Advertisement

ವಿಶೇಷ ಚೇತನರ ಚೆಸ್ ಕೂಟಕ್ಕೆ ‘ಯಶಸ್ವಿ’ಆಯ್ಕೆ

02:10 AM Jun 05, 2018 | Team Udayavani |

ಬಂಟ್ವಾಳ: ಇಂಗ್ಲೆಂಡ್‌ನ‌ಲ್ಲಿ ಜು. 6ರಿಂದ 16ರವರೆಗೆ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ವಿಶೇಷ ಚೇತನರ ಚೆಸ್‌ ಟೂರ್ನಿಗೆ ಬಂಟ್ವಾಳ ತಾಲೂಕು ಕಡೇಶಿವಾಲಯ ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿನಿ ಯಶಸ್ವಿ ಆಯ್ಕೆಯಾಗಿದ್ದಾಳೆ. ಹಳ್ಳಿ ಹುಡುಗಿ ಒಬ್ಬಳು ಅಂತಾರಾಷ್ಟ್ರೀಯ ಮಟ್ಟದ ವಿಶೇಷಚೇತನರ ಚದುರಂಗ ಸ್ಪರ್ಧೆಯಲ್ಲಿ ಭಾಗವಹಿಸಲು ದೂರದ ಇಂಗ್ಲೆಂಡ್‌ ಗೆ ಹಾರಲಿದ್ದಾಳೆ ಎಂಬುದೇ ಇಲ್ಲಿನ ಮಹತ್ವ.

Advertisement


ದ.ಕ. ಜಿಲ್ಲೆಯ ಪುತ್ತೂರಿನ ಜೀನಿಯಸ್‌ ಚೆಸ್‌ ಅಕಾಡೆಮಿಯಲ್ಲಿ 3 ವರ್ಷ ತರಬೇತಿ ಪಡೆದಿರುವ 10ನೇ ತರಗತಿಯ ವಿದ್ಯಾರ್ಥಿನಿ ಯಶಸ್ವಿ ಬಂಟ್ವಾಳ SVS ಕಾಲೇಜಿನ ವಿಭಾಗದ ಲ್ಯಾಬ್‌ ಅಸಿಸ್ಟೆಂಟ್‌ ತಿಮ್ಮಪ್ಪ ಮೂಲ್ಯ ಕೆ. ಮತ್ತು ಪೆರ್ನೆ ಗ್ರಾಮ ಕಾರ್ಲ ಹಿ.ಪ್ರಾ. ಶಾಲಾ ಶಿಕ್ಷಕಿ ಯಶೋದಾ ದಂಪತಿಯ ಪುತ್ರಿ. ಶ್ರವಣ ಶಕ್ತಿ ಕೊರತೆ ಇರುವ, ಮಾತನಾಡಲು ಕಷ್ಟಪಡುವ ಈಕೆ ಅದ್ಭುತ ಏಕಾಗ್ರತೆ ಹೊಂದಿದ್ದಾಳೆ. ಹುಟ್ಟಾ ಶ್ರವಣದೋಷವಿದ್ದ ಈಕೆಯನ್ನು ಹೆತ್ತವರು ವಿಶೇಷ ಮುತುವರ್ಜಿ ವಹಿಸಿ ಓದು ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿದರು. ಚೆಸ್‌ ನಲ್ಲಿ ಈಕೆಗೆ ಇದ್ದ ವಿಶೇಷ ಆಸಕ್ತಿ ಗಮನಿಸಿದ ಹೆತ್ತವರು ಪುತ್ತೂರಿನಲ್ಲಿ ಚೆಸ್‌ ತರಬೇತಿ ಕೊಡಿಸಿದರು. 3 ವರ್ಷಗಳಲ್ಲಿ ಚೆಸ್‌ ನಲ್ಲಿ ಅದ್ಭುತ ಸಾಧನೆ ಮಾಡಿದ್ದಾಳೆ. 1,300 ಫಿಡೆ ರೇಟಿಂಗ್‌ ಹೊಂದಿರುವ ಯಶಸ್ವಿಯ ಯಶಸ್ಸಿನ ಪಥದಲ್ಲಿ ಇದು ಮೊದಲ ಹೆಜ್ಜೆ. ಸಾಧಿಸುವುದು ಇನ್ನೂ ಬಹಳಷ್ಟಿದೆ ಎಂಬುದು ಆಕೆಯ ಹೆತ್ತವರ ನುಡಿ.

ಚೆಸ್‌ ನತ್ತ ಹೆಚ್ಚಿನ ಆಸಕ್ತಿ
ಹುಟ್ಟಾ ಶ್ರವಣದೋಷವಿದ್ದರೂ, ಕಲಿಕೆ, ಗ್ರಹಿಕಾ ಸಾಮರ್ಥ್ಯದಲ್ಲಿ ಯಶಸ್ವಿ ಮುಂದಿದ್ದಾಳೆ. ಸಣ್ಣವಳಿದ್ದಾಗಲೇ ಚೆಸ್‌ನತ್ತ ಹೆಚ್ಚಿನ ಆಸಕ್ತಿ ಇರುವುದನ್ನು ಗಮನಿಸಿದ ತಾಯಿ ಪುತ್ರಿ 6ನೇ ತರಗತಿಯಲ್ಲಿರುವಾಗ ಸ್ವತಃ ಚೆಸ್‌ ಆಟಗಾರರಾಗಿರುವ ಸತ್ಯಪ್ರಸಾದ್‌ ಕೋಟೆ ಅವರು ನಡೆಸುತ್ತಿರುವ ಪುತ್ತೂರು ಜೀನಿಯಸ್‌ ಚೆಸ್‌ ಅಕಾಡೆಮಿಗೆ ಸೇರಿಸಿದ್ದರು. ಅಲ್ಲಿಂದ ಯಶಸ್ವಿಯ ಯಶಸ್ಸಿನ ಪಯಣ ಆರಂಭವಾಗುತ್ತದೆ. ಪ್ರತಿದಿನ ಶಾಲೆ ಬಿಟ್ಟ ಬಳಿಕ ಪುತ್ತೂರಿಗೆ ಚೆಸ್‌ ಕಲಿಕೆಗೆ ಹೋಗುವುದು, ಬಳಿಕ ಮನೆಗೆ ಬರುವಾಗ ರಾತ್ರಿಯಾಗುತ್ತಿತ್ತು. ಅವರ ಶ್ರಮ ಯಾವುದೂ ಹೆತ್ತವರಿಗೆ ಹೊರೆಯಾಗಲಿಲ್ಲ. ಬದಲಾಗಿ ಯಶಸ್ವಿ ಹಲವು ಪ್ರಶಸ್ತಿ ಮನ್ನಣೆ ಪಡೆದಿದ್ದರೆ, ಅದಕ್ಕೆ ತರಬೇತಿಯೇ ಕಾರಣ ಎಂಬುದು ಅವರ ಅಭಿಪ್ರಾಯ.

ಗ್ರಹಣಶಕ್ತಿ ವಿಶಿಷ್ಟ
ಚೆಸ್‌ ನ ಆರಂಭಿಕ ಪಾಠ, ತಂತ್ರಗಾರಿಕೆಯನ್ನು ಕೋಟೆಯವರ ಪತ್ನಿ ಹೇಳಿಕೊಟ್ಟಿದ್ದಾರೆ. ಕಿವಿ ಕೇಳಿಸದೆ, ಮಾತು ಬಾರದೇ ಇರುವ ಬಾಲಕಿಗೆ ಕಲಿಸಿದ್ದು ಗೊತ್ತಾಗುತ್ತದೆಯೋ ಇಲ್ಲವೋ ಎಂಬ ಅನುಮಾನ ನಮಗೂ ಇತ್ತು. ಅವಳ ಗ್ರಹಣಶಕ್ತಿ ವಿಶಿಷ್ಟವಾಗಿದೆ.
– ಯಶೋದಾ, ಯಶಸ್ವಿಯ ತಾಯಿ

ಉತ್ತಮ ಪ್ರತಿಭೆ
ಆಕೆಯಲ್ಲಿನ ಗ್ರಹಿಕಾ ಸಾಮರ್ಥ್ಯ ಅದ್ಭುತವಾಗಿತ್ತು. ಒಂದೊಂದು ಹಂತದ ಕಲಿಕೆಯನ್ನು ಅಭ್ಯಸಿಸಿದ ಯಶಸ್ವಿ ಬೇಗ ಪಿಕಪ್‌ ಆದಳು. ಅಂತಾರಾಷ್ಟ್ರೀಯ ಮಟ್ಟದ ಫಿಡೆ ರೇಟಿಂಗ್‌ನಲ್ಲಿ 1,300ರವರೆಗೆ ತಲುಪಿದ್ದಾಳೆ. ಹಲವಾರು ಪ್ರಶಸ್ತಿ ಗಳಿಸಿದ್ದಾಳೆ. ಆದು ಆಕೆಯನ್ನು ರಾಷ್ಟ್ರೀಯ ಮಟ್ಟಕ್ಕೆ ಕರೆದುಕೊಂಡು ಹೋಯಿತು. ಈಗ ಇಂಗ್ಲೆಂಡ್‌ನ‌ಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಯಶಸ್ವಿಯಲ್ಲಿ ಉತ್ತಮ ಪ್ರತಿಭೆ ಇದೆ. ಏಕಾಗ್ರತೆ ಇದೆ. ಚೆಸ್‌ ನ ತಂತ್ರಗಾರಿಕೆಯನ್ನೂ ಕಲಿಯುತ್ತಿದ್ದಾಳೆ. ಭವಿಷ್ಯದಲ್ಲಿ ಉತ್ತಮ ಆಟಗಾರ್ತಿಯಾಗಬಹುದು.
– ಸತ್ಯಪ್ರಸಾದ್‌ ಕೋಟೆ, ಸ್ಥಾಪಕರು, ಜೀನಿಯಸ್‌ ಚೆಸ್‌ ಅಕಾಡೆಮಿ, ಪುತ್ತೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next