Advertisement
ಸ್ಮಾರ್ಟ್ ಸಿಟಿ ಯೋಜನೆಯ ಎರಡನೇ ಪಟ್ಟಿಯಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ ಎಂಬ ಬೇಸರ ಜನರದ್ದಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನ ತೀವ್ರಗೊಳಿಸುವ, ಕಾಲಮಿತಿಯೊಳಗೆ ಕಾಮಗಾರಿಗಳ ಪೂರ್ಣಗೊಳಿಸಲು ಒತ್ತು ನೀಡಿರುವ ಕೇಂದ್ರ ಸರಕಾರ, ಕಾಲಮಿತಿಯ ಪಟ್ಟಿಯಂತೆಯೇ ಎಲ್ಲ ಯೋಜನೆಗಳ ಅನುಷ್ಠಾನ ಆಗಲೇಬೇಕೆಂದು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ಎಲ್ಲ ಮಹಾನಗರಗಳಿಗೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದೆ.
Related Articles
Advertisement
ಹು.ಧಾ.ದಲ್ಲಿ 54 ಪ್ರೊಜೆಕ್ಟ್: ಅವಳಿನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಒಟ್ಟು 54 ಪ್ರೊಜೆಕ್ಟ್ಗಳನ್ನು ಕೈಗೊಳ್ಳಲಾಗುತ್ತಿದೆ. ಇದರಲ್ಲಿ ಅಂದಾಜು 304.51ಕೋಟಿ ರೂ.ವೆಚ್ಚದ 17 ಕಾಮಗಾರಿಗಳು ಟೆಂಡರ್ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿವೆ. ಅದೇ ರೀತಿ 368.57ಕೋಟಿ ರೂ.ವೆಚ್ಚದ ಸುಮಾರು 25 ಪ್ರೊಜೆಕ್ಟ್ಗಳು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಕಾಮಗಾರಿ ಕೆಲಸದಾದೇಶ ಪತ್ರ ನೀಡಲಾಗಿದೆ. ಕೆಲ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಅಂದಾಜು 283.05 ಕೋಟಿ ರೂ.ವೆಚ್ಚದಲ್ಲಿನ ನಾಲಾ ಅಭಿವೃದ್ಧಿ, ನೆಹರು ಮೈದಾನ, ಉಣಕಲ್ಲ ಕೆರೆ ಇನ್ನಿತರ ಕಾಮಗಾರಿಗಳು ಡಿಪಿಆರ್ ಹಂತದಲ್ಲಿವೆ. ಒಟ್ಟು ಎಂಟು ಕಾಮಗಾರಿಗಳು ಇನ್ನೂ ಬಾಕಿ ಇದ್ದು, ಇದರಲ್ಲಿ ಆರು ಕಾಮಗಾರಿ ಡಿಪಿಆರ್ ಹಂತದಲ್ಲಿದ್ದರೆ, ಎರಡು ಕಾಮಗಾರಿ ಕಾನ್ಸೆಪ್ಟ್ ಹಂತದಲ್ಲಿವೆ. ಅಕ್ಟೋಬರ್ ಅಂತ್ಯದೊಳಗೆ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲು ನಿರ್ಧರಿಸಲಾಗಿದೆ.
ಹೊಸೂರು ವೃತ್ತದ ಬಳಿ ಇರುವ ವೇರ್‌ಹೌಸ್ ಜಾಗ ಬಳಕೆ ಇಲ್ಲದೆ ಇದ್ದು, ಆ ಜಾಗ ಪಡೆದು ಅಲ್ಲಿ ಸಾರ್ವಜನಿಕರ ಬಳಕೆಗೆ ಕೆಲ ಸೌಲಭ್ಯಗಳನ್ನು ನೀಡಲು ಯೋಜಿಸಲಾಗಿದೆಯಾದರೂ, ಜಾಗ ನೀಡಿಕೆಗೆ ವಾರ್ಷಿಕ 1.29 ಕೋಟಿ ರೂ.ಗಳ ಬಾಡಿಗೆ ಬೇಡಿಕೆ ಇರಿಸಿದ್ದರಿಂದ ಸ್ಮಾರ್ಟ್ ಸಿಟಿ ಯೋಜನೆ ಹಾಗೂ ವೇರ್‌ಹೌಸ್‌ಗೆ ಸಂಬಂಧಿಸಿದ ಇಲಾಖೆ ನಡುವೆ ಚರ್ಚೆ ನಡೆಯುತ್ತಿದೆ.
ಈಗಾಗಲೇ ಎಸ್‌ಪಿವಿ ರಚನೆಯಾಗಿದ್ದು, ಕಂಟ್ರೋಲ್ ಆ್ಯಂಡ್ ಕಮಾಂಡ್ ರೂಂ ರೂಪುಗೊಂಡಿದೆ. ಜನತಾ ಬಜಾರ್, ಎಂ.ಜಿ.ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿ ಇನ್ನು ತೀವ್ರತೆ ಪಡೆಯಬೇಕಿದೆ. ಬಹುಪಯೋಗಿ ಕಾರುಗಳ ನಿಲುಗಡೆ ಕಟ್ಟಡ ಕಾಮಗಾರಿ ಶುರುವಾಗಿದೆ. ಕೆಲ ಕಾಮಗಾರಿಗಳಿಗೆ ಟೆಂಡರ್ ಹಾಕಲು ಗುತ್ತಿಗೆದಾರರು ಮುಂದೆ ಬಾರದ್ದರಿಂದ ಮತ್ತೆ ಟೆಂಡರ್ ಕರೆಯಬೇಕಿದೆ.
ಸ್ಮಾರ್ಟ್ ಸಿಟಿ ಯೋಜನೆಗೆ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರು ಇರಲಿಲ್ಲ, ಸಿಬ್ಬಂದಿ ಕೊರತೆ ಇತ್ತು. ಆದರೆ ಇದೀಗ ಪೂರ್ಣಾವಧಿ ಎಂಡಿ ಬಂದಿದ್ದು, ಸ್ಮಾರ್ಟ್ ಸಿಟಿ ಯೋಜನೆ ನಿರ್ವಹಣೆಗೆ ಹೊರಗುತ್ತಿಗೆ ಆಧಾರದಲ್ಲಿ ಮುಖ್ಯ ಅಭಿಯಂತರ, ಸಹಾಯಕ ಹಾಗೂ ಕಿರಿಯ ಅಭಿಯಂತರು ಸೇರಿದಂತೆ ಒಟ್ಟು 33 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಸಿಬ್ಬಂದಿ ಕೊರತೆ ಇಲ್ಲವಾಗಿದೆ. ಇನ್ನಾದರೂ ಸ್ಮಾರ್ಟ್ ಸಿಟಿ ಯೋಜನೆ ನಿರೀಕ್ಷಿತ ರೀತಿಯಲ್ಲಿ ಅನುಷ್ಠಾನಗೊಳ್ಳುವುದೇ ಕಾದು ನೋಡಬೇಕು.
ಕ್ವಾಲಿಟಿ ಕಂಟ್ರೋಲ್ ಕಚೇರಿ: ವಿವಿಧ ಕಾಮಗಾರಿಗೆ ಬಳಸುವ ಸಾಮಗ್ರಿಗಳ ಗುಣಮಟ್ಟ ಪರೀಕ್ಷೆಗೆ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಕ್ವಾಲಿಟಿ ಕಂಟ್ರೋಲ್ ಕಚೇರಿಯನ್ನು ಇಲ್ಲಿನ ಹೊಸೂರು ಬಳಿ ಆರಂಭಿಸಲಾಗುತ್ತದೆ. ವಿವಿಧ ಕಾಮಗಾರಿಗಳಿಗೆ ಬಳಸುವ ಜಲ್ಲಿ, ಮರಳು ಇನ್ನಿತರ ಸಾಮಗ್ರಿಗಳ ಗುಣಮಟ್ಟ ಪರೀಕ್ಷೆಯನ್ನು ಈ ಕಚೇರಿಯಲ್ಲಿ ಕೈಗೊಳ್ಳಲಾಗುತ್ತದೆ. ಸರಕಾರದ ಲೋಕೋಪಯೋಗಿ, ಜಲಸಂಪನ್ಮೂಲ ಇಲಾಖೆ ಸೇರಿದಂತೆ ಸರಕಾರದ ವಿವಿಧ ಇಲಾಖೆಗಳು ತಾವು ಬಳಸುವ ಸಾಮಗ್ರಿಗಳ ಗುಣಮಟ್ಟ ಪರೀಕ್ಷೆಯನ್ನು ಇಲ್ಲಿ ಕೈಗೊಳ್ಳಬಹುದಾಗಿದೆ. ಅಂದಾಜು 85 ಲಕ್ಷ ರೂ.ವೆಚ್ಚದಲ್ಲಿ ಕ್ವಾಲಟಿ ಕಂಟ್ರೋಲ್ ಕಚೇರಿ ರೂಪುಗೊಳ್ಳಲಿದ್ದು, ಗುಣಮಟ್ಟ ಪರೀಕ್ಷೆಗೆ ಅಗತ್ಯವಿರುವ ಅತ್ಯಾಧುನಿಕ ಸಮಾಗ್ರಿಗಳನ್ನು ಇದು ಹೊಂದಲಿದೆ. ಅದೇ ರೀತಿ ಕಚೇರಿಯಲ್ಲಿ ಒಬ್ಬರು ಸಹಾಯಕ ಅಭಿಯಂತರ ಹಾಗೂ ಇಬ್ಬರು ಸಿಬ್ಬಂದಿ ಇರಲಿದ್ದಾರೆ. ಸುಮಾರು 3ಸಾವಿರ ಚದರ ಅಡಿ ಜಾಗದಲ್ಲಿ ಕಚೇರಿ ರೂಪುಗೊಳ್ಳಲಿದೆ.
•ಅಮರೇಗೌಡ ಗೋನವಾರ