Advertisement

ವರ್ಷ ಕಳೆದರೂ ಮೇಲ್ದರ್ಜೆಗೇರದ ಆಸ್ಪತ್ರೆ

11:36 PM Dec 13, 2019 | Lakshmi GovindaRaj |

ಹನೂರು: ಸುಳ್ವಾಡಿ ಕಿಚ್ಚುಗುತ್ತು ಮಾರಮ್ಮ ದೇವಾಲಯದ ವಿಷಪ್ರಸಾದ ಪ್ರಕರಣದ ವೇಳೆ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಸುಳ್ವಾಡಿ ಗ್ರಾಮದ ಆಸ್ಪತೆಯನ್ನು ಮೇಲ್ದರ್ಜೆಗೇರಿಸುವುದು ಸೇರಿದಂತೆ ಆಸ್ಪತ್ರೆಗೆ ಅವಶ್ಯಕವಾದ ಎಲ್ಲಾ ಸವಲತ್ತು ಕಲ್ಪಿಸುವ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದರಾದರೂ ಯಾವುದೂ ಸಹ ಕಾರ್ಯರೂಪಕ್ಕೆ ಬಾರದೆ ಇರುವುದು ಈ ಭಾಗದ ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.

Advertisement

ಡಿ.14 2018ರ ಸುಳ್ವಾಡಿ ವಿಷಪ್ರಸಾದ ಪ್ರಕರಣದಲ್ಲಿ ಮೊದಲು ಸಂತ್ರಸ್ತರ ನೆರವಿಗೆ ಧಾವಿಸಿದ್ದು ಸುಳ್ವಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ. ದೇವಾಲಯದಲ್ಲಿ ಪ್ರಸಾದ ಸೇವಿಸಿ ಅಸ್ವಸ್ಥರಾದ ಕೂಡಲೇ 74 ಜನ ಅಸ್ವಸ್ಥರು ಆಸ್ಪತ್ರೆಗೆ ಆಗಮಿಸಿದರು.

ಕೂಡಲೇ ಈ ಸಂಬಂಧ ಆರೋಗ್ಯ ಇಲಾಖೆ ಜಿಲ್ಲಾ ವೈದ್ಯಾಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು, ತುರ್ತು ಆ್ಯಂಬುಲೆನ್ಸ್‌ ಸೇವೆಗೆ ಮಾಹಿತಿ ನೀಡಿ ಅಸ್ವಸ್ಥರನ್ನು ವಿವಿಧ ಆಸ್ಪತ್ರೆಗಳಿಗೆ ರವಾನಿಸಿ ಅಸ್ವಸ್ಥರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ರಸ್ತೆಯಲ್ಲಿ ತೆರಳುವ ವಾಹನಗಳು, ದ್ವಿಚಕ್ರ ವಾಹನಗಳು ಸೇರಿದಂತೆ ಖಾಸಗಿ ವಾಹನಗಳಲ್ಲಿ ಅಸ್ವಸ್ಥರನ್ನು ಕಾಮಗೆರೆಯ ಹೋಲಿಕ್ರಾಸ್‌ ಆಸ್ಪತ್ರೆ ಮತ್ತು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗಳಿಗೆ ರವಾನಿಸಲು ಕ್ರಮವಹಿಸಿದ್ದರು.

ಆಸ್ಪತ್ರೆ ಮೇಲ್ದರ್ಜೆಗೇರಿಸುವ ಭರವಸೆ: ಸುಳ್ವಾಡಿ ಪ್ರಕರಣದ ಬಳಿಕ ಮೃತರ ಕುಟುಂಬಸ್ಥರಿಗೆ ಮತ್ತು ಬಾಧಿತರಿಗೆ ಸಾಂತ್ವನ ತಿಳಿಸಲು ಬಿದರಹಳ್ಳಿ ಗ್ರಾಮಕ್ಕೆ ಆಗಮಿಸಿದ್ದ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಕಾಡಂಚಿನ ಗ್ರಾಮಗಳ ಸಂಪೂರ್ಣ ಮಾಹಿತಿ ಪಡೆದು ಈ ಭಾಗದ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸುಳ್ವಾಡಿ ಗ್ರಾಮದ ಆಸ್ಪತ್ರೆಯನ್ನು ಮೇಲ್ದರ್ಜೆರಿಸುವುದಾಗಿ ಭರವಸೆ ನೀಡಿ, ಸಿಬ್ಬಂದಿ ನೇಮಕಕ್ಕೂ ಕ್ರಮವಹಿಸುವ ಭರವಸೆ ನೀಡಿದ್ದರು.

ಈಡೇರದ ಬೇಡಿಕೆಗಳು: ಆದರೆ ಈ ಭರವಸೆ ಭರವಸೆಯಾಗಿಯೇ ಉಳಿದಿದ್ದು ಯಾವುದೇ ಬೇಡಿಕೆಗಳು ಈಡೇರಿಲ್ಲ. ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರವು ಕೇವಲ 7 ಹಾಸಿಗೆಗಳುಳ್ಳ ಕೇಂದ್ರವಾಗಿದ್ದು ಇಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳನ್ನು ಹೊರತುಪಡಿಸಿದರೆ ಶುಶ್ರೂಷಕಿ, ಪ್ರಯೋಗಾಲಯ ತಾಂತ್ರಿಕ ಅಧಿಕಾರಿ ಸೇರಿದಂತೆ ಎಲ್ಲರೂ ಕೂಡ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯಾಗಿದ್ದು ಇನ್ನೂ ಕೂಡ ಕಾಯಂ ಸಿಬ್ಬಂದಿ ನೇಮಕವಾಗಿಲ್ಲ.

Advertisement

ವೆಂಟಿಲೇಟರ್‌ ಆ್ಯಂಬುಲೆನ್ಸ್‌ ಸೇವೆಯಿಲ್ಲ: ಸುಳ್ವಾಡಿ ಪ್ರಕರಣದ ವೇಳೆ ಆ್ಯಂಬುಲೆನ್ಸ್‌ ಸೇವೆ ಸಮರ್ಪಕವಾಗಿ ದೊರೆಯಲಿಲ್ಲ, ಅದರಲ್ಲೂ ವೆಂಟಿಲೇಟರ್‌ ಸೌಕರ್ಯವುಳ್ಳ ಆ್ಯಂಬುಲೆನ್ಸ್‌ ಸೇವೆ ದೊರೆತಿದ್ದರೆ ಇನ್ನೂ ಉತ್ತಮ ಆರೋಗ್ಯ ಸೇವೆ ದೊರೆತು ಸಾವು ನೋವಿನ ಪ್ರಮಾಣವನ್ನು ಕಡಿಮೆ ಮಾಡಬಹುದಿತ್ತು ಎಂದು ಅಂದಿನ ಮುಖ್ಯಮಂತ್ರಿಗಳಿಗೆ ತಿಳಿಸಲಾಗಿತ್ತು.

ಈ ವೇಳೆ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಲೇ ಸುಳ್ವಾಡಿ, ಮಾರ್ಟಳ್ಳಿ ಸುತ್ತಮುತ್ತಲ ಗ್ರಾಮಗಳ ಸಾರ್ವಜನಿಕರ ಅನುಕೂಲಕ್ಕಾಗಿ ವೆಂಟಿಲೇಟರ್‌ ಸೌಕರ್ಯವುಳ್ಳ ಆ್ಯಂಬುಲೆನ್ಸ್‌ ಅನ್ನು ಸುಳ್ವಾಡಿ ಕೇಂದ್ರಕ್ಕೆ ಮಂಜೂರು ಮಾಡಿ ಇಲ್ಲಿಯೇ ಇರುವಂತೆ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದರು. ಆದರೆ ಈ ಭರವಸೆಯೂ ಕೂಡ ಭರವಸೆಯಾಗಿಯೇ ಉಳಿದಿದ್ದು ವೆಂಟಿಲೇಟರ್‌ ಆ್ಯಂಬುಲೆನ್ಸ್‌ಯಿರಲಿ ಕನಿಷ್ಠ ಸೌಕರ್ಯಗಳುಳ್ಳ ಆ್ಯಂಬುಲೆನ್ಸ್‌ ಅನ್ನು ಕೂಡ ಮಂಜೂರು ಮಾಡಿಲ್ಲ.

ಆ್ಯಂಬುಲೆನ್ಸ್‌ ಬೇಕಾದಲ್ಲಿ ಕನಿಷ್ಠ 45 ನಿಮಿಷ ಬೇಕು: ತಾಲೂಕಿನ ಕೌದಳ್ಳಿ, ಸುಳ್ವಾಡಿ, ಮಹದೇಶ್ವರ ಬೆಟ್ಟ 3 ಆರೋಗ್ಯ ಕೇಂದ್ರಗಳನ್ನು ಸೇರಿ ಒಂದು 108 ಆ್ಯಂಬುಲೆನ್ಸ್‌ ವಾಹನವನ್ನು ನೀಡಲಾಗಿದೆ. ಆದರೆ ಈ ವಾಹನ ಹೆಚ್ಚಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿಯೇ ಇರುವುದರಿಂದ ಒಂದೊಮ್ಮೆ ಯಾವುದಾದರೂ ಸಮಸ್ಯೆಗಳಾಗಿ ತುರ್ತು ಆ್ಯಂಬುಲೆನ್ಸ್‌ ಬೇಕಾದಲ್ಲಿ ಯಾವುದೇ ಆ್ಯಂಬುಲೆನ್ಸ್‌ ಸುಳ್ವಾಡಿ, ಮಾರ್ಟಳ್ಳಿ ಸುತ್ತಮುತ್ತಲ ಗ್ರಾಮಗಳಿಗೆ ತಲುಪಬೇಕಾದಲ್ಲಿ ಕನಿಷ್ಠ 45 ನಿಮಿಷಗಳ ಅವಶ್ಯಕತೆಯಿದೆ.

ಆದ್ದರಿಂದ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ಗಮನಹರಿಸಿ ನೀಡಿದ್ದ ಭರವಸೆಯಂತೆ ಎಲ್ಲಾ ಭರವಸೆಗಳನ್ನು ಈಡೇರಿಸಿ ಸಾರ್ವಜನಿಕರ ಆರೋಗ್ಯದ ಹಿತಕಾಯಲು ಮುಂದಾಗಬೇಕೆನ್ನುವುದು ಸಾರ್ವಜನಿಕರ ಒಕ್ಕೊರಲಿನ ಅಭಿಪ್ರಾಯವಾಗಿದೆ.

ಈಗಾಗಲೇ ರಾಮಪುರ ಗ್ರಾಮದ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದಜೆಗೇರಿಸುವುದರಿಂದ ಸುಳ್ವಾಡಿ ಆರೋಗ್ಯ ಕೇಂದ್ರವನ್ನು ಮೇಲ್ದಜೆಗೇರಿಸುವ ಯಾವುದೇ ಪ್ರಸ್ತಾವನೆ ಇಲ್ಲ. ವೆಂಟಿಲೇಟರ್‌ಯುಕ್ತ ಆ್ಯಂಬುಲೆನ್ಸ್‌ ಅನ್ನು ಹನೂರು ಭಾಗಕ್ಕೆ ನಿಯೋಜಿಸಲು ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ 2 ವೆಂಟಿಲೇಟರ್‌ ಅಳವಡಿಸಲು ಈಗಾಗಲೇ ಕ್ರಮವಹಿಸಲಾಗಿದೆ.
-ಡಾ.ರವಿ, ಜಿಲ್ಲಾ ಆರೋಗ್ಯಾಧಿಕಾರಿ

* ವಿನೋದ್‌ ಎನ್‌.ಗೌಡ

Advertisement

Udayavani is now on Telegram. Click here to join our channel and stay updated with the latest news.

Next