Advertisement

ಯತ್ನಾಳ್‌ ಹೇಳಿಕೆಗೆ ವಿಶೇಷ ಅರ್ಥ ಬೇಡ

04:23 PM May 08, 2022 | Team Udayavani |

ಹೊನ್ನಾಳಿ: ದುಡ್ಡು ಕೊಟ್ಟು ಅಧಿಕಾರ ಹಿಡಿಯುವ ಭಂಡತನದ ವ್ಯವಸ್ಥೆ ಬಿಜೆಪಿಯಲ್ಲಿಲ್ಲ. ಬಸವನಗೌಡ ಪಾಟೀಲ್‌ ಯತ್ನಾಳ್‌ ಹಿರಿಯ ರಾಜಕಾರಣಿಯಾಗಿದ್ದು ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ಇಲ್ಲಸಲ್ಲದ ಹೇಳಿಕೆ ಕೊಡಬಾರದು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಹೇಳಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ. ಅಲ್ಲದೇ ಪದಾಧಿ ಕಾರಿಗಳಿಗೆ, ಪರಿವಾರದವರಿಗೆ, ಕಾರ್ಯಕರ್ತರ ಮನಸ್ಸಿಗೂ ಅಪಾರ ನೋವಾಗುತ್ತದೆ ಎಂದರು. ಸಿಎಂ, ಮಂತ್ರಿ ಹುದ್ದೆಗಳಿಗೆ ಲಾಬಿ ನಡೆಯುತ್ತಿದೆ ಎನ್ನುವ ಯತ್ನಾಳ್‌ ಹೇಳಿಕೆ ಅಪ್ರಬುದ್ಧವಾದುದು. ರಾಜ್ಯದಲ್ಲಿ ಬಿಎಸ್‌ ವೈ ಅವರಂತಹ ಮಹಾನ್‌ ನಾಯಕರಿಂದ ಬೆಳೆದ ಪಕ್ಷ ಇಂದು ಹೆಮ್ಮರವಾಗಿದೆ. ರಾಜ್ಯದಲ್ಲಿ ಹಾಗೂ ದೇಶದಲ್ಲಿ ಬಿಜೆಪಿಗೆ ಉತ್ತಮ ಹೆಸರಿದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಹೇಳಿಕೆಗಳು ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತವೆ. ಹಣ ಕೊಟ್ಟರೆ ಸಿಎಂ ಆಗುವುದು ಕಾಂಗ್ರೆಸ್ಸಿನಲ್ಲಿ ಮಾತ್ರ. ಲಕೋಟೆ ಸಂಸ್ಕೃತಿ, ಹೈಕಮಾಂಡ್‌ ಹೇಳಿದ ವ್ಯಕ್ತಿ ಸಿಎಂ ಆಗುವುದು ಕಾಂಗ್ರೆಸ್‌ನಲ್ಲಿ. ನಮ್ಮ ಪಕ್ಷದಲ್ಲಿ ಶಾಸಕರು ನಾಯಕನನ್ನು ಆಯ್ಕೆ ಮಾಡುತ್ತಾರೆ ಎಂದರು.

ಹಿಟ್‌ ಆ್ಯಂಡ್‌ ರನ್‌

ಪ್ರಮುಖರು ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಕುಮಾರಸ್ವಾಮಿ ಅವರು ಯಾವಾಗಲೂ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡುತ್ತಾರೆ. ಅವರು ಹಿಟ್‌ ಆ್ಯಂಡ್‌ ರನ್‌ ಕಾರ್ಯವನ್ನು ನಿರಂತರ ಮಾಡಿಕೊಂಡು ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು. ಮೂಡಿಗೆರೆ ಶಾಸಕ ಕುಮಾರಸ್ವಾಮಿ ಏಕವಚನದಲ್ಲಿ ಪಿಎಸ್‌ಐ ಅವರನ್ನು ನಿಂದಿಸಿದ್ದು ವೈರಲ್‌ ಆಗಿರುವ ಬಗ್ಗೆ ಕೇಳಿದಾಗ, ಶಾಸಕರನ್ನು ಕೇಳಿ ಪಿಎಸ್‌ಐ ನಿಯುಕ್ತಿ ಮಾಡಬೇಕಿತ್ತು ಎಂದು ಹೇಳಿದರು. ಜಿಪಂ ಮಾಜಿ ಉಪಾಧ್ಯಕ್ಷ ಸುರೇಂದ್ರ ನಾಯ್ಕ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next