ಪಾಟ್ನಾ: ಮಾಜಿ ಕೇಂದ್ರ ಹಣಕಾಸು ಸಚಿವ ಯಶ್ವಂತ್ ಸಿನ್ಹಾ ಶನಿವಾರ ಬಿಜೆಪಿಗೆ ಗುಡ್‌ಬೈ ಹೇಳಿದ್ದು, ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಹೇಳಿದ್ದಾರೆ.
ಪಾಟ್ನಾದ ಲ್ಲಿ ಶನಿವಾರ ನಡೆದ ‘ರಾಷ್ಟ್ರ ಮಂಚ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿನ್ಹಾ ‘ನಾನು ಬಿಜೆಪಿಯೊಂದಿಗಿನ ಸುದೀರ್ಘ ಸಂಬಂಧವನ್ನು ಕಡಿದುಕೊಳ್ಳುತ್ತಿದ್ದೇನೆ’ ಎಂದಿದ್ದಾರೆ.
ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿ ‘ದೇಶದ ಪ್ರಜಾಪ್ರಭುತ್ವ ಆತಂಕದಲ್ಲಿದೆ. ಪ್ರಜಾಪ್ರಭುತ್ವ ಉಳಿಸಲು ದೇಶವ್ಯಾಪಿ ಆಂದೋಲನ ನಡೆಸುತ್ತೇನೆ’ ಎಂದಿದ್ದಾರೆ.
‘ನಾನು ಮುಂದೆ ಯಾವುದೇ ರಾಜಕೀಯ ಪಕ್ಷಗಳನ್ನು ಸೇರುವುದಿಲ್ಲ. ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ. ನನಗೆ ಯಾವುದೇ ಹುದ್ದೆಯ ಆಸೆ ಇಲ್ಲ’ ಎಂದು 80 ರ ಹರೆಯದ ಸಿನ್ಹಾ ಹೇಳಿದರು.
ವಿಶೇಷವೆಂದರೆ ಸಮಾರಂಭದಲ್ಲಿ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ,ವಿಪಕ್ಷಗಳಾದ ಆರ್‌ಜೆಡಿ,ಕಾಂಗ್ರೆಸ್ ಮತ್ತು ಆಪ್ ಮುಖಂಡರು ವೇದಿಕೆಯಲ್ಲಿದ್ದರು.
ಸಿನ್ಹಾ ಅವರ ಪುತ್ರ ಜಯಂತ್ ಸಿನ್ಹಾ ಅವರು ಮೋದಿ ಸಂಪುಟದಲ್ಲಿ ನಾಗರಿಕ ವಿಮಾನಯಾನ ರಾಜ್ಯ ಖಾತೆಯ ಸಚಿವರಾಗಿದ್ದಾರೆ.
ಸಿನ್ಹಾ ಅವರು ವಾಜಪೇಯಿ ಸಂಪುಟದಲ್ಲಿ ವಿದೇಶಾಂಗ ಖಾತೆ ಬಳಿಕ ಹಣಕಾಸು ಖಾತೆಯನ್ನು ನಿರ್ವಹಿಸಿದ್ದರು.