Advertisement
ಮಂಗಳವಾರ ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಗರಸಭೆ ಮಾಜಿ ಸದಸ್ಯ ರವೀಂದ್ರ ಬಗಲಿ, ರಾಜು ಬಿರಾದಾರ, ವಿಜಯಪುರ ನಗರ ಕ್ಷೇತ್ರದಿಂದ ಎರಡು ಬಾರಿ ಗೆದ್ದಿರುವ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶಟ್ಟಿ ಅವರು ಕಳೆದ ಬಾರಿ ಯತ್ನಾಳ ಅವರಿಗೆ ಕ್ಷೇತ್ರವನ್ನು ತ್ಯಾಗ ಮಾಡಿದ್ದು, ಈ ಬಾರಿ ಪಟ್ಟಣಶಟ್ಟಿ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದರು.
Related Articles
Advertisement
ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷನಿಷ್ಟ ಕಾರ್ಯಕರ್ತರನ್ನು ಕಡೆಗಣಿಸಿದ್ದಲ್ಲದೇ, ಬಂಡಾಯವೆದ್ದು ಸ್ಪರ್ಧಿಸಿದ ಪಕ್ಷದ ಅತೃಪ್ತ ಸ್ಪರ್ಧಿಗಳನ್ನು ಕರೆಸಿ ಮಾತನಾಡುವ ಸೌಜನ್ಯ ತೋರಿಲ್ಲ. ಪಕ್ಷದ ಪದಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ ನಮ್ಮ ವಿರುದ್ಧ ಜಿಲ್ಲಾಧ್ಯಕ್ಷರನ್ನು ಬಳಸಿಕೊಂಡು ನಮ್ಮನ್ನು ಪಕ್ಷದಿಂದ ಉಚ್ಛಾಟಿಸುವ ಮೂಲಕ ಸೇಡಿನ ರಾಜಕೀಯ ಮಾಡಿದರು ಎಂದು ಹರಿಹಾಯ್ದರು.
ಯತ್ನಾಳ ಅವರಿಗೆ ವಿಜಯಪುರ ನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದರೆ ಪಕ್ಷದ ಮೂಲ ಕಾರ್ಯಕರ್ತರು ನಿರ್ಲಕ್ಷಕ್ಕೆ ಗುರಿಯಾಗಲಿದ್ದಾರೆ. ಪಕ್ಷದ ಕಾರ್ಯಕರ್ತರ ಪರಿಶ್ರಮದ ಬಗ್ಗೆ ಹಗುರವಾಗಿ ಮಾತನಾಡುವ ಹಾಗೂ ಜಾತಿಗಳ ಮಧ್ಯೆ ಸಂಘರ್ಷ ತಂದೊಡ್ಡು ಯತ್ನಾಳ ಅವರಿಗೆ ನಗರ ಕ್ಷೇತ್ರದಿಂದ ಟಿಕೆಟ್ ನೀಡಿದರೆ ಬಿಜೆಪಿ ಮೂಲ ಕಾರ್ಯಕರ್ತರು ತಟಸ್ಥರಾಗಿ ಉಳಿಯಲಿದ್ದೇವೆ ಎಂದು ಎಚ್ಚರಿಸಿದರು.
ಪಕ್ಷದ ವರಿಷ್ಠರು ಸ್ಥಳೀಯವಾಗಿ ಪರಿಸ್ಥಿತಿಯನ್ನು ಅರಿತು ಸ್ಪರ್ಧೆಗೆ ಅವಕಾಶ ಕಲ್ಪಿಸಬೇಕು.ಅವಕಾಶ ತಪ್ಪಿದರೂ ಪಕ್ಷನಿಷ್ಟೆ ಬಿಡದ ಅಪ್ಪು ಪಟ್ಟಣಶಟ್ಟಿ ಅವರಿಗೆ ನೀಡಬೇಕು ಎಂದು ಆಗ್ರಹಿಸಿದರು.
ಪಕ್ಷ ನಿಷ್ಟೆ ಇಲ್ಲದ ಯತ್ನಾಳ ಅವರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿ, ತಮ್ಮ ಹಿಂಬಾಲಕರಿಗೆ ಟಿಕೆಟ್ ನೀಡುತ್ತ ಬಂದಿದ್ದಾರೆ. ತಮ್ಮನ್ನು ತಾವು ಶುದ್ಧಹಸ್ತರೆಂದು ಕರೆದುಕೊಳ್ಳುವ ಯತ್ನಾಳ ಅವರು, ತಮ್ಮ ಆಪ್ತ ಸಹಾಯಕರ ಮೂಲಕ ನಡೆಸುವ ಅವ್ಯವಹಾರಗಳ ಕುರಿತು ಶೀಘ್ರವೇ ಸಾರ್ವಜನಿಕವಾಗಿ ಬಹಿರಂಗ ಮಾಡುವುದಾಗಿ ಹೇಳಿದರು.
ತಮ್ಮನ್ನು ತಾವು ಒಂದೆ ಹಿಂದು ಹುಲಿ ಎಂದು ಕರೆದುಕೊಳ್ಳುವ ಯತ್ನಾಳ, ಪಂಚಮಸಾಲಿ ಮೀಸಲು ಹೋರಾಟದ ಮುಂಚೂಣಿ ನಾಯಕರ ವಿರುದ್ಧವೇ ಷಡ್ಯಂತ್ರ ಮಾಡಿದರು. ಸಮಾಜಕ್ಕೆ 2-ಎ ಮೀಸಲಾತಿಗಾಗಿ ಹೋರಾಡಿದ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳನ್ನೇ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಬಲಿಪಶು ಮಾಡಿದರು ಎಂದು ವಾಗ್ದಾಳಿ ನಡೆಸಿದರು.