ಈಗಾಗಲೇ ಕನ್ನಡದ ಬಹುತೇಕ ನಟ, ನಟಿಯರು ಅನ್ಯಭಾಷೆಗೆ ಹೋಗಿದ್ದಾರೆ, ಬಂದಿದ್ದಾರೆ, ಕೆಲವರು ಗುರುತಿಸಿಕೊಂಡಿದ್ದಾರೆ, ಇನ್ನೂ ಕೆಲವರು ಅಲ್ಲೇ ಗಟ್ಟಿ ನೆಲೆಕಂಡಿದ್ದಾರೆ. ಆ ಸಾಲಿಗೆ ಹೊಸ ಸೇರ್ಪಡೆ ನಟ ಯತಿರಾಜ್. ಇದುವರೆಗೂ ಕನ್ನಡದಲ್ಲಿ 130ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ, ಬಹುತೇಕ ಸ್ಟಾರ್‌ಗಳ ಜತೆ ಅಭಿನಯಿಸಿರುವ ಯತಿರಾಜ್, ಇದೇ ಮೊದಲ ಸಲ ಕಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಅವರ ಅಭಿನಯದ ಮೊದಲ ತಮಿಳು ಚಿತ್ರದ ಹೆಸರು “ಕಡಂಬನ್’ ನಾಳೆ ತೆರೆಕಾಣುತ್ತಿದೆ.
ಈ ಚಿತ್ರಕ್ಕೆ ರಾಘವ ನಿರ್ದೇಶಕರು. ಈ ಹಿಂದೆ ರಾಘವ, ಕನ್ನಡದಲ್ಲಿ “ಮಿ ಮೊಮ್ಮಗ’ ನಿರ್ದೇಶಿಸಿದ್ದರು. ಆ ಚಿತ್ರದಲ್ಲಿ ಯತಿರಾಜ್‌ಗೊಂದು ಪಾತ್ರ ಕೊಟ್ಟಿದ್ದರು. ಅವರ ಅಭಿನಯದ ನೋಡಿದ ನಿರ್ದೇಶಕರಿಗೆ ಯತಿರಾಜ್ ಅವರನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸುವ ಆಸೆಯಾಗಿತ್ತು. ರಾಘವ ತಮ್ಮ “ಕಡಂಬನ್’ ಚಿತ್ರದಲ್ಲಿ ಯತಿರಾಜ್‌ಗೊಂದು ವಿಶೇಷ ಪಾತ್ರ ಕೊಟ್ಟು ಆಹ್ವಾನವಿತ್ತರು. “ತಮಿಳು ಚಿತ್ರರಂಗಕ್ಕೆ ಹೋಗಲು “ಮಿಸ್ಟರ್ ಮೊಮ್ಮಗ’ ನಿರ್ಮಾಪಕ ರವಿ ಗೌಡ ಕಾರಣ’ ಎನ್ನುವುದನ್ನು ಮರೆಯುವುದಿಲ್ಲ ಯತಿರಾಜ್.
ಅದೆಲ್ಲಾ ಸರಿ, “ಕಡಂಬನ್’ ಚಿತ್ರದಲ್ಲಿ ಯತಿರಾಜ್ ಅವರ ಪಾತ್ರವೇನು ಎಂದರೆ, ಅವರಲ್ಲಿ ಕರುಣ ಎಂಬ ಫಾರೆಸ್ಟ್ ರೇಂಜರ್ ಪಾತ್ರ ನಿರ್ವಹಿಸಿದ್ದಾರೆ. “ಕಳೆದ 2016 ಫೆಬ್ರವರಿಯಲ್ಲಿ ಸ್ಕ್ರೀನ್ ಟೆಸ್ಟ್ ಆಯಿತು. ಚಿತ್ರದಲ್ಲಿ ಸುಮಾರು 25 ದಿನಗಳ ಕಾಲ ಕೆಲಸ ಮಾಡಿದ್ದೀನಿ. ಇಡೀ ಸಿನಿಮಾ ಕಾಡಿನ ಬ್ಯಾಕ್‌ಡ್ರಾಪ್‌ನಲ್ಲೇ ಸಾಗಲಿದೆ. ಕೊಡೈಕೆನಾಲ್, ಕೇರಳದ ವಾಗಮಾನ್, ಕೊಚ್ಚಿನ್ ಸೇರಿದಂತೆ ಇತರೆ ಗುಡ್ಡಗಾಡು ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. “ಕಡಂಬನ್’ನಲ್ಲಿ ನೆಗೆಟಿವ್ ಪಾತ್ರ ಮಾಡಿದ್ದೇನೆ. ಆ ಪಾತ್ರ ಇಡೀ ಸಿನಿಮಾದ ಕೇಂದ್ರ ಬಿಂದು’ ಎಂದು ವಿವರ ಕೊಡುತ್ತಾರೆ ಅವರು. ಸಿನಿಮಾದ ಹೀರೋ ಸೇರಿದಂತೆ ಬಹುತೇಕ ಪಾತ್ರಗಳು, ಯತಿರಾಜ್ ಪಾತ್ರದಿಂದ ತೊಂದರೆಗೆ ಒಳಗಾಗುತ್ತವಂತೆ.
ಅಂದಹಾಗೆ, ಇನ್ನೊಂದು ಖುಷಿ ವಿಷಯ ಹೇಳುವ ಯತಿರಾಜ್, ಅವರ ಪಾತ್ರಕ್ಕೆ ಅವರೇ ಡಬ್ ಮಾಡಿದ್ದಾರಂತೆ. ಮೊದಲ ತಮಿಳು ಚಿತ್ರಕ್ಕೆ ಡಬ್ ಮಾಡಿದ್ದು, ಕಲಾವಿದನಾಗಿ ಹೆಮ್ಮೆಯ ವಿಷಯ ಎನ್ನುತ್ತಾರೆ ಅವರು. ಅದಕ್ಕಾಗಿ ಸಾಕಷ್ಟು ತಮಿಳು ಸಿನಿಮಾಗಳನ್ನು ನೋಡಿ, ಮಾತಾಡುವುದನ್ನು ಕಲಿತು ಡಬ್ ಮಾಡಿ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಪ್ರಯತ್ನ ಮಾಡಿದ್ದಾರಂತೆ.ಸದ್ಯ “ಕಡಂಬನ್’ ಬಿಡುಗಡೆ ಎದುರು ನೋಡುತ್ತಿರುವ ಯತಿರಾಜ್‌ಗೆ ಅಲ್ಲಿ ಪಾತ್ರ ಮಾಡುವಾಗ ಸಿಕ್ಕ ಮೆಚ್ಚುಗೆಯಲ್ಲೇ ಖುಷಿಗೊಂಡಿದ್ದಾರೆ.