Advertisement

ಯಾತ್ರಾ ರಾಜಕೀಯ : ಈ ಯಾತ್ರೆಗಳ ಹಿನ್ನೋಟ ಇಲ್ಲಿದೆ…

12:46 AM Oct 07, 2022 | Team Udayavani |

ದೇಶದಲ್ಲೀಗ ಯಾತ್ರೆಗಳ ಸದ್ದು. ಕಾಂಗ್ರೆಸ್‌ನಿಂದ ಭಾರತ್‌ ಜೋಡೋ ಯಾತ್ರೆ ನಡೆಯುತ್ತಿದ್ದು, ಸದ್ಯ ಕರ್ನಾಟಕದಲ್ಲಿ ಸಾಗುತ್ತಿದೆ. ಗುರುವಾರ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ಜತೆಗೆ ಸೋನಿಯಾ ಗಾಂಧಿಯವರೂ ಪಾಲ್ಗೊಂಡು ಯಾತ್ರೆಗೆ ಮೆರಗು ತಂದರು. ಇದೇ ರೀತಿ ಹಿಂದಿನಿಂದಲೂ ಹಲವಾರು ಯಾತ್ರೆಗಳು ನಡೆದಿದ್ದು, ದೇಶದ ರಾಜಕೀಯವನ್ನೇ ಬದಲಾಯಿಸಿವೆ.
ಈ ಯಾತ್ರೆಗಳ ಹಿನ್ನೋಟ ಇಲ್ಲಿದೆ.

Advertisement

ಭಾರತ್‌ ಯಾತ್ರಾ 1983
ರಾಜಕೀಯವಾಗಿ ದೇಶದಲ್ಲಿ ಕಂಡು ಬಂದ ಮೊದಲ ಯಾತ್ರೆ ಇದು. ಮಾಜಿ ಪ್ರಧಾನಮಂತ್ರಿ, ಜನತಾದಳದ ನಾಯಕ ಚಂದ್ರಶೇಖರ್‌ ಅವರು ಕನ್ಯಾಕುಮಾರಿ ಯಿಂದ ಹೊಸದಿಲ್ಲಿವರೆಗೆ ಈ ಯಾತ್ರೆ ನಡೆಸಿದ್ದರು. 1983ರ ಜ. 6ರಂದು ಈ ಯಾತ್ರೆ ಆರಂಭ ವಾಗಿದ್ದು, ಆರು ತಿಂಗಳ ಬಳಿಕ ಮುಕ್ತಾಯಗೊಂಡಿತು. ರಾಜಕೀಯ ವಿಶ್ಲೇಷಕರ ಪ್ರಕಾರ ಈ ಯಾತ್ರೆ ಯಶಸ್ವಿಯಾಗಿತ್ತು. ಜನತಾಪಕ್ಷವನ್ನು ಒಂದುಗೂಡಿಸುವಲ್ಲಿ ಸಹಕಾರಿಯಾಗಿತ್ತು. ಆದರೆ 1984ರಲ್ಲಿ ಇಂದಿರಾ ಗಾಂಧಿಯವರ ಹತ್ಯೆ ಬಳಿಕ ದೇಶದ ಎಲ್ಲ ರಾಜಕೀಯ ಲೆಕ್ಕಾಚಾರ ತಲೆಕೆಳಗಾಗಿ ಕಾಂಗ್ರೆಸ್‌ ದೊಡ್ಡ ಬಹುಮತದೊಂದಿಗೆ ಆರಿಸಿ ಬಂದಿತು. ರಾಜೀವ್‌ ಗಾಂಧಿ ಪ್ರಧಾನಿಯಾದರು.

ಕಾಂಗ್ರೆಸ್‌ ಸಂದೇಶ ಯಾತ್ರಾ 1985
ಪ್ರಧಾನಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಜೀವ್‌ ಗಾಂಧಿಯವರು ಈ ಯಾತ್ರೆಗೆ ಕರೆಕೊಟ್ಟರು. ಮುಂಬಯಿಯಲ್ಲಿ ನಡೆದಿದ್ದ ಎಐಸಿಸಿ ಅಧಿವೇಶನದಲ್ಲಿ ಇದು ಆರಂಭವಾಗಿತ್ತು. ಅಖೀಲ ಭಾರತ ಕಾಂಗ್ರೆಸ್‌ ಸೇವಾ ದಳ ದೇಶಾದ್ಯಂತ ಈ ಯಾತ್ರೆಯನ್ನು ಕೈಗೊಂಡಿತು. ಮುಂಬಯಿ, ಕಾಶ್ಮೀರ, ಕನ್ಯಾಕುಮಾರಿ ಮತ್ತು ಈಶಾನ್ಯ ರಾಜ್ಯದಿಂದ ಏಕಕಾಲಕ್ಕೆ ಯಾತ್ರೆ ಆರಂಭವಾಗಿ ಮೂರು ತಿಂಗಳ ಬಳಿಕ ರಾಮ್‌ಲೀಲಾ ಮೈದಾನದಲ್ಲಿ ಮುಗಿಯಿತು.

ರಥಯಾತ್ರಾ 1990
ಬಿಜೆಪಿಗೆ ಬಹುದೊಡ್ಡ ಅವಕಾಶ ತೆರೆದುಕೊಟ್ಟ ಯಾತ್ರೆ ಇದು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ, ಈ ಯಾತ್ರೆಯನ್ನು ಬಿಜೆಪಿ ನಾಯಕ ಎಲ್‌.ಕೆ. ಆಡ್ವಾಣಿ ಅವರ ನೇತೃತ್ವದಲ್ಲಿ ಕೈಗೊಳ್ಳಲಾಯಿತು. 10 ಸಾವಿರ ಕಿ.ಮೀ. ಸಂಚರಿಸಿ ಅಯೋಧ್ಯೆಯಲ್ಲಿ ಅದೇ ವರ್ಷದ ಅ.30ರಂದು ಪೂರ್ಣಗೊಂಡಿತು. ಈ ಯಾತ್ರೆ ಅನಂತರವೇ ದೇಶಾದ್ಯಂತ ಬಿಜೆಪಿ ಬೆಳೆಯಲು ಆರಂಭವಾಯಿತು. ಎಲ್ಲೆಡೆ ತನ್ನ ಬೇರುಗಳನ್ನು ಹರಡಿಕೊಂಡಿತು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಏಕತಾ ಯಾತ್ರೆ 1991
ಎಲ್‌.ಕೆ.ಆಡ್ವಾಣಿ ಅವರ ರಥಯಾತ್ರೆಯ ಬೆನ್ನಲ್ಲೇ, ಬಿಜೆಪಿ ರಾಷ್ಟೀಯ ಅಧ್ಯಕ್ಷ ಮುರಳಿ ಮನೋಹರ ಜೋಶಿ ಅವರ ನೇತೃತ್ವದಲ್ಲಿ ಏಕತಾ ಯಾತ್ರೆ ಹೆಸರಿನಲ್ಲಿ ಮತ್ತೂಂದು ಯಾತ್ರೆ ಕೈಗೊಳ್ಳಲಾಯಿತು.

Advertisement

ಡಿಸೆಂಬರ್‌ನಲ್ಲಿ ಕನ್ಯಾಕುಮಾರಿಯಲ್ಲಿ ಯಾತ್ರೆ ಆರಂಭವಾಗಿದ್ದು, 14 ರಾಜ್ಯಗಳಲ್ಲಿ ಸಂಚರಿಸಿತ್ತು. 1992ರ ಜ.26ರಂದು ಶ್ರೀನಗರದ ಲಾಲ್‌ ಚೌಕ್‌ನಲ್ಲಿ ರಾಷ್ಟ್ರೀಯ ಧ್ವಜ ಹಾರಾಟ ಮಾಡುವ ಮೂಲಕ ಯಾತ್ರೆ ಮುಕ್ತಾಯವಾಯಿತು. ಆದರೆ, ಈ ಯಾತ್ರೆಯಿಂದ ಅಷ್ಟೇನೂ ಲಾಭವಾಗಲಿಲ್ಲ. ಇದೇ ರೀತಿ 2011ರಲ್ಲೂ ಬಿಜೆಪಿ ಕೋಲ್ಕತಾದಿಂದ ಶ್ರೀನಗರದ ವರೆಗೆ ಏಕತಾ ಯಾತ್ರೆಯನ್ನು ಮತ್ತೂಮ್ಮೆ ನಡೆಸಿತು. ಇದು ಕೇವಲ 14 ದಿನಗಳ ಕಾಲ ನಡೆಯಿತು.

ಪಾಂಚಜನ್ಯ ಯಾತ್ರೆ 1999
ಕೆಪಿಸಿಸಿ ಅಧ್ಯಕ್ಷರಾಗಿದ್ದ ಎಸ್‌.ಎಂ. ಕೃಷ್ಣ ಅವರ ನೇತೃತ್ವದಲ್ಲಿ 1999ರ ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯಾದ್ಯಂತ ಪಾಂಚಜನ್ಯ ಯಾತ್ರೆ ನಡೆಸಲಾಗಿತ್ತು. ಕಾಂಗ್ರೆಸ್‌ ನಾಯಕರೆಲ್ಲರೂ ಸೇರಿಕೊಂಡು ಈ ಯಾತ್ರೆ ನಡೆಸಿದ್ದರು. ಇದರ ಫ‌ಲವಾಗಿಯೇ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದು ಅಧಿಕಾರದ ಗದ್ದುಗೆಗೆ ಏರಿತು. ಸಿಎಂ ಆದ ಮೇಲೂ 2002ರಲ್ಲಿ ಬರಗಾಲ ಆವರಿಸಿದ್ದರಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡಲಾಗಿರಲಿಲ್ಲ. ನ್ಯಾಯಾಲಯದ ಆದೇಶ ಪಾಲನೆ ಮಾಡಿಲ್ಲ ಎಂದು ಸುಪ್ರೀಂ ಕೋರ್ಟ್‌ ಗರಂ ಆಗಿತ್ತು. ಆಗ ಕೃಷ್ಣ ಅವರು ಪಾದಯಾತ್ರೆ ಕೈಗೊಂಡಿದ್ದರು. ಆರು ದಿನಗಳ ಕಾಲ ಈ ಪಾದಯಾತ್ರೆ ನಡೆಸಿದ್ದರು. ಅಂದರೆ ಬೆಂಗಳೂರಿನ ರಾಜರಾಜೇಶ್ವರಿನಗರದಿಂದ ಮಂಡ್ಯ ವರೆಗೆ 100 ಕಿ.ಮೀ. ಯಾತ್ರೆ ನಡೆಸಿದ್ದರು. ಆದರೆ ಎರಡನೇ ಬಾರಿ ನಡೆದ ಯಾತ್ರೆಯಿಂದ ಕಾಂಗ್ರೆಸ್‌ಗೆ ಲಾಭವೇನೂ ಆಗಲಿಲ್ಲ.

ದೇವೇಗೌಡರ ಪಾದಯಾತ್ರೆ 2001
ಆಗ ರಾಜ್ಯದಲ್ಲಿ ಎಸ್‌.ಎಂ.ಕೃಷ್ಣ ಅವರ ಸರಕಾರವಿತ್ತು. ನೀರಾ ತೆಗೆಯುವ ವಿಚಾರದಲ್ಲಿ ಪೊಲೀಸರು ಹಾರಿಸಿದ ಗುಂಡಿಗೆ ಇಬ್ಬರು ರೈತರು ಬಲಿಯಾಗಿದ್ದರು. ಇದನ್ನು ವಿರೋಧಿಸಿ ದೇವೇಗೌಡರು ಚನ್ನಪಟ್ಟಣ ತಾಲೂಕಿನ ವಿಠಲೇನಹಳ್ಳಿಯಿಂದ ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಮಹಾತ್ಮಾ ಗಾಂಧೀಜಿ ಪ್ರತಿಮೆವರೆಗೆ ಒಟ್ಟು 5 ದಿನಗಳ ಕಾಲ ಪಾದಯಾತ್ರೆ ನಡೆಸಿದ್ದರು. 80 ಕಿ.ಮೀ. ಉದ್ದದ ಈ ಪಾದಯಾತ್ರೆಯಿಂದ ಜೆಡಿಎಸ್‌ಗೆ ರಾಜಕೀಯವಾಗಿ ಲಾಭವೂ ಆಯಿತು. 2004ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ 58 ಸ್ಥಾನ ಗಳಿಸಿದ್ದಲ್ಲದೇ, ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಪ್ರಭಾವ ಬೀರಿತ್ತು.

ರಾಜಶೇಖರ ರೆಡ್ಡಿ ಪಾದಯಾತ್ರೆ 2003
ಆಂಧ್ರ ಪ್ರದೇಶದಲ್ಲಿ ನಡೆದ ಅತೀದೊಡ್ಡ ಪಾದಯಾತ್ರೆ ಇದು. ಆಗ ಟಿಡಿಪಿಯ ಚಂದ್ರಬಾಬು ನಾಯ್ಡು ಅವರು ರಾಜ್ಯದಲ್ಲಿ ಅಧಿಕಾರದಲ್ಲಿದ್ದರು. ವಿಪಕ್ಷದಲ್ಲಿದ್ದ ಕಾಂಗ್ರೆಸ್‌ ನಾಯಕ ರಾಜಶೇಖರ ರೆಡ್ಡಿ ಅವರು, ಪಕ್ಷವನ್ನು ಪುನರ್‌ ಸಂಘಟನೆ ಮಾಡುವ ಸಲುವಾಗಿ 1,400 ಕಿ.ಮೀ.ಗಳ ಪಾದಯಾತ್ರೆ ಕೈಗೊಂಡರು. ಈ ಯಾತ್ರೆಯ ಪರಿಣಾಮವಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ದೊಡ್ಡ ಬಹುಮತದೊಂದಿಗೆ ಗೆದ್ದು ಬಂದಿತು.

ಬಳ್ಳಾರಿ ಚಲೋ ಪಾದಯಾತ್ರೆ 2010
ಆಗ ರಾಜ್ಯದಲ್ಲಿ ಬಿಜೆಪಿ ಸರಕಾರವಿತ್ತು. ಜನಾರ್ದನ ರೆಡ್ಡಿ ಸೇರಿದಂತೆ ಕೆಲವು ಸಚಿವರ ವಿರುದ್ಧ ಬಳ್ಳಾರಿ ಗಣಿ ಅಕ್ರಮ ಆರೋಪಗಳಿದ್ದವು. ಈ ಸಂಬಂಧ ಸದನದಲ್ಲಿ ಘರ್ಷಣೆಯಾದಾಗ, ಬಳ್ಳಾರಿ ಗಲಾಟೆ ನಡೆದಿತ್ತು. ಇದಾದ ಮೇಲೆ 2010ರ ಜು. 25ರಂದು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಬಳ್ಳಾರಿ ಚಲೋ ಪಾದಯಾತ್ರೆ ನಡೆಯಿತು. ಬೆಂಗಳೂರಿನಿಂದ ಬಳ್ಳಾರಿವರೆಗೆ ಕಾಂಗ್ರೆಸ್‌ ನಾಯಕರು ಪಾದಯಾತ್ರೆ ನಡೆಸಿದರು. ಈ ಯಾತ್ರೆಯ ಕಾರಣದಿಂದಾಗಿ 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಭಾರೀ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತು.

ಸಾಲು ಸಾಲು ಯಾತ್ರೆಗಳು
ಇನ್ನೊಂದು ವರ್ಷದಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ, ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಾಲು ಸಾಲು ಯಾತ್ರೆಗಳನ್ನು ಆಯೋಜಿಸಲು ಮುಂದಾ ಗಿವೆ. ಇದೇ 11ರಿಂದ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಯಾತ್ರೆಯೊಂದನ್ನು ಆಯೋಜಿಸಿದೆ.
ನ.1ರಿಂದ ಜೆಡಿಎಸ್‌ ಪಂಚರತ್ನ ಎಂಬ ಯಾತ್ರೆ ಆಯೋಜಿಸಲು ಮುಂದಾಗಿದೆ. ಹಾಗೆಯೇ, ಭಾರತ್‌ ಜೋಡೋ ಬಳಿಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಮತ್ತೂಂದು ಯಾತ್ರೆ ಕೈಗೊಳ್ಳಲಿದ್ದಾರೆ.

ಪ್ರಜಾಸಂಕಲ್ಪ ಯಾತ್ರಾ 2017
ತಂದೆ ರಾಜಶೇಖರ ರೆಡ್ಡಿ ಅವರಂತೆಯೇ ಆಂಧ್ರದಲ್ಲಿ ಮತ್ತೂಮ್ಮೆ ಪ್ರಜಾಸಂಕಲ್ಪ ಯಾತ್ರೆ ನಡೆಸಿದವರು ಪುತ್ರ ಜಗನ್‌ ಮೋಹನ್‌ ರೆಡ್ಡಿ. ಈ ಸಂದರ್ಭದಲ್ಲೂ ಆಂಧ್ರದಲ್ಲಿ ಅಧಿಕಾರ ನಡೆಸುತ್ತಿದ್ದುದು ಟಿಡಿಪಿಯ ಚಂದ್ರಬಾಬು ನಾಯ್ಡು. 3,500 ಕಿ.ಮೀ. ಪಾದಯಾತ್ರೆ ನಡೆಸಿದ ಜಗನ್‌, ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದರು. 2019ರ ಆಂಧ್ರ ಚುನಾವಣೆಯಲ್ಲಿ ಜಗನ್‌ಮೋಹನ್‌ ರೆಡ್ಡಿ ಅವರ ವೈಎಸ್‌ಆರ್‌ಪಿ ಪಕ್ಷ ಭರ್ಜರಿಯಾಗಿ ಗೆಲುವು ಸಾಧಿಸಿತು.

ಮೇಕೆದಾಟು ಯಾತ್ರೆ 2022
ಮೇಕೆದಾಟು ಯೋಜನೆ ಅನುಷ್ಠಾನದಲ್ಲಿ ವಿಳಂಬ ವಾಗುತ್ತಿದೆ ಎಂದು ಆರೋಪಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಮೇಕೆದಾಟು ಪಾದಯಾತ್ರೆ ನಡೆಸ ಲಾಯಿತು. ಜ.9ರಿಂದ 19ರ ವರೆಗೆ 11 ದಿನಗಳ ಕಾಲ 165 ಕಿ.ಮೀ. ಪಾದಯಾತ್ರೆ ನಡೆಸಲಾಯಿತು. ಇದರಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಆರ್‌.ವಿ. ದೇಶಪಾಂಡೆ, ಡಾ| ಜಿ. ಪರಮೇಶ್ವರ್‌, ಬಿ.ಕೆ. ಹರಿಪ್ರಸಾದ್‌ ಸಸಿತ ಹಲವಾರು ನಾಯಕರು ಭಾಗಿಯಾಗಿದ್ದರು.

ಭಾರತ್‌ ಜೋಡೋ ಯಾತ್ರೆ 2022
ಸದ್ಯ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ನಡೆಸುತ್ತಿರುವ ಯಾತ್ರೆ ಇದು. ಕಾಂಗ್ರೆಸ್‌ನ ಪುನರುಜ್ಜೀವನಕ್ಕಾಗಿ ಈ ಯಾತ್ರೆಯನ್ನು ಕೈಗೊಳ್ಳಲಾಗಿದ್ದು, ತಮಿಳುನಾಡಿನ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಈ ಯಾತ್ರೆ ನಡೆಯುತ್ತಿದೆ. ಸೆ.8ರಂದು ಇದು ಆರಂಭವಾಗಿ, 3,570 ಕಿ.ಮೀ. ಸಾಗಲಿದೆ. ಒಟ್ಟಾರೆ 150 ದಿನಗಳ ಕಾಲ ಈ ಯಾತ್ರೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.