Advertisement

ಯಶೋಧಾ ಶೆಣೈ; ಕೇರಳದ ಅತಿ ಕಿರಿಯ ಗ್ರಂಥಪಾಲಕಿ

01:08 PM Jun 09, 2020 | mahesh |

ಸಾಮಾನ್ಯವಾಗಿ ಗ್ರಂಥಪಾಲಕರು ಎಂದಾಕ್ಷಣ ನಮ್ಮ ಮನಸ್ಸಲ್ಲಿ ವಯಸ್ಸಾದ ವ್ಯಕ್ತಿಯ ಚಿತ್ರಣ ಮೂಡುತ್ತದೆ. ಆದರೆ 7ನೇ ತರಗತಿ ಓದುವ ಹುಡುಗಿ ಗ್ರಂಥ ಪಾಲಕಿಯಾಗಬಹುದು ಎಂದು ನೀವೆಂದಾದರೂ ಅಂದುಕೊಂಡಿದ್ದೀರಾ? ಇಂತಹ ಅಪರೂಪಕ್ಕೆ ಸಾಕ್ಷಿ ಯಶೋಧಾ ಶೆಣೈ.

Advertisement

ಕೇರಳದ ಎರ್ನಾಕುಲಂ ಜಿಲ್ಲೆಯ ಮಟ್ಟಂಚೇರಿಯ 12 ವರ್ಷದ ಈ ಪೋರಿ ತನ್ನದೇ ಆದ ಗ್ರಂಥಾಲಯವನ್ನು ನಡೆಸುತ್ತಿದ್ದಾಳೆ. ಸಾಮಾನ್ಯವಾಗಿ ಶಾಲಾ ಕಾಲೇಜುಗಳಲ್ಲಿ, ನಗರದ ಪ್ರಮುಖ ಸ್ಥಳಗಳಲ್ಲಿ, ಪಂಚಾಯಾತ್‌ ವ್ಯಾಪ್ತಿಯ ಪ್ರದೇಶಗಳಲ್ಲಿ ಗ್ರಂಥಾಲಯಗಳನ್ನು ನಾವು ನೋಡುತ್ತೇವೆ. ಅದರ ಸದಸ್ಯರಾಗಬೇಕೆಂದರೆ ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಆದರೆ ಯಶೋಧಾಳ ಗ್ರಂಥಾಲಯ ಇವೆಲ್ಲಕ್ಕಿಂತ ವಿಭಿನ್ನ. ಆಕೆ ಮನೆಯ ಮೇಲ್ಮಹಡಿಯಲ್ಲೇ ಇರುವ ಈ ಗ್ರಂಥಾಲಯದ ಸದಸ್ಯರಾಗಲು ನೀವ್ಯಾವುದೇ ಹಣ ಪಾವತಿಸಬೇಕಿಲ್ಲ. ಈಗಾಲೇ ಸುಮಾರು 110 ಸದಸ್ಯರೂ ಈ ಗ್ರಂಥಾಲಯಕ್ಕಿದ್ದಾರೆ.

ತಾನು 3ನೇ ತರಗತಿಯಲ್ಲಿರುವ ಸಂದರ್ಭದಲ್ಲಿಯೇ ಓದಿನ ಗೀಳು ಅಂಟಿಸಿಕೊಂಡಿದ್ದ ಈಕೆಗೆ ಪುಸ್ತಕಗಳೆಂದರೆ ಪಂಚಪ್ರಾಣ. ಒಮ್ಮೆ ಇವರ ತಂದೆ ಗ್ರಂಥಾಲಯದಿಂದ ಮಗಳಿಗಾಗಿ ತಂದ ಪುಸ್ತಕ ಹಿಂದಿರುಗಿಸಲು ತಡವಾದ ಕಾರಣ ದಂಡ ಪಾವತಿಸಬೇಕಾಯಿತಂತೆ. ಇದರಿಂದಾಗಿ ವಿಚಲಿತಗೊಂಡ ಯಶೋಧಾ, ಅಪ್ಪಾ ನಮ್ಮ ಕತೆಯೇ ಹೀಗಾದರೆ ಇನ್ನು ಬಡ ಮಕ್ಕಳು ಪುಸ್ತಕ ಓದುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದರಂತೆ. ಇದೇ ಮುಂದೆ ಊರಿನ ಬಡ ಮಕ್ಕಳಿಗಾಗಿ ಇವರು ಗ್ರಂಥಾಲಯ ತೆರೆಯಲು ಸ್ಫೂರ್ತಿಯಾದ್ದು.

ವೃತ್ತಿಯಲ್ಲಿ ಪೇಂಟರ್‌ ಆಗಿದ್ದ ಯಶೋಧಾಳ ತಂದೆ ಮಗಳ ಇಚ್ಛೆಯ ಈಡೇರಿಕೆಗಾಗಿ ಮನೆಯ ಮೇಲ್ಮಹಡಿಯಲ್ಲಿ ಪುಸ್ತಕಗಳ ಜೋಡಣೆಗೆ ವ್ಯವಸ್ಥೆ ಮಾಡುವ ಜತೆಗೆ ಕೂತು ಓದಲು ಅನುಕೂಲವಾಗುವ ನಿಟ್ಟಿನಲ್ಲಿ ನಾಲ್ಕಾರು ಕುರ್ಚಿ, ಟೇಬಲ್‌ಗ‌ಳನ್ನೂ ಹಾಕಿದರು. ಆರಂಭದಲ್ಲಿ ತಮ್ಮಲ್ಲೇ ಇರುವ ಪುಸ್ತಗಳನ್ನು ಗ್ರಂಥಾಲಯದಲ್ಲಿ ಇಡಲಾಗಿತ್ತಾದರೂ ಬಳಿಕ ದಾನಿಗಳಿಂದ ಬಳುವಳಿಯಾಗಿ ಬಂದ ನೂರಾರು ಪುಸ್ತಕಗಳು ಗ್ರಂಥಾಲಯದ ಭಾರ ಹೆಚ್ಚಿಸಿದವು. ಕಾಲಡಿ ಶಂಕರ ವಿಶ್ವವಿದ್ಯಾಲಯದ ಉಪಕುಲಪತಿ ಡಾಣ ಕೆ.ಎಸ್‌. ರಾಧಾಕರಷ್ಣನ್‌ ಅವರು ಈ ಗ್ರಂಥಾಲಯ ಲೋಕರ್ಪಾಣೆಗೊಳಿಸಿದ್ದಾರೆ.

ಮಲೆಯಾಳಂ, ಹಿಂದಿ, ಇಂಗ್ಲಿಷ್‌, ಕೊಂಕಣಿ ಭಾಷೆಗಳ ಸುಮಾರು 3,500 ಪುಸ್ತಕಗಳು ಈ ಗ್ರಂಥಾಲಯದಲ್ಲಿ ಲಭ್ಯವಿದ್ದು, ಒಮ್ಮೆ ಇಲ್ಲಿಂದ ತೆಗೆದುಕೊಂಡ ಪುಸ್ತಕವನ್ನು ಹಿಂದಿರುಗಿಸಲು ಎರಡುವಾರಗಳ ಅವಕಾಶವಿದೆ. ಒಂದೊಮ್ಮೆ ತಡವಾದರೂ ಚಿಂತಿಸಬೇಕಿಲ್ಲ. ಅಂಥಹ ಸಂದರ್ಭ ನಿಮಗೆ ಯಾವುದೇ ದಂಡವನ್ನು ಇಲ್ಲಿ ವಿಧಿಸಲಾಗುವುದಿಲ್ಲ. ಹಿರಿಯರಿಗೆ ಮತ್ತು ಅನಾರೋಗ ಪೀಡಿತರಿಗೆ ಮನೆ ಬಾಗಿಲಿಗೇ ಪುಸ್ತಕ ಒದಗಿಸುವ ಸೌಲಭ್ಯವೂ ಈ ಗ್ರಂಥಾಲಯದಲ್ಲಿದೆ. ಎರಡೂವರೆ ವರ್ಷದ ಮಗು ಈ ಗ್ರಂಥಾಲಯದ ಅತೀ ಕಿರಿಯ ಸದಸ್ಯ.

Advertisement

ಬೆಳಗ್ಗೆ 9ರಿಂದ ಸಂಜೆ 7ರ ವರೆಗೆ ಈ ಗ್ರಂಥಾಲಯ ತೆರೆದಿರುತ್ತದೆ. ಯಶೋಧಾ ಅವರು ಸಂಜೆ 4ರಿಂದ 7ರ ವರೆಗೆ ಗ್ರಂಥಾಲಯದ ಜವಬ್ದಾರಿ ನೋಡಿಕೊಳ್ಳುತ್ತಾರೆ. ಉಳಿದ ಸಮಯದಲ್ಲಿ ಇವರ ಹಿರಿಯ ಸಹೋದರ ಮತ್ತು ಹೆತ್ತವರು ನಿರ್ವಹಿಸುತ್ತಾರೆ. ವೃತ್ತಿಪರ ಗ್ರಂಥಾಲಯಗಳ ಮಾದರಿಯಲ್ಲೇ ಇದು ಕಾರ್ಯನಿರ್ವಹಿಸುತ್ತಿದ್ದು, ಓದು ಎಲ್ಲರಿಗೂ ಸುಲಭವಾಗಿ ಮತ್ತು ಉಚಿತವಾಗಿ ದೊರಯಬೇಕೆಂಬುದೇ ಈ ಗ್ರಂಥಾಲಯದ ಪರಮೋದ್ದೇಶ.

Advertisement

Udayavani is now on Telegram. Click here to join our channel and stay updated with the latest news.

Next