ಸುವರ್ಣ ವಿಧಾನಸೌಧ: ಯಶಸ್ವಿನಿ ಯೋಜನೆಯಲ್ಲಿ ಗ್ರಾಮಾಂತರ ಹಾಗೂ ನಗರ ಸಹಕಾರಿ ಸಂಘಗಳ ಸದಸ್ಯರಿಗೆ ಪಾವತಿಸಬೇಕಾಗುವ ವಂತಿಗೆಯಲ್ಲಿ ತಾರತಮ್ಯದಿಂದಾಗಿ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಲು ಸಹಕಾರಿ ಸದಸ್ಯರು ಹಿಂದೇಟು ಹಾಕುತ್ತಿರುವ ವಿಚಾರ ಗುರುವಾರ ವಿಧಾನ ಪರಿಷತ್‌ನಲ್ಲಿ ಗಮನ ಸೆಳೆಯಿತು.
ಗುರುವಾರ ಸದಸ್ಯ ಮಂಜುನಾಥ ಭಂಡಾರಿ ಅವರು ಕಲಾಪದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತುತ ಪಡಿಸಿ, ಉದಯವಾಣಿಯ ಮುಖಪುಟದಲ್ಲಿ ಈ ಕುರಿತು ಪ್ರಕಟವಾದ ವರದಿಯನ್ನು ಉಲ್ಲೇಖೀಸಿದರು. ಯಶಸ್ವಿನಿ ನೋಂದಣಿಗೆ ಪಾವತಿಸಬೇಕಾಗಿರುವ ವಂತಿಗೆಯಲ್ಲಿರುವ ತಾರತಮ್ಯ ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಹಕಾರಿ ಸಚಿವರನ್ನು ಒತ್ತಾಯಿಸಿದರು.
ಸಹಕಾರ ಸಚಿವರ ಪರವಾಗಿ ಉತ್ತರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಈ ಕುರಿತು ಸಹಕಾರ ಸಚಿವರಿಂದ ಉತ್ತರ ಪಡೆದು ಒದಗಿಸುವುದಾಗಿ ತಿಳಿಸಿದರು.
ಹೆಚ್ಚುವರಿ ಸದಸ್ಯರಿಗೆ 200 ರೂ.:
ಯಶಸ್ವಿನಿಯಲ್ಲಿ ಗ್ರಾಮೀಣ ಸಹಕಾರ ಸಂಘಗಳ/ಸ್ವಸಹಾಯ ಗುಂಪುಗಳ ನಾಲ್ಕು ಸದಸ್ಯರ ಕುಟುಂಬವೊಂದಕ್ಕೆ ವಾರ್ಷಿಕ 500 ರೂ. ವಂತಿಗೆ ಹಾಗೂ ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿ ಸದಸ್ಯರಿಗೆ ಶೇ.20ರಷ್ಟು ಹೆಚ್ಚುವರಿಯಾಗಿ ಎಂದರೆ ಪ್ರತಿ ಹೆಚ್ಚುವರಿ ಸದಸ್ಯರಿಗೆ 100 ರೂ. ಪಾವತಿಸಬೇಕಾಗುತ್ತದೆ. ಆದರೆ ನಗರ ಸದಸ್ಯರ ವಿಚಾರದಲ್ಲಿ ಮಾತ್ರ ವಂತಿಗೆ ದರ ಬದಲಾಗಿದೆ. ನಗರ ಸಹಕಾರಿ ಸಂಘಗಳ ಗರಿಷ್ಠ 4 ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ 1000 ರೂ. ವಂತಿಗೆ ಮತ್ತು ಹೆಚ್ಚುವರಿ ಸದಸ್ಯರಿಗೆ 200 ರೂ. ನೀಡಬೇಕಾಗುತ್ತದೆ ಎಂದು ಉದಯವಾಣಿ ಡಿ.28ರಂದು ವರದಿ ಪ್ರಕಟಿಸಿತ್ತು