1983ರ ವಿಶ್ವಕಪ್ ಫೈನಲ್‌ನಲ್ಲಿ ವೆಸ್ಟ್ ಇಂಡೀಸನ್ನು ಮಣಿಸಿ ಇತಿಹಾಸ ನಿರ್ಮಿಸಿದ ಭಾರತ, ಕೂಟದ ತನ್ನ ಪ್ರಥಮ ಲೀಗ್ ಪಂದ್ಯದಲ್ಲಿ ವಿಂಡೀಸನ್ನೇ ಮಣಿಸಿ ಅಭಿಯಾನ ಆರಂಭಿಸಿದ್ದು ಇನ್ನೊಂದು ರೋಚಕ ಕಥಾನಕ.
ಅಂದಿನ ಮ್ಯಾಂಚೆಸ್ಟರ್ ಪಂದ್ಯದಲ್ಲಿ ಕಪಿಲ್ ಪಡೆ 34 ರನ್ನುಗಳಿಂದ ಗೆದ್ದು ಬಂದಿತ್ತು. ಇದು ಎರಡು ಬಾರಿಯ ಚಾಂಪಿಯನ್ ವಿಂಡೀಸಿಗೆ ವಿಶ್ವಕಪ್‌ನಲ್ಲಿ ಎದುರಾದ ಮೊದಲ ಸೋಲು. ಈ ಪಂದ್ಯದಲ್ಲಿ ಭಾರತದ ಗಳಿಕೆ 8ಕ್ಕೆ 262 ರನ್. 89 ರನ್ ಬಾರಿಸಿದ ಯಶ್ಪಾಲ್ ಟಾಪ್ ಸ್ಕೋರರ್. ಇದು ಈ ಪಂದ್ಯದ ಏಕೈಕ ಅರ್ಧ ಶತಕವೂ ಆಗಿತ್ತು. ಪಂದ್ಯಶ್ರೇಷ್ಠ ಯಶ್ಪಾಲ್ ಅವರ ಈ ಸಾಹಸಮಯ ಬ್ಯಾಟಿಂಗ್ ಪ್ರದರ್ಶನ ಮತ್ತು ಲಾಯ್ಡ ಪಡೆಯೆದುರು ಸಾಧಿಸಿದ ಅಮೋಘ ಗೆಲುವೇ ಭಾರತೀಯ ಕ್ರಿಕೆಟಿನ ಸುವರ್ಣ ಅಧ್ಯಾಯಕ್ಕೆ ನಾಂದಿಯಾಯಿತು ಎಂಬುದು ಹೆಮ್ಮೆಯ ಸಂಗತಿ.
ಇದನ್ನೂ ಓದಿ :ಮಂಗಳೂರು ನನ್ನ ಫೇವರಿಟ್: ಕುಡ್ಲದ ಬಗ್ಗೆ ಅಭಿಮಾನ ಮೆರೆದ ರಾಹುಲ್
ಇದೇ ಅಂಗಳದಲ್ಲಿ ನಡೆದ ಆತಿಥೇಯ ಇಂಗ್ಲೆಂಡ್ ಎದುರಿನ ಸೆಮಿಫೈನಲ್ ಚೇಸಿಂಗ್ ವೇಳೆ ಯಶ್ಪಾಲ್ ನೀಡಿದ 61 ರನ್ ಕೊಡುಗೆಯನ್ನು ಮರೆಯುವಂತಿಲ್ಲ. ಅಂದು ಕೂಡ ಯಶ್ಪಾಲ್ ಅವರೇ ಟಾಪ್ ಸ್ಕೋರರ್ ಆಗಿದ್ದರು. ಆಸೀಸ್ ಎದುರಿನ ಅಂತಿಮ ಲೀಗ್ ಪಂದ್ಯದಲ್ಲೂ ಯಶ್ಪಾಲ್ ಶರ್ಮ ಅವರದೇ ಸರ್ವಾಧಿಕ ಗಳಿಕೆ ಆಗಿತ್ತು (40 ರನ್).
ಆದರೆ ವಿಶ್ವಕಪ್ ಆರಂಭಿಕ ಪಂದ್ಯದ ದೃಶ್ಯಾವಳಿ ಲಭ್ಯವಿಲ್ಲ. ಇದಕ್ಕಾಗಿ ಯಶ್ಪಾಲ್ ಎಷ್ಟೋ ಸಲ ಬಿಬಿಸಿ ಮೊರೆ ಹೋಗಿದ್ದರು. ಯಾರಲ್ಲಾದರೂ ಇದ್ದರೆ ದಯವಿಟ್ಟು ಕೊಡಿ, 5 ಸಾವಿರ ಪೌಂಡ್ ನೀಡಲಿಕ್ಕೂ ತಯಾರಿದ್ದೇನೆ ಎಂದು ವಿನಂತಿಸಿದ್ದರು.