ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಭಾರತದ ಸಾಮಾಜಿಕ ವ್ಯವಸ್ಥೆಯ ಹೆಮ್ಮೆಯ ಪ್ರತೀಕವಾದ ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಸಮಸ್ತ ಹಿಂದೂ ಸಮಾಜಕ್ಕೆ ಅವಮಾನಿಸುವ ಮೂಲಕ ಐಎನ್ ಡಿಎ ವಿಪಕ್ಷಗಳ ಒಕ್ಕೂಟದ ಹಿಂದೂ ವಿರೋಧಿ ನಿಲುವು ಬಹಿರಂಗವಾಗಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದುವರೆದು ಮಾತನಾಡಿ ತನ್ನ ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ನಿರ್ದಿಷ್ಟ ಸಮುದಾಯದ ಓಲೈಕೆಗಾಗಿ ಹಿಂದೂ ದ್ವೇಷಿ ಹೇಳಿಕೆಯ ಮೂಲಕ ಸನಾತನ ಧರ್ಮ ಅಪಮಾನಿಸಲು ಸ್ಟಾಲಿನ್ ಮುಂದಾಗಿದ್ದಾರೆ.
ಈ ಹಿಂದೆ ಬ್ರಿಟಿಷರು, ಮುಸ್ಲಿಂ ಮತಾಂಧ ರಾಜರು ಮತಾಂತರ, ದಬ್ಬಾಳಿಕೆಯ ಮೂಲಕ ಸನಾತನ ಧರ್ಮದ ನಿರ್ಮೂಲನೆಗೆ ವಿಫಲ ಪ್ರಯತ್ನಕ್ಕೆ ಮುಂದಾಗಿದ್ದರು. ಇದೀಗ ಅದೇ ಮನಸ್ಥಿತಿಯಲ್ಲಿ ಉದಯ ನಿಧಿ ಈ ಹೇಳಿಕೆಯ ಮೂಲಕ ಮಹಮ್ಮದ್ ಘೋರಿ, ಘಜನಿ ವಂಶದ ಪರಂಪರೆಯನ್ನು ಮುಂದುವರಿಸುವ ಕಾಯಕದಲ್ಲಿ ತೊಡಗಿದ್ದಾರೆ.
ಸನಾತನ ಧರ್ಮ ಕೇವಲ ಒಂದು ಧರ್ಮವಾಗಿರದೇ ಭಾರತದ ಜನರ ಜೀವನ ಪದ್ಧತಿಯಾಗಿದ್ದು, ಕೇವಲ ಅಲ್ಪಸಂಖ್ಯಾತ ಓಲೈಕೆ, ಕ್ರೈಸ್ತ ಮತಾಂತರ ಸಂಸ್ಥೆಗಳ ಹಿಡನ್ ಅಜೆಂಡಾದ ಟೂಲ್ ಕಿಟ್ ಭಾಗವಾಗಿ ಉದಯನಿಧಿ ಬಹು ಸಂಖ್ಯಾತ ಹಿಂದೂ ದ್ವೇಷಿ ನಿಲುವು ತಾಳಿ ಓರ್ವ ಜವಾಬ್ದಾರಿ ಸಚಿವನಾಗಿ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದ್ದಾರೆ.
ಉದಯನಿಧಿ ಹೇಳಿಕೆಗೆ ಐಎನ್ ಡಿಎ ಒಕ್ಕೂಟದ ಕಾಂಗ್ರೆಸ್ ಸಹಿತ ವಿವಿಧ ಪಕ್ಷಗಳು ಮೌನ ತಾಳುವ ಮೂಲಕ ಪರೋಕ್ಷವಾಗಿ ತಮ್ಮ ಸಹಮತ ಸೂಚಿಸಿ ಹಿಂದೂ ವಿರೋಧಿ ಹೇಳಿಕೆಗೆ ಸಮ್ಮತಿ ಸೂಚಿಸಿದೆ. ವಿಪಕ್ಷ ನಾಯಕರು ತಮ್ಮ ನಿಲುವನ್ನು ಕೂಡಲೇ ಸ್ಪಷ್ಟ ಪಡಿಸಬೇಕು. ತಮಿಳುನಾಡು ಸರ್ಕಾರ ಹಿಂದೂ ವಿರೋಧಿ ಹೇಳಿಕೆ ನೀಡಿದ ಉದಯನಿಧಿಯನ್ನು ಕೂಡಲೇ ಮಂತ್ರಿಸ್ಥಾನದಿಂದ ವಜಾಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಜನತೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.