ಚಿಕ್ಕೋಡಿ: ಗಡಿ ಭಾಗದ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣವು ಈಗ ರಾಜಕೀಯ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿದೆ. ಈಗಾಗಲೇ ಪಟ್ಟಣದಲ್ಲಿ ಇಬ್ಬರು ಶಾಸಕರು ಮತ್ತು ಓರ್ವ ಸಂಸದರು ಇದ್ದರು. ಈಗ ವಿಧಾನ ಪರಿಷತ್ ಸದಸ್ಯರಾಗಿ ನೂತನವಾಗಿ ಆಯ್ಕೆಯಾದ ಪ್ರಕಾಶ ಹುಕ್ಕೇರಿ ಸೇರಿ ನಾಲ್ಕು ಜನ ಪ್ರಭಾವಿ ನಾಯಕರು ಒಂದೇ ಪಟ್ಟಣದವರಾಗಿದ್ದು ವಿಶೇಷವಾಗಿದೆ.
ಚಿಕ್ಕೋಡಿ ನಗರದಿಂದ 10 ಕಿ.ಮೀ. ದೂರದಲ್ಲಿರುವ ಯಕ್ಸಂಬಾ ಪಟ್ಟಣ ಶೈಕ್ಷಣಿಕ, ಸಾಂಸ್ಕೃತಿಕ ಬೆಳವಣಿಗೆ ಜತೆಗೆ ರಾಜಕೀಯವಾಗಿ ಮೇಲುಗೈ ಸಾಧಿಸಿದೆ. ಬಹುಭಾಷಿಕರು ಇದ್ದರೂ ಸಹ ಯಕ್ಸಂಬಾ ಜನ ಕನ್ನಡವನ್ನು ಹೆಚ್ಚು ಪ್ರೀತಿಸುತ್ತಾರೆ. ಇಂತಹ ಅಪ್ಪಟ್ಟ ಗಡಿನಾಡಿನ ಪಟ್ಟಣದಲ್ಲಿ ಮೂವರು ಶಾಸಕರು ಮತ್ತು ಓರ್ವ ಸಂಸದರು ಇರುವುದು ಇತಿಹಾಸ.
ಯಕ್ಸಂಬಾ ಪಟ್ಟಣದ ಗಣೇಶ ಪ್ರಕಾಶ ಹುಕ್ಕೇರಿ, ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಶಾಸಕರಾಗಿದ್ದು, ಅಣ್ಣಾಸಾಹೇಬ ಶಂಕರ ಜೊಲ್ಲೆ ಸಂಸದ ಹಾಗೂ ಈಗ ಪ್ರಕಾಶ ಬಾಬಣ್ಣ ಹುಕ್ಕೇರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ನಾಲ್ಕು ಜನರು ಪ್ರತಿನಿಧಿಸುವ ಕ್ಷೇತ್ರ ಮತ್ತು ಪಕ್ಷ ಬೇರೆ ಬೇರೆಯಾದರೂ ಒಂದೇ ಪಟ್ಟಣದವರಾಗಿರುವುದು ವಿಶೇಷ. ಅದರಲ್ಲಿ ಶಶಿಕಲಾ ಜೊಲ್ಲೆ ಸಚಿವರೂ ಆಗಿದ್ದಾರೆ.
ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಶಾಸಕರಾಗಿರುವ ಗಣೇಶ ಪ್ರಕಾಶ ಹುಕ್ಕೇರಿ, ನಿಪ್ಪಾಣಿ ಕ್ಷೇತ್ರ ಪ್ರತಿನಿಧಿಸುವ ಶಶಿಕಲಾ ಜೊಲ್ಲೆ, ಚಿಕ್ಕೋಡಿ ಲೋಕಸಭೆ ಸದಸ್ಯ ಅಣ್ಣಾಸಾಹೇಬ ಜೊಲ್ಲೆ, ಬುಧವಾರಷ್ಟೆ ನೂತನವಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಪ್ರಕಾಶ ಹುಕ್ಕೇರಿ ನಾಲ್ವರೂ ಒಂದೇ ಪಟ್ಟಣದವರಾಗಿದ್ದರಿಂದ ಯಕ್ಸಂಬಾ ಪಟ್ಟಣ ಇಡೀ ರಾಜ್ಯದಲ್ಲಿ ರಾಜಕೀಯ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದ ಜಾರಕಿಹೊಳಿ ಮನೆತನದಲ್ಲಿ ನಾಲ್ಕು ಜನ ಶಾಸಕರಾಗಿ ಆಯ್ಕೆಯಾಗಿದ್ದು ಇತಿಹಾಸವಾಗಿತ್ತು. ಈಗ ಇದೇ ಬೆಳಗಾವಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಯಕ್ಸಂಬಾ ಪಟ್ಟಣದಲ್ಲಿ ನಾಲ್ವರು ಪ್ರಭಾವಿ ನಾಯಕರಿಗೆ ಜನಾಶಿರ್ವಾದ ಲಭಿಸಿರುವುದು ಯಕ್ಸಂಬಾ ಪಟ್ಟಣದ ಗರಿಮೆ ಹಿರಿಮೆ ಹೆಚ್ಚಿಸಿದೆ.
-ಮಹಾದೇವ ಪೂಜೇರಿ