Middle East: ಮಧ್ಯ ಪ್ರಾಚ್ಯ ಪ್ರದೇಶ ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ವಾಣಿಜ್ಯಕವಾಗಿ ಮಹತ್ವದ್ದಾಗಿದ್ದು, ಇದು ಏಷ್ಯಾ ಮತ್ತು ಆಫ್ರಿಕಾ ದೇಶಗಳ ನಡುವಿನ ಸಂಪರ್ಕ ಸೇತುವಾಗಿದೆ. ಅಲ್ಲದೇ ಮಧ್ಯ ಪ್ರಾಚ್ಯ ಇಸ್ಲಾಂ, ಕ್ರೈಸ್ತ ಧರ್ಮ ಮತ್ತು ಯಹೂದಿ ಧರ್ಮಗಳ ಉಗಮ ಸ್ಥಾನವಾಗಿದೆ.
ಮಧ್ಯಪ್ರಾಚ್ಯ ಒಂದೆಡೆ ಸೌದಿ ಅರೇಬಿಯಾ, ಇರಾನ್, ಇರಾಕ್, ಇಸ್ರೇಲ್, ಜೋರ್ಡಾನ್, ಲೆಬನಾನ್, ಸಿರಿಯಾ, ಕುವೈಟ್, ಕತಾರ್ ಬಹ್ರೈನ್, ಯುಎಇ, ಓಮಾನ್ ದೇಶಗಳನ್ನು ಒಳಗೊಂಡಿದ್ದು, ಪಶ್ಚಿಮ ಏಷ್ಯಾದ ಭಾಗದಲ್ಲಿ ಯೆಮೆನ್, ಹೆಚ್ಚುವರಿಯಾಗಿ ಈಜಿಪ್ಟ್ ಉತ್ತರ ಆಫ್ರಿಕಾ ಭಾಗವನ್ನು ಹಂಚಿಕೊಂಡಿದೆ.
ಈ ಪ್ರದೇಶ ನಾಗರಿಕತೆಯ ತೊಟ್ಟಿಲು ಎಂದೇ ಬಿಂಬಿತವಾಗಿದ್ದು, ಪ್ರಮುಖ ಧರ್ಮಗಳ ಉಗಮ ಸ್ಥಾನವಾಗಿದೆ.ಇಲ್ಲಿನ ಶ್ರೀಮಂತವಾದ ಸಾಂಸ್ಕೃತಿಕ ಪರಂಪರೆಯು ಪ್ರಾಚೀನ ಸಾಮ್ರಾಜ್ಯಗಳಿಂದ ಆಧುನಿಕ ಕಾಲಘಟ್ಟದ ರಾಷ್ಟ್ರಗಳವರೆಗಿನ ಮಾನವ ಇತಿಹಾಸಕ್ಕೆ ಸಾಕ್ಷಿಯಾಗಿದೆ.
ಮಧ್ಯ ಪ್ರಾಚ್ಯ ರಾಷ್ಟ್ರಗಳು ಹಾಗೂ ಕೊಲ್ಲಿ ರಾಷ್ಟ್ರಗಳು ಹೆಚ್ಚಿನ ಪಾಲು ಇಸ್ಲಾಂ ಧರ್ಮವನ್ನು ಒಳಗೊಂಡ ರಾಷ್ಟ್ರಗಳಾಗಿವೆ. ಇವು ಏಷ್ಯಾ ಖಂಡದ ಪಶ್ಚಿಮ ಭಾಗದಲ್ಲಿನ ಅರೇಬಿಯನ್ ಸಮುದ್ರ, ಪರ್ಷಿಯನ್ ಗಲ್ಫ್, ಕೆಂಪು ಸಮುದ್ರ ಹಾಗೂ ಮೆಡಿಟರೇನಿಯನ್ ಸಮುದ್ರದ ನಡುವೆ ನೆಲೆನಿಂತ ರಾಷ್ಟ್ರಗಳಾಗಿವೆ.
ಬಹ್ರೈನ್, ಕುವೈಟ್, ಓಮಾನ್, ಕತಾರ್, ಸೌದಿ ಅರೇಬಿಯಾ, ಯುಎಇ, ಇರಾಕ್ ಈ ಏಳು ಮಧ್ಯಪ್ರಾಚ್ಯದ ಕೊಲ್ಲಿ ರಾಷ್ಟ್ರಗಳಾಗಿವೆ. ಈ ದೇಶಗಳು ಕಡಿಮೆ ಭೂಪ್ರದೇಶ ಹೊಂದಿದ್ದರೂ ಕೂಡಾ, ಅಪಾರ ಪ್ರಮಾಣದ ತೈಲ ಸಂಪತ್ತಿನ ಕಾರಣದಿಂದ ಶ್ರೀಮಂತ ದೇಶಗಳಾಗಿವೆ. ಈ ದೇಶಗಳನ್ನು ಅರಬ್/ಗಲ್ಫ್ ದೇಶಗಳೆಂದು ಕರೆಯಲಾಗುತ್ತದೆ.
ಬಹ್ರೈನ್ 14.25 ಲಕ್ಷ ಜನಸಂಖ್ಯೆ ಹೊಂದಿದೆ. ಕುವೈಟ್ 40.52 ಲಕ್ಷ, ಓಮಾನ್ 44.24 ಲಕ್ಷ, ಕತಾರ್ 26 ಲಕ್ಷ, ಸೌದಿ ಅರೇಬಿಯಾ 3.30 ಕೋಟಿ ಜನಸಂಖ್ಯೆ ಇದ್ದು, ಯುಎಇ 93 ಲಕ್ಷ, ಇರಾಕ್ 3.72 ಕೋಟಿ ಜನಸಂಖ್ಯೆ ಹೊಂದಿದೆ.
ಇಂದು ಮಧ್ಯಪ್ರಾಚ್ಯ ಜಾಗತಿಕವಾಗಿ ತೈಲ ಸಂಪತ್ತಿನಿಂದಲೇ ಗುರುತಿಸಲ್ಪಡುತ್ತಿದೆ. ಜಗತ್ತಿನ ಇಂಧನ ಕ್ಷೇತ್ರದಲ್ಲಿ ಮಧ್ಯಪ್ರಾಚ್ಯ ಅದ್ವಿತೀಯ ಪಾತ್ರ ನಿರ್ವಹಿಸುತ್ತಿದೆ. ಈ ಸಂಪತ್ತಿನ ಮೂಲದ ಹೊರತಾಗಿಯೂ ಮಧ್ಯಪ್ರಾಚ್ಯ ರಾಜಕೀಯ ಸಂಘರ್ಷ ಮತ್ತು ಯುದ್ಧದಿಂದ ನಲುಗಿ ಹೋಗುತ್ತಿದೆ. ಇರಾನ್, ಇಸ್ರೇಲ್, ಲೆಬನಾನ್, ಸಿರಿಯಾ, ಗಾಜಾ ಪಟ್ಟಿಯಲ್ಲಿನ ಸಮರ ಮುಂದುವರಿದಿದೆ. ಲಕ್ಷಾಂತರ ಜನರು ವಲಸೆ ಹೋಗಿದ್ದರೆ, ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಯುದ್ಧ, ಸಂಘರ್ಷ, ರಾಜಕೀಯ ಅರಾಜಕತೆಯಿಂದ ಮಧ್ಯಪ್ರಾಚ್ಯ ಈಗ ಬೂದಿಮುಚ್ಚಿದ ಕೆಂಡಂದಂತಾಗಿದೆ.!