ಬಾಲಿವುಡ್ಗೆ ಈ ವರ್ಷ ಸಮಾಧಾನ ತಂದುಕೊಟ್ಟ ವರ್ಷವಾಗಿದೆ. ಹಿಂದಿ ಚಿತ್ರಗಳ ಜತೆಗೆ ಪ್ಯಾನ್ ಇಂಡಿಯಾ ಭಾಷೆಯ ಚಿತ್ರಗಳೂ ಬಾಲಿವುಡ್ (Bollywood) ಅಂಗಳದಲ್ಲಿ ಸದ್ದು ಮಾಡಿದೆ. ʼಪುಷ್ಪ 2ʼ, ʼಲಾಪತಾ ಲೇಡೀಸ್ʼ, ʼಸ್ತ್ರೀ-2ʼ, ʼಭೂಲ್ ಭುಲೈಯಾ-3ʼ, ʼಸಿಂಗಂ ಎಗೇನ್ʼ ನಂತಹ ಸಿನಿಮಾಗಳು ಈ ವರ್ಷ ಬಿಟೌನ್ನಲ್ಲಿ ಕಮಾಲ್ ಮಾಡಿವೆ.
ಹಿಂದಿ ಚಿತ್ರರಂಗದಲ್ಲಿ ಸಿನಿಮಾಗಳು ಸದ್ದು ಮಾಡಿದ್ದರೂ, ಆ ಸಿನಿಮಾಗಳಲ್ಲಿ ಬಾಲಿವುಡ್ ನ ಖ್ಯಾತ ಸ್ಟಾರ್ಸ್ಗಳು ಕಾಣಿಸಿಕೊಂಡಿಲ್ಲ. ಈ ವರ್ಷ ಯಾವ ಸಿನಿಮಾಗಳನ್ನು ನೀಡದೆ ಇದ್ದರೂ ವರ್ಷಪೂರ್ತಿ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಾದ ಕಲಾವಿದರು ಬಿಟೌನ್ನಲ್ಲಿದ್ದಾರೆ.
2024ರಲ್ಲಿ ಯಾವ ಚಿತ್ರಗಳನ್ನು ನೀಡದೆ ಇರುವ ಬಾಲಿವುಡ್ ಸ್ಟಾರ್ಸ್ಗಳ ಪಟ್ಟಿ ಇಲ್ಲಿದೆ..
ಅನುಷ್ಕಾ ಶರ್ಮಾ (Anushka Sharma):
ಅನುಷ್ಕಾ ಶರ್ಮಾ ಬಿಟೌನ್ ಇಂಡಸ್ಟ್ರಿಯ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ಆದರೆ 2018ರ ‘ಜೀರೋʼ ಚಿತ್ರದ ಬಳಿಕ ಯಾವ ಸಿನಿಮಾದಲ್ಲೂ ಅನುಷ್ಕಾ ಕಾಣಿಸಿಕೊಂಡಿಲ್ಲ. ʼಬ್ಯಾಂಡ್ ಬಾಜಾ ಬಾರಾತ್ʼ, ʼಪಿಕೆʼ, ʼಜಬ್ ತಕ್ ಹೈ ಹಾನ್ʼ, ʼಏ ದಿಲ್ ಹೈ ಮುಷ್ಕಿಲ್ʼ ನಂತಹ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನ ಗೆಲುತ್ತಿದ್ದ ಅನುಷ್ಕಾ ಶರ್ಮಾ ಇತ್ತೀಚೆಗಿನ ವರ್ಷದಲ್ಲಿ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಳ್ಳದೆ ಇರುವುದು ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಭಾರತೀಯ ಮಹಿಳಾ ಕ್ರಿಕೆಟಿಗ ಜೂಲನ್ ಗೋಸ್ವಾಮಿ ಅವರ ಜೀವನಚರಿತ್ರೆ ಚಿತ್ರದಲ್ಲಿ ಅನುಷ್ಕಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ʼಚಕ್ಡಾ ಎಕ್ಸ್ಪ್ರೆಸ್ʼ ಎಂದು ಹೆಸರಿಸಲಾಗಿದೆ. ಶೀಘ್ರದಲ್ಲೇ ರಿಲೀಸ್ ಡೇಟ್ ಅನೌನ್ಸ್ ಆಗುವ ಸಾಧ್ಯತೆಯಿದೆ.
ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) :
ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಸಿನಿಮಾಗಳ ವಿಚಾರದಲ್ಲಿ ಇತ್ತೀಚೆಗಿನ ದಿನಗಳಲ್ಲಿ ಸುದ್ದಿಯಾಗದೆ ವೈಯಕ್ತಿಕ ಜೀವನದ ಕೆಲ ವಿಷಯಗಳಿಂದ ಟಾಕ್ ಆಫ್ ದಿ ಟೌನ್ ಆಗುತ್ತಿದ್ದಾರೆ. ವಿವಿಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅವರು ಕಾಣಿಸಿಕೊಂಡಿದ್ದರು ವಿನಃ ಯಾವುದೇ ಸಿನಿಮಾದಲ್ಲಿ ಈ ವರ್ಷ ಅವರು ಕಾಣಿಸಿಕೊಂಡಿಲ್ಲ. 2023ರಲ್ಲಿ ʼಪೊನ್ನಿಯಿನ್ ಸೆಲ್ವನ್ 2ʼ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದರು.
ಆಮೀರ್ ಖಾನ್ (Aamir Khan) :
ಮಿಸ್ಟರ್ ಪರ್ಫೆಕ್ಟ್ ಎಂದೇ ಬಾಲಿವುಡ್ನಲ್ಲಿ ಗುರುತಿಸಿಕೊಳ್ಳುವ ಆಮೀರ್ ಖಾನ್ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಮುಂಚೂಣಿಯಲ್ಲಿದ್ದ ನಾಯಕ ನಟ. ಮನಸ್ಸು ಮಾಡಿದರೆ ಇಂದಿಗೂ ಅವರು ಅದೇ ಸ್ಥಾನದಲ್ಲಿ ಮುಂದುವರೆಯಬಹುದು ಆದರೆ ಕೆಲ ವರ್ಷಗಳಿಂದ ಅವರು ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಸಿನಿಮಾಗಳ ನಿರ್ಮಾಣದಲ್ಲಿ ಸಕ್ರಿಯರಾಗಿದ್ದಾರೆ. ಸಿನಿಮಾದಲ್ಲಿ ನಟಿಸಲು ಹಿಂದೇಟು ಹಾಕುತ್ತಿದ್ದಾರೆ. 2022ರಲ್ಲಿ ಆಮೀರ್ ʼಲಾಲ್ ಸಿಂಗ್ ಚಡ್ಡಾʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅವರ ಅಭಿನಯ ಪ್ರೇಕ್ಷಕರ ಮನಗೆದ್ದಿತ್ತು. ಆದರೆ ಚಿತ್ರಕ್ಕೆ ನೆಗೆಟಿವ್ ರೆಸ್ಪಾನ್ಸ್ ಕೇಳಿ ಬಂದಿತ್ತು. ಇದಾದ ಬಳಿಕ ಅವರು ಯಾವ ಚಿತ್ರದಲ್ಲೂ ಕಾಣಿಸಿಕೊಂಡಿಲ್ಲ.
2024ರಲ್ಲಿ 2007ರ ಸೂಪರ್ ಹಿಟ್ ʼತಾರೆ ಜಮೀನ್ ಪರ್ʼ ಚಿತ್ರದ ಸೀಕ್ವೆಲ್ ಅನೌನ್ಸ್ ಮಾಡಿದ್ದಾರೆ. ಇದಕ್ಕೆ ʼಸಿತಾರೆ ಜಮೀನ್ ಪರ್ʼ ಎಂದು ಟೈಟಲ್ ಇಡಲಾಗಿದೆ. ಚಿತ್ರದಲ್ಲಿ ಜೆನೆಲಿಯಾ ದೇಶಮುಖ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ವರ್ಷ ಚಿತ್ರದ ರಿಲೀಸ್ ಆಗುವ ಸಾಧ್ಯತೆಯಿದೆ.
ಸಲ್ಮಾನ್ ಖಾನ್ (Salman Khan):
ಈದ್ ಹಬ್ಬ ಬಂದರೆ ಅಲ್ಲೊಂದು ಸಲ್ಮಾನ್ ಖಾನ್ ಅವರ ಸಿನಿಮಾ ರಿಲೀಸ್ ಆಗುತ್ತಿತ್ತು. ಆದರೆ 2024ರ ಈದ್ ಹಬ್ಬ ಇದನ್ನು ಸುಳ್ಳಾಗಿಸಿತ್ತು. ಈ ವರ್ಷ ಸಲ್ಮಾನ್ ಖಾನ್ ಅವರ ಯಾವುದೇ ಚಿತ್ರ ರಿಲೀಸ್ ಆಗಿಲ್ಲ. 2023ರಲ್ಲಿ ʼಟೈಗರ್ -3ʼ ʼಕಿಸಿ ಕಾ ಭಾಯಿ ಕಿಸಿ ಕಿ ಜಾನ್ʼ ಚಿತ್ರದಲ್ಲಿ ಕಾಣಿಸಿಕೊಂಡು, ಶಾರುಖ್ ಅವರ ʼಪಠಾಣ್ʼ ನಲ್ಲಿ ಕ್ಯಾಮಿಯೋ ಮಾಡಿದ್ದರು. 2025ರ ಈದ್ ಗೆ ಸಲ್ಮಾನ್ ಖಾನ್ ಅವರ ಬಹು ನಿರೀಕ್ಷಿತ ʼಸಿಕಂದರ್ʼ ಚಿತ್ರ ರಿಲೀಸ್ ಆಗಲಿದೆ.
ಶಾರುಖ್ ಖಾನ್ (Shah Rukh Khan) :
2023ರ ಶಾರುಖ್ ಖಾನ್ ಅವರಿಗೆ ಗೋಲ್ಡನ್ ಇಯರ್ ಆಗಿತ್ತು. ʼಪಠಾಣ್ʼ, ʼಜವಾನ್ʼ, ಹಾಗೂ ʼಡಂಕಿʼ ಚಿತ್ರಗಳು ಬಾಕ್ಸಾಫೀಸ್ನಲ್ಲಿ ಮೋಡಿ ಮಾಡುವುದರ ಜತೆಗೆ ಶಾರುಖ್ ಖಾನ್ ಅವರಿಗೆ ಕಂಬ್ಯಾಕ್ ಮಾಡಿಕೊಟ್ಟ ವರ್ಷ ಆಗಿತ್ತು.
ಆದರೆ 2024ರಲ್ಲಿ ಶಾರುಖ್ ಯಾವುದೇ ಸಿನಿಮಾವನ್ನು ರಿಲೀಸ್ ಮಾಡಿಲ್ಲ. ಇದರಿಂದ ಫ್ಯಾನ್ಸ್ಗೆ ನಿರಾಸೆಯಾಗಿತ್ತು. 2025ರಲ್ಲಿ ಪುತ್ರಿ ಸುಹಾನಾ ಜತೆ ಸುಜಯ್ ಘೋಷ್ ಅವರ ʼಕಿಂಗ್ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಆಯುಷ್ಮಾನ್ ಖುರಾನಾ (Ayushmann Khurrana):
ತನ್ನ ವಿಭಿನ್ನ ಕಥೆಯ ಆಯ್ಕೆಯಿಂದಲೇ ಸುದ್ದಿಯಾಗುವ ಬಿಟೌನ್ ನಟ ಆಯುಷ್ಮಾನ್ 2023ರಲ್ಲಿ ʼಡ್ರೀಮ್ ಗರ್ಲ್-2ʼ ಚಿತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ನಗುವಿನ ಮನರಂಜನೆ ನೀಡಿದ್ದರು. ಆದರೆ 2024ರಲ್ಲಿ ಯಾವುದೇ ಚಿತ್ರದಲ್ಲಿ ಅವರು ಕಾಣಿಸಿಕೊಂಡಿಲ್ಲ.
ಸದ್ಯ ಆಯುಷ್ಮಾನ್ ಮುಂದೆ ಹಾರಾರ್ – ಕಾಮಿಡಿ ʼಥಾಮʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರಣ್ಬೀರ್ ಕಪೂರ್ (Ranbir Kapoor):
2023ರಲ್ಲಿ ಸಂದೀಪ್ ರೆಡ್ಡಿ ವಂಗಾ ʼಅನಿಮಲ್ʼ ಚಿತ್ರ ಬಿಟೌನ್ನಲ್ಲಿ ಹಲ್ ಚಲ್ ಎಬ್ಬಿಸಿತ್ತು. ರಕ್ತಸಿಕ್ತ ಅವತಾರದಲ್ಲಿ ಹಾಗೂ ಬೋಲ್ಡ್ ಲುಕ್ ನಿಂದಾಗಿ ರಣ್ಬೀರ್ ಕಪೂರ್ ಅವರು ಮಿಂಚಿದ್ದರು. ಚಿತ್ರದ ಬಾಲಿವುಡ್ ಬಾಕ್ಸಾಫೀಸ್ ನಲ್ಲಿ ದೊಡ್ಡ ಯಶಸ್ಸು ಗಳಿಸಿತು. 2024 ರಲ್ಲಿ ರಣ್ಭೀರ್ ಅವರು ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಅವರ ಮುಂದಿನ ಸಿನಿಮಾ ʼರಾಮಾಯಾಣ -1ʼ ನಿಂದಾಗಿ ಅವರು ಈ ವರ್ಷ ಸುದ್ದಿಯಾಗಿದ್ದರು. ʼರಾಮಾಯಣ ಪಾರ್ಟ್ -1ʼ 2026ಕ್ಕೆ ರಿಲೀಸ್ ಆಗಲಿದೆ.
ರಣ್ವೀರ್ ಸಿಂಗ್ (Ranveer Singh):
ತನ್ನ ಹಾಸ್ಯಪ್ರಜ್ಞೆಯಿಂದಲೇ ವೀಕ್ಷಕರನ್ನು ರಂಜಿಸುವ ನಟ ರಣ್ವೀರ್ ಸಿಂಗ್ ಈ ನಾಯಕ ನಟನಾಗಿ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. 2023 ರಲ್ಲಿ ʼರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಚಿತ್ರದಲ್ಲಿ ಕಾಣಿಸಿಕೊಂಡು ರಂಜಿಸಿದ್ದರು. 2024ರಲ್ಲಿ ʼಸಿಂಗಂ ಎಗೇನ್ʼ ಚಿತ್ರದಲ್ಲಿ ಅವರು ಸಣ್ಣ ಪಾತ್ರವೊಂದನ್ನು ಮಾಡಿದ್ದರು.
ಮುಂದೆ ರಣ್ವೀರ್ ಆದಿತ್ಯ ಧಾರ್ ಅವರ ʼಧುರಂಧರ್ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2025ರಲ್ಲೇ ಈ ಚಿತ್ರ ರಿಲೀಸ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.