ವಿಜಯಪುರ: ಪ್ರವಾಹ ಪರಿಹಾರ ವಿತರಣೆಯಲ್ಲಿ ವಿಳಂಬ ನೀತಿ ಖಂಡಿಸಿ ಮಾಧ್ಯಮಗಳ ಮೂಲಕ ಹೇಳಿಕೆ ನೀಡಿದ್ದಕ್ಕೆ ಪಕ್ಷ ತಮಗೆ ನೀಡಿದ್ದ ನೋಟಿಸ್‌ಗೆ ಉತ್ತರಿಸಲು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಪ್ರಧಾನಿ ಹಾಗೂ ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆದು ಸಮಯ ಕೋರಿದ್ದಾರೆ.
ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಶಾಸಕ ಯತ್ನಾಳ ಕೇಂದ್ರ ಸರ್ಕಾರವನ್ನು ಹಾಗೂ ಕೇಂದ್ರದ ಮೇಲೆ ಈ ಕುರಿತು ಒತ್ತಡ ಹೇರಬೇಕೆಂದು ರಾಜ್ಯದ ಸಂಸದರನ್ನು ಒತ್ತಾಯಿಸಿದ್ದರು. ಆಡಳಿತ ಪಕ್ಷದ ಶಾಸಕರಾಗಿ ಮಾಧ್ಯಮಗಳಲ್ಲಿ ಬಹಿರಂಗ ಹೇಳಿಕೆ ನೀಡಿದ್ದರಿಂದ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಶಾಸಕ ಯತ್ನಾಳ ಅವರಿಗೆ ಶೋಕಾಸ್ ನೋಟಿಸ್ ನೀಡಿತ್ತು. ಆ ನೋಟಿಸ್‌ಗೆ ಈ ರೀತಿ ಉತ್ತರಿಸಿ, ಈ ಗೊಂದಲ ನಿವಾರಣೆಗಾಗಿ ಖದ್ದು ಭೇಟಿ ನೀಡಲು ಬಯಸಿದ್ದು ಸಮಯ ನೀಡುವಂತೆ ಕೋರಿದ್ದಾರೆ.
ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಗೃಹ ಸಚಿವ ಅಮಿತ್ ಶಾ, ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಅ.5ರಂದು ಪ್ರತ್ಯೇಕ ಪತ್ರ ಬರೆದಿರುವ ಯತ್ನಾಳ, ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ನೆರೆಯಿಂದಾಗಿ ಎಲ್ಲವನ್ನೂ ಕಳೆದುಕೊಂಡು ಸಂತ್ರಸ್ತರಾಗಿರುವ ಜನರಿಗೆ ತ್ವರಿತ ಪರಿಹಾರ ವಿತರಿಸುವ ಕುರಿತು ಓರ್ವ ಜನಪ್ರತಿನಿಧಿಯಾಗಿ ಸಹಜ ರೀತಿಯಲ್ಲಿ ಆಗ್ರಹಿಸಿದ್ದೇನೆ ಹೊರತು ರಾಜಕೀಯ ಉದ್ದೇಶವೇ ಇಲ್ಲ. ಅಲ್ಲದೇ ರಾಜಕೀಯದ ಕುರಿತು ಯಾವ ಹೇಳಿಕೆಯನ್ನೂ ನೀಡಿಲ್ಲ. ಆದರೆ ಕೆಲವರು ಇದೀಗ ನನ್ನ ಬಗ್ಗೆ ಕೆಟ್ಟ ಭಾವನೆ ಮೂಡುವಂತೆ ಹೀಗೆ ಮಾಡಿದ್ದಾರೆ ಎಂದು ಸಮಜಾಯಿಸಿ ನೀಡಿದ್ದಾರೆ.
ಪ್ರಧಾನಿ ಮೋದಿ ಅವರಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಕಂಡಿದ್ದೇವೆ. ನಿಮ್ಮಿಂದಲೇ ಇಂದು ಇಡೀ ದೇಶ ಅತ್ಯುನ್ನತವಾಗಿ ಬೆಳವಣಿಗೆ ಆಗುತ್ತಿದೆ. ನಾನು ಮಾತನಾಡಿದ್ದು ಸಂತ್ರಸ್ತರಿಗೆ ಸಹಾಯ ಮಾಡಿ ಎಂಬುದಾಗಿದೆ ಹೊರತಾಗಿ ಪಕ್ಷದ ವರ್ಚಸ್ಸು ಮತ್ತು ನಾಯಕರ ಅವಹೇಳನಕ್ಕೆ ಕಾರಣವಾಗಿಲ್ಲ. ನಾನು ನೀಡಿದ ಹೇಳಿಕೆಯಿಂದ ಪಕ್ಷದ ಘನತೆ ಹೆಚ್ಚಿದೆ ಹೊರತಾಗಿ ಪಕ್ಷಕ್ಕೆ ಧಕ್ಕೆ ಆಗಿಲ್ಲ ಎಂದು ವಿವರಿಸಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದಾಗಲೂ ನಾನು ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಿಸುವ ಸಲುವಾಗಿ ಹೋರಾಟ ಮಾಡಿದ್ದೇನೆ. ಆಗ ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ಸಹ ನೀಡಲು ಮುಂದಾಗಿದ್ದೆ. ಅಂದಿನ ಪ್ರಧಾನಿ ವಾಜಪೇಯಿ ಸ್ಪಂದಿಸಿದ್ದರು. ಈಗಲೂ ನಾನು ಸಂತ್ರಸ್ತರಿಗೆ ಪರಿಹಾರ ಸಿಗಬೇಕು ಎಂದು ಮಾತನಾಡಿದ್ದೇನೆ ಹೊರತಾಗಿ ಪಕ್ಷದ ವಿರುದ್ಧ ಹಾಗೂ ನಾಯಕರ ವಿರುದ್ಧ ಮಾತನಾಡಿಲ್ಲ. ಇಷ್ಟಾದರೂ ಕೆಲವರು ನನ್ನ ಹೇಳಿಕೆ ಕುರಿತು ತಪ್ಪು ಮಾಹಿತಿ ರವಾನಿಸಿರುವ ಸಾಧ್ಯತೆ ಇದೆ. ಹೀಗಾಗಿ ಖುದ್ದಾಗಿ ನಿಮ್ಮನ್ನು ಭೇಟಿಯಾಗಿ ಸಂತ್ರಸ್ತರ ಕುರಿತು ವಿಷಯವನ್ನು ಮಾತನಾಡ ಬಯಸಿದ್ದು ಸಮಯಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ.