ಮುಂಬೈ: ಈ ಬಾರಿಯ ಐಪಿಎಲ್ ಕೂಟದಲ್ಲಿ ಅದ್ಭುತ ಪ್ರದರ್ಶನ ನೀಡಿದ ರಾಜಸ್ತಾನ ರಾಯಲ್ಸ್ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಗೆ ರಾಷ್ಟ್ರೀಯ ತಂಡದ ಕರೆ ಬಂದಿದೆ. ಮುಂದಿನ ತಿಂಗಳು ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಸ್ಟ್ಯಾಂಡ್ ಬೈ ಆಟಗಾರನಾಗಿ ಆಯ್ಕೆಯಾಗಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಡಬ್ಲ್ಯುಟಿಸಿ ಫೈನಲ್ ಗೆ ಬಿಸಿಸಿಐ ಋತುರಾಜ್ ಗಾಯಕ್ವಾಡ್ ಅವರನ್ನು ಸ್ಟ್ಯಾಂಡ್-ಬೈ ಓಪನರ್ ಆಗಿ ನೇಮಿಸಿತ್ತು, ಆದರೆ ಋತುರಾಜ್ ಗಾಯಕ್ವಾಡ್ ಅವರ ವಿವಾಹ ನಡೆಯಲಿರುವ ಕಾರಣ ಜೂನ್ 5 ರ ನಂತರ ಮಾತ್ರ ತಂಡಕ್ಕೆ ಸೇರಲು ಸಾಧ್ಯವಾಗುತ್ತದೆ. ಹೀಗಾಗಿ ಬಿಸಿಸಿಐ ಜೈಸ್ವಾಲ್ ಅವರನ್ನು ಆಯ್ಕೆ ಮಾಡಿದೆ. ಗಾಯಕ್ವಾಡ್ ವಿವಾಹ ಜೂನ್ 3ರಂದು ನಡೆಯಲಿದೆ.
ಇದನ್ನೂ ಓದಿ:ಒಂಟಿ ನೆಲೆಸಿದ್ದ ವೃದ್ಧೆ ಮನೆಗೆ ದುಷ್ಕರ್ಮಿಗಳು ನುಗ್ಗಿ ಹತ್ಯೆಗೈದು ಚಿನ್ನಾಭರಣ ದರೋಡೆ
ಜೈಸ್ವಾಲ್ ಇತ್ತೀಚಿನ ದಿನಗಳಲ್ಲಿ ಟಾಪ್ ಫಾರ್ಮ್‌ನಲ್ಲಿದ್ದಾರೆ. ಅವರು 2023ರ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಐದು ಅರ್ಧಶತಕಗಳು ಮತ್ತು ಶತಕಗಳೊಂದಿಗೆ 14 ಇನ್ನಿಂಗ್ಸ್‌ಗಳಲ್ಲಿ 625 ರನ್ ಗಳಿಸಿದರು. ಜೈಸ್ವಾಲ್ ಇನ್ನೂ ಯಾವುದೇ ಸ್ವರೂಪದಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿಲ್ಲ. ಅವರು 15 ಪಂದ್ಯಗಳಲ್ಲಿ 1845 ರನ್ ಗಳಿಸಿದ ಅತ್ಯುತ್ತಮ ಪ್ರಥಮ ದರ್ಜೆ ದಾಖಲೆಯನ್ನು ಹೊಂದಿದ್ದಾರೆ.
ಭಾರತ ತಂಡವು ಬ್ಯಾಚ್ ಗಳಲ್ಲಿ ಡಬ್ಲ್ಯೂಟಿಸಿ ಫೈನಲ್ ಗೆ ತೆರಳುತ್ತಿದೆ. ವಿರಾಟ್ ಕೊಹ್ಲಿ ಮೊದಲ ಬ್ಯಾಚ್ ನಲ್ಲಿ ಲಂಡನ್ ತಲುಪಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯವು ಜೂನ್ 7 ರಿಂದ 11 ರವರೆಗೆ ಓವಲ್ ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಣಸಲಿದೆ.