Advertisement

ವರ್ಷಾಂತ್ಯದ ರಜಾ ಮಜಾ ಮೂಡ್‌; ಪ್ರವಾಸಿ ತಾಣಗಳು, ಹೋಟೆಲ್‌ಗ‌ಳು ಭರ್ತಿ

01:58 AM Dec 26, 2022 | Team Udayavani |

ಮಂಗಳೂರು/ಉಡುಪಿ: ಕರಾವಳಿಯಲ್ಲಿ ಪ್ರವಾಸಿಗರ ಸಂಖ್ಯೆ ದಿಢೀರ್‌ ಏರಿಕೆಯಾಗಿದ್ದು, ತೀರ್ಥಕ್ಷೇತ್ರಗಳು, ಕಡಲ ತೀರ ಸಹಿತ ಪ್ರವಾಸಿ ತಾಣಗಳಲ್ಲಿ ಜನಜಂಗುಳಿ ಹೆಚ್ಚಿದೆ.

Advertisement

ಮಂಗಳೂರು, ಉಡುಪಿಯ ಪ್ರಮುಖ ಹೊಟೇಲ್‌ಗ‌ಳ ಕೊಠಡಿಗಳು ಜನವರಿ ಮೊದಲ ವಾರದ ವರೆಗೂ ಬುಕ್‌ ಆಗಿವೆ. ಹೋಂ ಸ್ಟೇಗಳು, ರೆಸಾರ್ಟ್‌ಗಳು, ಸರ್ವಿಸ್‌ ಅಪಾರ್ಟ್‌ಮೆಂಟ್‌ಗಳೂ ಭರ್ತಿಯಾಗಿವೆ.

ಮೂರು ವರ್ಷಗಳಿಂದ ಕೋವಿಡ್‌ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆ, ಕ್ರಿಸ್ಮಸ್‌ ಆಚರಣೆ ಮೇಲೆ ಒಂದಿಲ್ಲೊಂದು ರೀತಿಯ ನಿಯಂತ್ರಣ ಕ್ರಮಗಳಿದ್ದ ಕಾರಣ ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು. ಈ ಬಾರಿ ಮುಖ್ಯವಾಗಿ ವರ್ಷಾಂತ್ಯಕ್ಕೆ ಊರಿಗೆ ಮರಳಿರುವ ಅನಿವಾಸಿ ಭಾರತೀಯರು, ಕ್ರಿಸ್ಮಸ್‌ ರಜೆಗೆ ಸುತ್ತಾಟಕ್ಕೆ ಆಗಮಿಸಿರುವಂತಹ ಕುಟುಂಬಗಳಿಂದಾಗಿ ಜನಸಂದಣಿ ಹೆಚ್ಚಿದೆ ಎನ್ನುತ್ತಾರೆ ಹೊಟೇಲ್‌ನವರು.

ದ.ಕ.ದಲ್ಲಿ 80 ನೋಂದಾಯಿತ ಹೋಂಸ್ಟೇಗಳು ಇವೆ. ಹೆಚ್ಚಿನವು ಮಂಗಳೂರು ತಾಲೂಕಿನಲ್ಲಿ ಅದರಲ್ಲೂ ವಿಶೇಷವಾಗಿ ಉಳ್ಳಾಲ, ಸುರತ್ಕಲ್‌ ಕಡಲ ಕಿನಾರೆ ಬಳಿ ಇವೆ. ಉಡುಪಿ ಜಿಲ್ಲೆಯ ಮಲ್ಪೆ, ಕಾಪು, ಕುಂದಾಪುರ ಕಡಲ ಕಿನಾರೆ ಪರಿಸರದಲ್ಲಿರುವ ಹೋಂ ಸ್ಟೇ, ಹಟ್‌ ಹೋಂಗಳು ಭರ್ತಿಯಾಗಿವೆ.

ಮಂಗಳೂರು ನಗರದಲ್ಲಿರುವ ಸ್ಟಾರ್‌ ಹೊಟೇಲ್‌ಗ‌ಳಲ್ಲಿ ಸುಮಾರು 400 ಕೊಠಡಿಗಳು ಪೂರ್ತಿ ತುಂಬಿ ದ್ದರೆ ಅದಕ್ಕಿಂತ ಕೆಳ ಮಟ್ಟದ ಹೊಟೇಲ್‌ಗ‌ಳಲ್ಲಿರುವ 2 ಸಾವಿರದಷ್ಟು ಕೊಠಡಿಗಳೂ ಭರ್ತಿಯಾಗಿವೆ. 30ಕ್ಕೂ ಹೆಚ್ಚು ಸರ್ವಿಸ್‌ ಅಪಾರ್ಟ್‌ಮೆಂಟ್‌ಗಳೂ ಬುಕ್‌ ಆಗಿವೆ. ಮುಖ್ಯವಾಗಿ ಬೆಂಗಳೂರು ಭಾಗದಿಂದ ಹೆಚ್ಚು ಜನರು ಆಗಮಿಸಿದ್ದಾರೆ.

Advertisement

ಗ್ರಾಹಕರು ಹೆಚ್ಚಳ
ಮಂಗಳೂರು ನಗರದಲ್ಲಿರುವ ವಿವಿಧ ಶಾಪಿಂಗ್‌ ಮಾಲ್‌ಗ‌ಳು, ನಗರದ ಪ್ರಮುಖ ರೆಸ್ಟೋರೆಂಟ್‌, ಐಸ್‌ಕ್ರೀಂ ಪಾರ್ಲರುಗಳಲ್ಲೂ ಗ್ರಾಹಕರ ಸಂಖ್ಯೆ ಹೆಚ್ಚಿದೆ. ಕ್ರಿಸ್ಮಸ್‌ ಶಾಪಿಂಗ್‌ ಕೂಡ ಹೆಚ್ಚಾಗಿದೆ. ಮೂಡು ಬಿದಿರೆಯ ಸಾಂಸ್ಕೃತಿಕ ಜಾಂಬೂರಿ ನೋಡಲು ಬರುವವರ ಸಂಖ್ಯೆಯೂ ಅಧಿಕವಾಗಿದೆ. ಅಲ್ಲಿಗೆ ಬರುವವರು ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೂ ಹೋಗುವ ಯೋಜನೆ ಹಾಕಿಕೊಂಡೇ ಬರುತ್ತಾರೆ.

ಕಳೆದ ಎರಡು ತಿಂಗಳಿನಿಂದಲೇ ಹೊಟೇಲ್‌ಗ‌ಳಲ್ಲಿ ಬುಕಿಂಗ್‌ ಆಗಿತ್ತು, ಇಲ್ಲಿರುವ ದೂರದೂರಿನ ವಿದ್ಯಾರ್ಥಿಗಳ ಹೆತ್ತವರು, ಸಣ್ಣ ರಜೆಯಾದ ಕಾರಣ ಇಲ್ಲೇ ಬಂದು ಮಕ್ಕಳೊಂದಿಗೆ ರಜೆ ಕಳೆದು ಹೋಗುತ್ತಾರೆ. ಪರವೂರಿನಿಂದಲೂ ಬರುವ ಪ್ರವಾಸಿಗರಿದ್ದಾರೆ, ಎನ್‌ಆರ್‌ಐಗಳು ಕ್ರಿಸ್ಮಸ್‌ ಕಳೆಯಲು ಬರುತ್ತಾರೆ ಎನ್ನುತ್ತಾರೆ ದ.ಕ. ಹೊಟೇಲ್‌ ಅಸೋಸಿಯೇಶನ್‌ ಅಧ್ಯಕ್ಷ ಚಂದ್ರಹಾಸ್‌. ಉಡುಪಿಯಲ್ಲೂ ಎಲ್ಲ ವರ್ಗದ ಹೊಟೇಲ್‌ಗ‌ಳು ಭರ್ತಿಯಾಗಿದ್ದು, ಈ ವರ್ಷ ಉತ್ತಮ ಸ್ಪಂದನೆ ಇದೆ ಎನ್ನುತ್ತಾರೆ ಹೊಟೇಲ್‌ ಅಸೋಸಿಯೇಶನ್‌ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ.

ಮತ್ತೆ ನಡುಕ!
ಮತ್ತೆ ಚೀನದ ಬಿಎಫ್‌7 ಕೊರೊನಾ ವೈರಸ್‌ ತಳಿಯಿಂದಾಗಿ ದೇಶದಲ್ಲಿ ತುಸು ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಈಗ ಮತ್ತೆ ನಡುಕ ಮೂಡಿಸತೊಡಗಿದೆ. ವ್ಯಾಪಾರ ವಹಿವಾಟು ಈಗ ಸಹಜಸ್ಥಿತಿಗೆ ಬಂದಿರುವಾಗ ಮತ್ತೆ ಕಠಿನ ಕ್ರಮಗಳು ಬಂದರೆ ಕಷ್ಟವಾಗಬಹುದು ಎಂದು ಹೊಟೇಲ್‌ ಉದ್ಯಮಿಗಳು ಹೇಳುತ್ತಾರೆ.
ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಎಲ್ಲೆಡೆ ಪ್ರವಾಸಿಗರು ಕಾಣಸಿಗುತ್ತಿದ್ದಾರೆ. ಪ್ರವಾಸೋದ್ಯಮಕ್ಕೆ ಇದು ಉತ್ತಮ ಸೂಚನೆ, ಕೋವಿಡ್‌ ಹೆಚ್ಚಾಗದಿರಲಿ ಎನ್ನುವುದೇ ಕಳಕಳಿ.
– ಮಾಣಿಕ್ಯ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next