 2 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದು, ಒಟ್ಟು 1160 ಪ್ರಾಥಮಿಕ ಹಾಗೂ 141 ಪ್ರೌಢಶಾಲೆಗಳು ಸೇರಿದಂತೆ 1301 ಶಾಲೆಗಳಿವೆ. ಮೊದಲ ದಿನ ಜಿಲ್ಲೆಯಲ್ಲಿ ಶೇ.25-30 ಮಕ್ಕಳು ಶಾಲೆಗೆ ಹಾಜರಾಗಿದ್ದು, ಮಳೆಬಿಲ್ಲು ಕಾರ್ಯಕ್ರಮದಡಿ ಚಟುವಟಿಕೆಗಳೊಂದಿಗೆ ಶಿಕ್ಷಕರು ಬೋಧನೆ ಆರಂಭಿಸಿದ್ದಾರೆ ಎಂದು ಡಿಡಿಪಿಐ ಬಿ.ಎಸ್. ಜಗದೀಶ್ವರ ತಿಳಿಸಿದರು.
ಹಬ್ಬದ ಸಂಭ್ರಮ: ಸರ್ಕಾರಿ ಶಾಲೆಗಳು ಸೇರಿದಂತೆ ಖಾಸಗಿ ಶಾಲೆಗಳಲ್ಲಿ ಮಕ್ಕಳ ಕಲರವ ಮರುಕಳಿಸಿದೆ. ಹಂದಿಗನೂರ ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ಹಬ್ಬದ ಸಂಭ್ರಮ ಕಂಡುಬಂದಿತು. ಶಿಕ್ಷಕರು ಶಾಲೆಯನ್ನು ಬಣ್ಣ ಬಣ್ಣದ ರಂಗೋಲಿ, ತಳಿರು ತೋರಣಗಳಿಂದ ಶೃಂಗರಿಸಿದ್ದರು. ವಿದ್ಯಾರ್ಥಿಗಳಿಗೆ ಪೆನ್ನು ವಿತರಿಸುವ ಮೂಲಕ ಸ್ವಾಗತ ಕೋರಲಾಯಿತು. ಹೊಸರಿತ್ತಿಯ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಅಕ್ಷರ ಮಾಲೆಯನ್ನು ಹಾಕಿ ಸ್ವಾಗತಿಸಿದರು.
ನಗರ ಕೆಲವು ಶಾಲೆಗಳಲ್ಲಿ ಸರಸ್ವತಿ-ಗಣೇಶ ಭಾವಚಿತ್ರಗಳಿಗೆ ಪೂಜೆ ಮಾಡಿ ಶಾಲೆ ಆರಂಭಕ್ಕೆ ಮುನ್ನುಡಿ ಹಾಡಿದರು. ಹೂ ನೀಡಿ ಸ್ವಾಗತ-ಬಿಸಿಯೂಟದಲ್ಲಿ ಸಿಹಿ: ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಿಹಿ, ಗುಲಾಬಿ ಹೂ ನೀಡಿ ಶಾಲೆಗೆ ಬರಮಾಡಿಕೊಳ್ಳಲಾಯಿತು. ಎಸ್‌ಡಿಎಂಸಿ ಎಲ್ಲ ಸದಸ್ಯರು ಹಾಗೂ ಪೋಷಕರು ಪಾಲ್ಗೊಂಡು ಮಕ್ಕಳಿಗೆ ಶುಭ ಕೋರಿದರು. ಶಾಲಾ ಆರಂಭೋತ್ಸವದ ದಿನದಿಂದಲೇ ವಿದ್ಯಾರ್ಥಿಗಳಿಗೆ ಬಿಸಿಯೂಟ ವಿತರಣೆಗೆ ಕ್ರಮ ಕೈಗೊಳ್ಳಲಾಗಿತ್ತು.
ಮೊದಲ ದಿನ ವಿದ್ಯಾರ್ಥಿಗಳಿಗೆ ಬಿಸಿಯೂಟದಲ್ಲಿ ಸಿಹಿ ವಿತರಿಸುವಂತೆ ಎಲ್ಲ ಶಾಲೆಗಳ ಮುಖ್ಯೊಪಾಧ್ಯಾಯರಿಗೆ ಸೂಚನೆ ನೀಡಿದ್ದರಿಂದ ಹೋಳಿಗೆ, ಕಡ್ಲಿಬೆಳೆ ಪಾಯಸ, ಜಿಲೇಬಿ, ಗೋದಿ ಹುಗ್ಗಿ ಸೇರಿದಂತೆ ವಿವಿಧ ಸಿಹಿ ಪದಾರ್ಥಗಳನ್ನು ಉಣ ಬಡಿಸಲಾಯಿತು. ಈಗಾಗಲೇ ಬಿಸಿಯೂಟಕ್ಕೆ ಬೇಕಾದ ಅಕ್ಕಿ, ಬೆಳೆ, ಬೆಲ್ಲ, ಎಣ್ಣೆ ಸೇರಿದಂತೆ ಎಲ್ಲ ಸಾಮಗ್ರಿಗಳನ್ನು ಶಾಲೆಗಳಿಗೆ ವಿತರಿಸಲಾಗಿದ್ದು, ಯಾವುದೇ ಸಾಮಗ್ರಿಗಳು ಕೊರತೆ ಆಗದಂತೆ ನೋಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.