ಅಲಿಗಢ: ವಿವಾದಾತ್ಮಕ ಧಾರ್ಮಿಕ ಪ್ರವಚನಗಾರ ಯತಿ ನರಸಿಂಹಾನಂದ ಸರಸ್ವತಿ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಮದರಸಾಗಳು ಮತ್ತು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯವನ್ನು ಸುಟ್ಟು ಹಾಕಿ ಎಂದು ಹೇಳಿಕೆ ನೀಡಿದ್ದು, ಅವರ ವಿರುದ್ಧ ಕೇಸು ದಾಖಲಾಗಿದೆ.
ಭಾನುವಾರ, ಯತಿ ನರಸಿಂಹಾನಂದ ಅವರು ಹಿಂದೂ ಮಹಾಸಭಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಲಿಗಢಕ್ಕೆ ಬಂದಿದ್ದರು. ಉತ್ತರ ಪ್ರದೇಶ ಸರ್ಕಾರದಿಂದ ಮಾನ್ಯತೆ ಪಡೆಯದ ಮದರಸಾಗಳ ಕುರಿತು ನಡೆಯುತ್ತಿರುವ ಸಮೀಕ್ಷೆಯ ಕುರಿತು ಮಾತನಾಡಿದ ಯತಿ ನರಸಿಂಹಾನಂದ, ಮದರಸಾದಂತಹ ಸಂಸ್ಥೆ ಇರಬಾರದು ಎಂದಿದ್ದಾರೆ.
“ಎಲ್ಲಾ ಮದರಸಾಗಳನ್ನು ಗನ್ ಪೌಡರ್ ಬಳಸಿ ಸುಟ್ಟು ಹಾಕಬೇಕು. ಮದರಸಾಗಳ ಎಲ್ಲಾ ವಿದ್ಯಾರ್ಥಿಗಳನ್ನು ಶಿಬಿರಗಳಿಗೆ ಕಳುಹಿಸಬೇಕು ಇದರಿಂದ ಕುರಾನ್ ಎಂಬ ವೈರಸ್ ಅವರ ಮೆದುಳಿನಿಂದ ಹೊರಹಾಕಬಹುದು” ಎಂದು ಯತಿ ನರಸಿಂಹಾನಂದರು ಹೇಳಿದ್ದ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:29 ಕೋಟಿ ಲಂಚ ಆರೋಪ: ವಿಚಾರಣೆ ರದ್ದುಪಡಿಸುವಂತೆ ಸುಪ್ರೀಂ ಕೋರ್ಟ್ ಮೊರೆ ಹೋದ ಯಡಿಯೂರಪ್ಪ
ಮುಂದುವರಿದು ಮಾತನಾಡಿದ ಅವರು, “ಮದರಸಾಗಳಂತೆ, ಅಲಿಗಢ ಮುಸ್ಲಿಂ ಯುನಿವರ್ಸಿಟಿಯನ್ನು ಸುಡಬೇಕು. ಅಲ್ಲಿನ ವಿದ್ಯಾರ್ಥಿಗಳನ್ನು ಜೈಲಿಗೆ ಕಳುಹಿಸಬೇಕು. ಅವರ ಮಿದುಳಿಗೆ ಚಿಕಿತ್ಸೆ ನೀಡಬೇಕು” ಎಂದಿದ್ದಾರೆ.
ಗಾಂಧಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಯತಿ ನರಸಿಂಹಾನಂದ ವಿರುದ್ಧ ಕೇಸು ದಾಖಲಾಗಿದೆ. ಶಿಕ್ಷಣ ಸಂಸ್ಥೆಯ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಡಿ ಕೇಸು ದಾಖಲಾಗಿದೆ ಎಂದು ಎಸ್ ಪಿ ಕುಲದೀಪ್ ಸಿಂಗ್ ಗುಣಾವತ್ ಹೇಳಿದ್ದಾರೆ.