Advertisement

ರೇವಣಸಿದ್ದಯ್ಯ ಭೇಟಿ ಮಾಡಿ ಬೆಂಬಲ ಕೋರಿದ ಯತೀಂದ್ರ

06:55 AM Apr 10, 2018 | Team Udayavani |

ಮೈಸೂರು: ಹಾಲಿ, ಮಾಜಿ ಮುಖ್ಯಮಂತ್ರಿಗಳ ಪುತ್ರರ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಅಖಾಡವಾಗಿರುವ ವರುಣಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎನ್ನಲಾದ ಬಿ.ವೈ.ವಿಜಯೇಂದ್ರ ಸ್ಥಳೀಯ ಕಾಂಗ್ರೆಸ್‌ ಮುಖಂಡ ರೇವಣ್ಣ ಸಿದ್ದಯ್ಯ ಅವರನ್ನು ಭೇಟಿಯಾಗಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಕೂಡಾ ಅಸಮಾಧಾನಿತರ ಮನವೊಲಿಕೆಗೆ ಮುಂದಾಗಿದ್ದಾರೆ.

Advertisement

ಕಾಂಗ್ರೆಸ್‌ ಮುಖಂಡ ರೇವಣ್ಣ ಸಿದ್ದಯ್ಯ ಅವರನ್ನು ಭಾನುವಾರ ಭೇಟಿ ಮಾಡಿದ್ದ ಬಿ.ವೈ.ವಿಜಯೇಂದ್ರ, ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಸೋಮವಾರ ರೇವಣ ಸಿದ್ದಯ್ಯ ಅವರ ತೋಟದ ಮನೆಗೆ ಭೇಟಿಯಿತ್ತ ಡಾ.ಯತೀಂದ್ರ, ಒಂದು ಗಂಟೆಗೂ ಹೆಚ್ಚು ಕಾಲ ಗೌಪ್ಯ ಮಾತುಕತೆ ನಡೆಸಿ, ಕಾಂಗ್ರೆಸ್‌ ಪಕ್ಷದಲ್ಲೆ ಇರುವಂತೆ ಕೋರಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ, ಹಿರಿಯ ಮುಖಂಡರಾದ ರೇವಣ್ಣ ಸಿದ್ದಯ್ಯಗೆ ಅಸಮಾಧಾನವಾಗಿರುವುದು ಸತ್ಯ, ಆದರೆ, ತಂದೆಯ ಸೂಚನೆಯಂತೆ ಅವರೊಂದಿಗೆ ಮಾತನಾಡಲು ಬಂದಿದ್ದೇನೆ. ಸದ್ಯದಲ್ಲೇ ತಂದೆ ಅವರು ಸಹ ಸಿದ್ದಯ್ಯ ಅವರೊಂದಿಗೆ ಮಾತನಾಡಲಿದ್ದು, ಎಲ್ಲಾ ಸಮಸ್ಯೆ ಬಗೆಹರಿಯಲಿದೆ ಎಂದರು.

ರೇವಣ್ಣ ಸಿದ್ದಯ್ಯ ಮಾತನಾಡಿ, ಚುನಾವಣೆಯಲ್ಲಿ ಎರಡೂ ಪಕ್ಷಕ್ಕೆ ಪ್ರಚಾರ ಮಾಡಲು ಸಾಧ್ಯವಿಲ್ಲ, ಉತ್ತಮ ವಾತಾವರಣ ಎಲ್ಲಿದೆ ಅಲ್ಲಿಗೆ ಬೆಂಬಲವಿದೆ. ಆದರೆ, ತಮಗೆ ಕಾಂಗ್ರೆಸ್‌ನಲ್ಲಿ ಕೆಲಸ ಮಾಡಲು ಪ್ರೋತ್ಸಾಹ ದೊರೆಯಲಿಲ್ಲ, ಈ ಬಗ್ಗೆ ಬೇಸರವಾಗಿದ್ದು, ಅದನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಒಂದು ರೀತಿಯಲ್ಲಿ ತಾವು ಪಕ್ಷದಿಂದ ಒಂದು ಹೆಜ್ಜೆ ಹೊರಹಾಕಿದ್ದೇನೆ. ಯಾರಿಗೆ ಬೆಂಗಲಿಸಬೇಕೆಂಬುದನ್ನು ಮುಂದೆ ನಿರ್ಧರಿಸಲಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next