Advertisement

ಕಾಲಮಿತಿ‌ ಇಲ್ಲದ ಮೀಸಲು ಅಧ್ಯಯನ ಸಮಿತಿ ರಚನೆ ಕಣ್ಣೊರೆಸುವ ತಂತ್ರ : ಯತ್ನಾಳ

02:09 PM Mar 12, 2021 | Girisha |

ವಿಜಯಪುರ : ವರದಿ ನೀಡಲು ಗಡುವು ನೀಡದೇ ಪಂಚಮಸಾಲಿ ಸೇರಿದಂತೆ ಇತರೆ ಸಮುದಾಯಗಳ ಮೀಸಲು ನೀಡುವ ವಿಷಯವಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ರಚಿಸಿರುವುದು ಕಣ್ಣೊರೆಸುವ ತಂತ್ರ. ಇದಕ್ಕೆ ನಮ್ಮ ಸಹಮತವಿಲ್ಲ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ 2ಎ ಸೇರಿದಂತೆ ವಿವಿಧ ಸಮುದಾಯಕ್ಕೆ ಮೀಸಲಾತಿ ಅಧ್ಯಯನಕ್ಕೆ ಸರ್ಕಾರ ನಿವೃತ್ತ ನ್ಯಾಯಾಧೀಶರ ಸಮಿತಿ ರಚಿಸಿದ್ದು, ಕಾಲಮಿತಿ ನೀಡಬೇಕು. ಕಾಲಮಿತಿ ಇಲ್ಲದ ಸಮಿತಿ ಕಾಟಾಚಾರದ, ಟಿ.ಎ-ಡಿ.ಎ. ನೀಡಲು ಮಾತ್ರ ಸಮಿತಿ ಸೀಮಿತವಾದ ನೇಮಕ ಎನ್ನುವಂತಾಗುತ್ತದೆ.

ಗಡುವು ನೀಡದೇ ಸಮಿತಿ ರಚಿಸಿರುವುದು ಕೇವಲ ರಾಜಕೀಯ ಸ್ಟಂಟ್. ಬ್ರಾಹ್ಮಣರಿಗೆ ಕೇಂದ್ರ ಸರ್ಕಾರ ಶೇ10 ರಷ್ಟು ಮೀಸಲಾತಿ ಘೋಷಣೆ ಮಾಡಿದೆ. ಕರ್ನಾಟಕದಲ್ಲಿ ಅದು ಜಾರಿಯಾಗಿಲ್ಲ ಎಂದು ಹರಿಹಾಯ್ದರು. ಸಿಎಂ ಅವರ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಜಾತಿಗಳಿಗೆ ಮೀಸಲಾತಿ ನೀಡಬೇಕು. ಎಸ್ಸಿ-ಎಸ್ಟಿ ಸಮುದಾಯಗಳ ಮೀಸಲ ಪ್ರಮಾಣ ಹೆಚ್ಚಳ ಕುರಿತು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಈ ವಿಚಾರವಾಗಿ ಸ್ಪಷ್ಟನೆ ನೀಡುವುದಾಗಿ ಸಿ.ಎಂ. ಹೇಳಿದ್ದರು.

ಆದರೆ ಸದನದಲ್ಲಿ ಸಿ.ಎಂ. ಬದಲಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದರು. ಈ ಕುರಿತು ಸೋಮವಾರ ಸದನದಲ್ಲಿ ಸಿಎಂ ಎದುರೇ ಮತ್ತೆ ಪ್ರಸ್ತಾಪ ಮಾಡುತ್ತೇನೆ. ಮೀಸಲಾತಿ ನೀಡಲು‌ ಎಷ್ಟು ಸಮಯ ಬೇಕು ಎಂದು ಸಿಎಂ ಯಡಿಯೂರಪ್ಪ ಹೇಳಲಿ. ಒಂದು ವರ್ಷದಲ್ಲಿ ಆಗುತ್ತೋ ಎರಡು ವರ್ಷದ ಆಗತ್ತೋ ಅಥವಾ ಒಂದು ಶತಮಾನ ಬೇಕಾಗಬಹುದು ಎಂಬುದನ್ನು ಸ್ಪಷ್ಟಪಡಿಸಲಿ ಎಂದ ಯತ್ನಾಳ ವ್ಯಂಗ್ಯವಾಡಿದರು.

ಸರ್ಕಾರದ ಸ್ಪಷ್ಟ ನಿರ್ಧಾರ ಬಹಿರಂಗವಾಗಲಿ. ಈ ವಿಚಾರವಾಗಿ ಸಿಎಂ ಅವರು ಸ್ಪಷ್ಟ ಉತ್ತರ ನೀಡದಿದ್ದರೆ ಸೋಮವಾರ ಅಧಿವೇಶನದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next