ಕಿಕ್ಕೇರಿ: ಅರೆಬರೆ ಆಗಿರುವ ಕಾಮಗಾರಿ, ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಸಿಮೆಂಟ್ ಮೂಟೆಗಳು, ಎಲ್ಲೆಂದರಲ್ಲಿ ಕಾಣುವ ಮದ್ಯದ ಬಾಟಲಿಗಳು, ಸಿಗರೇಟ್, ಬೀಡಿ, ಮಾಂಸ, ಮೂಳೆಯ ತುಣುಕುಗಳು… ಇದು ಸಾಸಲು ಧಾರ್ಮಿಕ ಕ್ಷೇತ್ರದ ಯಾತ್ರಿ ನಿವಾಸ ಕಟ್ಟಡದ ದುಸ್ಥಿತಿ.
ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಸಾಸಲು ಗ್ರಾಮದ ಪವಾಡ ಪುರುಷ ಭೈರವರಾಜ ದೇವಾಲಯದಲ್ಲಿ ಭಕ್ತರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ನಿರ್ಮಿಸುತ್ತಿರುವ ಯಾತ್ರಿ ನಿವಾಸ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದೆ. ಉದ್ದೇಶಿತ ಕಾರ್ಯಕ್ಕೆ ಬಳಕೆಯಾಗಬೇಕಿದ್ದ ಕಟ್ಟಡ ಇದೀಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಬಯಲು ಸೀಮೆಯ ಕುಕ್ಕೆ ಸುಬ್ರಹ್ಮಣ್ಯ ಎಂದೇ ಖ್ಯಾತಿ ಪಡೆದಿರುವ ಕ್ಷೇತ್ರ ಮುಜರಾಯಿ ಇಲಾಖೆ ಸೇರಿದೆ. ವಾರ್ಷಿಕವಾಗಿ ಲಕ್ಷಾಂತರ ರೂ. ಆದಾಯ ತಂದು ಕೊಡುತ್ತಿದ್ದರೂ, ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೊಳಗಾಗಿರುವುದು ಭಕ್ತರ ಅಸಮಾಧಾನಕ್ಕೆ ಕಾರಣವಾಗುವ ಜೊತೆಗೆ ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
2022ರಲ್ಲಿ ಕಟ್ಟಡ ಕಾಮಗಾರಿಗೆ ಚಾಲನೆ: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ 2022ರಲ್ಲಿ ಅಂದಿನ ಸಚಿವರಾಗಿದ್ದ ಸಾ.ರಾ. ಮಹೇಶ್ ಒಂದು ಕೋಟಿ ರೂ. ವೆಚ್ಚದಲ್ಲಿ ಮುಜರಾಯಿ ಇಲಾಖೆಯ ಸರ್ವೆ ನಂ.83ರಲ್ಲಿನ ಶಂಭುಲಿಂಗೇಶ್ವರ ದೇಗುಲದ ತೋಪಿನಲ್ಲಿರುವ 8.4 ಎಕರೆ ವಿಸ್ತಾರದಲ್ಲಿ 2 ಗುಂಟೆ ವಿಸ್ತೀರ್ಣದಲ್ಲಿ ಯಾತ್ರಿ ನಿವಾಸ ಕಾಮಗಾರಿಗೆ ಚಾಲನೆ ನೀಡಿದ್ದರು. ಕಾಮಗಾರಿಗೆ ಎರಡು ಕಂತುಗಳಲ್ಲಿ ಒಟ್ಟು 53 ಲಕ್ಷ ರೂ. ಸರ್ಕಾರದಿಂದ ಅನುದಾನ ಬಿಡುಗಡೆಯಾಗಿ ದ್ದರೂ, ಕಟ್ಟಡ ಕಾಮಗಾರಿ ಅರೆಬರೆಯಾಗಿದ್ದು, ಕಾಮಗಾರಿಯ ಹೊಣೆ ಹೊತ್ತಿದ್ದ ಜಿಲ್ಲಾ ನಿರ್ಮಿತಿ ಕೇಂದ್ರ ಇದೀಗ ಅನುದಾನ ಕೊರತೆಯ ನೆಪವೊಡ್ಡಿ ಕಾಮಗಾರಿಯನ್ನು ಸ್ಥಗಿತಗೊಳಿಸಿದೆ. ಕಳೆದೆರಡು ವರ್ಷಗಳಿಂದ ಕಟ್ಟಡ ಕಾಮಗಾರಿ ನಡೆಯದೇ, ಧಾರ್ಮಿಕ ಕ್ಷೇತ್ರದ ಯಾತ್ರಿ ನಿವಾಸ ಕಟ್ಟಡ ಅನ್ಯ ಚಟುವಟಕೆಗಳಿಗೆ ಬಳಕೆಯಾಗುತ್ತಿದೆ. ಕಟ್ಟಡದ ಕೂಗಳತೆಯಲ್ಲಿ ಭಕ್ತರಿಗಾಗಿ ಶೌಚಾಲಯ ನಿರ್ಮಿಸಲಾಗಿದ್ದು, ನಿರ್ವಹಣೆ ಇಲ್ಲದೇ ಹಾಳಾಗಿದ್ದು, ಮಲಮೂತ್ರ ಕಟ್ಟಿಕೊಂಡು ಇಡೀ ಪರಿಸರ ಹೊಲಸುಮಯವಾಗಿದೆ.
ಮುಜರಾಯಿ ಇಲಾಖೆಯ ಬೇಜವಾಬ್ದಾರಿತನ : ಪವಾಡ ಪುರುಷ ಭೈರವರಾಜರ ಕ್ಷೇತ್ರ ಸರ್ಪಸುತ್ತ, ಚರ್ಮವ್ಯಾಧಿ, ವಿವಾಹ, ಸಂತಾನ ಪ್ರಾಪ್ತಿಗೆ ಸಿದ್ಧಿ ನೀಡುವ ಪುಣ್ಯ ಕ್ಷೇತ್ರ. ಸೌರಾಷ್ಟ್ರ ದಿಂದ ಬಂದು ನೆಲೆಸಿರುವ ಸೋಮೇಶ್ವರ, ಶಂಭುಲಿಂಗೇಶ್ವರ, ಕುದುರೆ ಮಂಡಮ್ಮ ದೇವರ ತಾಣ. ಜಿಲ್ಲೆಯಲ್ಲದೇ ಹೊರ ಜಿಲ್ಲೆ, ರಾಜ್ಯಗಳಿಂದ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಕಾರ್ತಿಕ ಮಾಸದಲ್ಲಿ ತಿಂಗಳುಗಟ್ಟಲೆ ನಡೆಯುವ ಜಾತ್ರೆಗೆ ನಿತ್ಯ ಸಾವಿರಾರು ಭಕ್ತರು ಸಾಗರೋಪಾದಿ ಯಲ್ಲಿ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ಅನುಕೂಲವಾಗಲೆಂದು ನಿರ್ಮಿಸುತ್ತಿದ್ದ ಯಾತ್ರಿ ನಿವಾಸ ಕಾಮಗಾರಿ ಸ್ಥಗಿತವಾಗಿದ್ದು, ಈ ಬಗ್ಗೆ ಧ್ವನಿ ಎತ್ತುವವರು ಇಲ್ಲವಾಗಿದ್ದಾರೆ. ಸಮಸ್ಯೆ ಪರಿಹಾರಕ್ಕೆ ಈ ಹಿಂದಿನ ತಹಶೀಲ್ದಾರ್ ಡಾ.ಎಚ್. ಎಲ್.ನಾಗರಾಜು ವಿಶೇಷ ಆಸಕ್ತಿ ವಹಿಸಿದ್ದರು. ಯಾತ್ರಿ ನಿವಾಸ ನಿರ್ಮಾಣಕ್ಕೆ ಶ್ರಮಿಸಿದ್ದರು. ಸರ್ಕಾರಕ್ಕೆ ವಾರ್ಷಿಕವಾಗಿ ಲಕ್ಷಾಂತರ ರೂ. ವರಮಾನ ತರುವ ದೇಗುಲದ ಅಭಿವೃದ್ಧಿಗೆ ಇಲಾಖೆ ನಿರ್ಲಕ್ಷಿಸಿರುವುದು ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರೌಢಶಾಲೆ ಮಕಳಿಗೆ ಆತಂಕ್ಕ : ಪಕ್ಕದಲ್ಲಿಯೇ ಪ್ರೌಢಶಾಲೆ ಇದ್ದು, ನಿತ್ಯ ನೂರಾರು ಮಕ್ಕಳು ಕಟ್ಟಡ ಕಾಮಗಾರಿ ನಡೆಯುತ್ತಿರುವ ಮಾರ್ಗದಲ್ಲೇ ಸಂಚರಿಸುತ್ತಾರೆ. ಕಟ್ಟಡ ಅನೈರ್ಮಲ್ಯತೆ ತಾಣವಾಗಿದ್ದು, ಹಗಲು ವೇಳೆಯೇ ಸರಿಸೃಪಗಳ ಕಾಟವಿದ್ದು, ಮಕ್ಕಳಿಗೆ ಭಯ ಕಾಡುತ್ತಿದೆ. ಸರ್ಕಾರ ತುರ್ತು ಗಮನಹರಿಸಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಮರು ಆರಂಭಿಸಿ ಗುಣಮಟ್ಟದಿಂದ ನಿರ್ಮಿಸಬೇಕು. ಭಕ್ತರು ತಂಗಲು ಅವಕಾಶ ಕಲ್ಪಿಸುವಂತಾಗಬೇಕು ಎನ್ನುವುದು ಗ್ರಾಮಸ್ಥರ, ಭಕ್ತರ ಬೇಡಿಕೆಯಾಗಿದೆ.
ಯಾತ್ರಿ ನಿವಾಸ ಪ್ರವಾಸೋದ್ಯಮ ಇಲಾಖೆಯಿಂದ ಮುಜರಾಯಿ ಸ್ಥಳದಲ್ಲಿ ಭವನ ನಿರ್ಮಾಣವಾಗುತ್ತಿದೆ. ಕೆಲವು ತಿಂಗಳ ಹಿಂದಷ್ಟೇ ಅಧಿಕಾರ ವಹಿಸಿಕೊಂಡಿರುವೆ. ವಿಷಯ ತಿಳಿದುಕೊಂಡು ತ್ವರಿತವಾಗಿ ಭವನ ನಿರ್ಮಾಣವಾಗಲು ಸಂಬಂಧಪಟ್ಟವರಿಗೆ ಮನವಿ ಮಾಡಲಾಗುವುದು.
-ಕೆ.ಎಂ. ವೀಣಾ, ಉಪತಹಶೀಲ್ದಾರ್, ನಾಡಕಚೇರಿ, ಕಿಕ್ಕೇರಿ
ಯಾತ್ರಿ ನಿವಾಸ ನಿರ್ಮಾಣವಾದರೆ, ನಮ್ಮ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗಲಿದೆ. ಮುಜರಾಯಿ ಇಲಾಖೆಗೆ ಲಕ್ಷಾಂತರ ವರಮಾನ ಬರುತ್ತಿದ್ದು, ತ್ವರಿತವಾಗಿ ಯಾತ್ರಿ ನಿವಾಸ ಕಟ್ಟಡವನ್ನು ಪೂರ್ಣಗೊಳಿಸಿ, ಭಕ್ತರು ತಂಗಲು ವ್ಯವಸ್ಥೆ ಕಲ್ಪಿಸಬೇಕು.
-ಗುರುಮೂರ್ತಿ, ಗ್ರಾಮಸ್ಥ
-ತ್ರಿವೇಣಿ