Advertisement

ಯಶಸ್ವಿನಿ ಯೋಜನೆ ಅನುಷ್ಠಾನಕ್ಕೆ ಆದೇಶ

03:33 PM Oct 29, 2022 | Team Udayavani |

ದೇವನಹಳ್ಳಿ: ರಾಜ್ಯದ ಸಹಕಾರ ರಂಗದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದ ಯಶಸ್ವಿ ಯೋಜನೆಯನ್ನು ಮತ್ತೆ ರಾಜ್ಯದಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಅಧಿಕೃತ ಆದೇಶವನ್ನು ಹೊರಡಿಸಿದ್ದು, ಯಶಸ್ವಿನಿ ಕಾರ್ಡ್‌ ಪಡೆಯಲು ನ.1ರಿಂದ ನೋಂದಣಿ ಕಾರ್ಯ ಶುರುವಾಗಲಿದೆ.

Advertisement

ರಾಜ್ಯ ಸರ್ಕಾರ ಯಶಸ್ವಿನಿ ಯೋಜನೆಯನ್ನು ಪುನಃ ಆರಂಭಿಸುವ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್‌ ನಲ್ಲಿ ಘೋಷಿಸಿದ್ದರು. ಸಹಕಾರ ಇಲಾಖೆಯಲ್ಲಿ 2003ರಲ್ಲಿ ಜಾರಿಗೆ ತಂದಿದ್ದ ಯಶಸ್ವಿ ಯೋಜನೆ ರಾಜ್ಯದಲ್ಲಿ 2017-18ರವರೆಗೂ ಅಸ್ತಿತ್ವದಲ್ಲಿತ್ತು. ಬಳಿಕ ಸರ್ಕಾರ ಯೋಜನೆಯನ್ನು ಸ್ಥಗಿತಗೊಳಿಸಿತ್ತು. ಆದರೆ, ರಾಜ್ಯದಲ್ಲಿ ಯಶಸ್ವಿ ಯೋಜನೆಯನ್ನು ಮತ್ತೆ ಆರಂಭಿಸಬೇಕೆಂಬ ನಿಟ್ಟಿನಲ್ಲಿ ಸಹಕಾರ ಕ್ಷೇತ್ರದಲ್ಲಿ ಅದರಲ್ಲೂ ರೈತ ವಲಯದಲ್ಲಿ ಹೆಚ್ಚು ಬೇಡಿಕೆ ಬಂದ ಹಿನ್ನೆಲೆ, ಸರ್ಕಾರ ಇದೀಗ ಯಶಸ್ವಿ ಯೋಜನೆ ಅನುಷ್ಠಾನಕ್ಕೆ ಮುಂದಾಗುವ ಮೂಲಕ ಸಹಕಾರ ಕ್ಷೇತ್ರದ ಸದಸ್ಯರಿಗೆ ಆರೋಗ್ಯ ರಕ್ಷಣೆ ನೀಡಲು ಮುಂದಾಗಿದೆ.

4 ಮಂದಿ ಸದಸ್ಯರಿಗೆ ಅನ್ವಯ: ಜಿಲ್ಲಾ ಕೇಂದ್ರ ಬ್ಯಾಂಕ್‌, ಪ್ರಾಥಮಿತ ಕೃಷಿ ಪತ್ತಿನ ಸಹಕಾರ ಸಂಘ, ಗ್ರಾಮೀಣ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಈ ಯೋಜನೆ ಅನ್ವಯಿಸಲಿದೆ.  ಗ್ರಾಮೀಣ ಭಾಗದಲ್ಲಿ 1ಕುಟುಂಬದಲ್ಲಿ 4 ಮಂದಿ ಸದಸ್ಯರಿಗೆ ಅನ್ವಯವಾಗುವಂತೆ ವಂತಿಗೆ ಶುಲ್ಕವನ್ನು 500ರೂ. ನಿಗದಿಪಡಿಸಿದ್ದರೆ, ನಗರ ಪ್ರದೇಶದಲ್ಲಿ 1000 ರೂ. ವಂತಿಗೆ ಶುಲ್ಕ ಯಶಸ್ವಿನಿ ನೋಂದಣಿಯಾಗಿ ಪಾವತಿಸಬೇಕಿದೆ. ವಾರ್ಷಿಕ ವಂತಿಗೆ ಭರಿಸುವ ಭರವಸೆ: ನಾಲ್ಕಕ್ಕಿಂತ ಹೆಚ್ಚು ಸದಸ್ಯರಿಗೆ ಯಶಸ್ವಿ ಸೌಲಭ್ಯ ಪಡೆಯಲು ವಂತಿಗೆ ಮೇಲೆ ಶೇ.20ರಷ್ಟು ಹೆಚ್ಚುವರಿ ಶುಲ್ಕ ಕಟ್ಟಬೇಕಿದೆ. ಪ.ಜಾತಿ ಹಾಗೂ ಪಂಗಡಕ್ಕೆ ಸರ್ಕಾರವೇ ವಾರ್ಷಿಕ ವಂತಿಗೆ ಭರಿಸುವ ಭರವಸೆ ನೀಡಿದೆ. ವಿಶೇಷ ಅಂದರೆ ಸಹಕಾರಿ ಮೀನುಗಾರರು, ಸಹಕಾರಿ ಬೀಡಿ ಕಾರ್ಮಿಕರಿಗೆ ಹಾಗೂ ಸಹಕಾರಿ ನೇಕಾರರಿಗೆ ಈ ಸೌಲಭ್ಯ ಸರ್ಕಾರ ವಿಸ್ತರಿಸಿದೆ.

ಯಶಸ್ವಿನಿ ಯೋಜನೆ ವಿಶೇಷ: ಯಶಸ್ವಿನಿ ಯೋಜನೆಯಡಿ ಸದಸ್ಯರಿಗೆ ಯೂನಿಕ್‌ ಐಡಿ ಕಾರ್ಡ್‌ ವಿತರಣೆ ಆಗಲಿದೆ. ಯಶಸ್ವಿನಿ ನೆಟ್‌ ವರ್ಕ್‌ ಇರುವ ಯಾವುದೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ದಾಖಲಾಗಿ ಕಾರ್ಡ್‌ ತೋರಿಸಿದರೆ ಅರ್ಜಿದಾರರ ಜೊತೆಗೆ ಅವರ ಅವಲಂಬಿತ ಕುಟುಂಬದ ಸದಸ್ಯರ ಸಂಪೂರ್ಣ ವಿವರ ಲಭ್ಯವಾಗಲಿದೆ.

ಯಶಸ್ವಿನಿ ಕಾರ್ಡ್‌ ಬಳಸಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಿದೆ. ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಯಶಸ್ವಿ ಯೋಜನೆಯಡಿ ಕಲ್ಪಿಸಲಾಗಿದೆ. ಕೇವಲ ಜನರಲ್‌ ವಾರ್ಡ್‌ನಲ್ಲಿ ಮಾತ್ರ ಚಿಕಿತ್ಸೆಗೆ ಅವಕಾಶವಿದ್ದು, ಯಶಸ್ವಿನಿ ಕಾರ್ಡ್‌ ಪಡೆದ 15ದಿನಗಳಿಗೆ ಚಿಕಿತ್ಸೆ ಪಡೆಯಬಹುದು.

Advertisement

ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆ : ಯಶಸ್ವಿ ಯೋಜನೆಯಡಿ ಫ‌ಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸಾ ವೆಚ್ಚದ ಗರಿಷ್ಠ ಮಿತಿಯನ್ನು 5ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ರಾಜ್ಯದ ಯಾವುದೇ ಯಶಸ್ವಿನಿ ನೆಟ್‌ವರ್ಕ್‌ ಇರುವ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿದೆ. ಈ ಯೋಜನೆಯು ಕೇವಲ ಸಹಕಾರ ಸಂಘಗಳ ಕಾಯ್ದೆಯಡಿ ಹಾಗೂ ಸೌಹಾರ್ದ ಸಹಕಾರ ಸಂಘಗಳ ಕಾಯ್ದೆಯಡಿ ನೋಂದಣಿ ಆಗಿ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘಗಳ ಸದಸ್ಯರಿಗೆ ಮಾತ್ರ ಅನ್ವಯಿಸಲಿದೆ. ಯಶಸ್ವಿನಿ ಯೋಜನೆಯನ್ನು ಸರ್ಕಾರ ನ.1ರಿಂದ ಜಾರಿಗೆ ತರುತ್ತಿದೆ. ಡಿಸೆಂಬರ್‌ನೊಳಗೆ ಯಶಸ್ವಿನಿ ನೋಂದಣಿಯಾಗಬೇಕು. ತಾಲೂಕುವಾರು ಸಹಕಾರ ಸಂಘಗಳ ಅಧಿಕಾರಿಗಳ ಮೂಲಕ ವಿವಿಧ ಸದಸ್ಯರ ಸಭೆ ಮಾಡಲಾಗುತ್ತಿದೆ. ಗ್ರಾಮೀಣ ಜನರಿಗೆ ಅನುಕೂಲ ಆಗುವ ಕಾರ್ಯಕ್ರಮ ಇದಾಗಿದೆ. ಎಲ್ಲಾ ಆಸ್ಪತ್ರೆಗಳಲ್ಲಿಯೂ ಸಹಕಾರ ಸಂಘದ ಸದಸ್ಯರು ಯಶಸ್ವಿನಿ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳಬೇಕು. -ರಮೇಶ್‌, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ

 -ಎಸ್‌. ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next