ಮುಂಬೈ: “ಈ ಹಿಂದೆ ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಉತ್ತರ ಭಾರತದ ಮಂದಿ ನಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದ್ದು, ಉತ್ತರದವರ ಅಭಿಪ್ರಾಯವೂ ಬೇರೆಯೇ ಆಗಿದೆ’ ಇದು ಕನ್ನಡದ ಹೆಸರಾಂತ ನಟ ಯಶ್ ಅವರ ಅಭಿಪ್ರಾಯ.
ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ಮಾತನಾಡಿದ ಅವರು, 10 ವರ್ಷಗಳ ಹಿಂದೆ ಉತ್ತರ ಭಾರತದವರು ನಮ್ಮ ಚಿತ್ರಗಳ ಆ್ಯಕ್ಷನ್ ಬಗ್ಗೆಯೂ ಆಡಿಕೊಳ್ಳುತ್ತಿದ್ದರು. ಇದಕ್ಕೆಲ್ಲಾ ಕಾರಣ, ಆಗಿನ ಡಬ್ಬಿಂಗ್. ಇಲ್ಲಿನ ಚಿತ್ರಗಳು ಕಡಿಮೆ ಹಣಕ್ಕೆ ಮಾರಾಟವಾಗುತ್ತಿದ್ದವು. ಹೀಗಾಗಿಯೇ ಕೆಟ್ಟ ಡಬ್ಬಿಂಗ್, ಕೆಟ್ಟ ಹೆಸರುಗಳಿಂದಾಗಿ ಇಲ್ಲಿನ ಚಿತ್ರಗಳು ಓಡುತ್ತಲೇ ಇರಲಿಲ್ಲ. ಆದರೆ, ಈ ಧೋರಣೆ ಬದಲಾಗಲು ಬಾಹುಬಲಿ ಕಾರಣ. ಇದರ ಸಂಪೂರ್ಣ ಶ್ರೇಯಸ್ಸು ರಾಜಮೌಳಿ ಸರ್‌ಗೆ ಸಲ್ಲಬೇಕು. ಇದಾದ ಬಳಿಕ ದಕ್ಷಿಣ ಭಾರತದ ಸಿನಿಮಾಗಳನ್ನು ನೋಡಲು ಶುರು ಮಾಡಿದರು ಎಂದರು.
ಇದನ್ನೂ ಓದಿ: ಕಪೂರ್ ಕುಟುಂಬದಲ್ಲಿ ಸಂಭ್ರಮ: ತಂದೆ – ತಾಯಿಯಾದ ರಣ್ಬೀರ್ – ಆಲಿಯಾ
ಸದ್ಯಕ್ಕಿಲ್ಲ ಕೆಜಿಎಫ್ 3: ನನ್ನ ಮುಂದಿನ ಚಿತ್ರದ ಬಗ್ಗೆ ಎಲ್ಲರಿಗೂ ನಿರೀಕ್ಷೆಗಳಿವೆ. ಸದ್ಯದಲ್ಲೇ ಈ ಬಗ್ಗೆ ಘೋಷಿಸಲಿದ್ದೇನೆ. ಅಲ್ಲದೆ, ಕೆಜಿಎಫ್ 1 ಮತ್ತು 2 ಮಾಡಲು 6-7 ವರ್ಷ ತೆಗೆದುಕೊಂಡೆವು. ಕೆಜಿಎಫ್ 3ರ ಬಗ್ಗೆ ಯೋಜನೆಯಿದೆ. ಆದರೆ ಸದ್ಯಕ್ಕೆ ಇಲ್ಲ ಎಂದರು.
ಕಾಂತಾರ ಬಗ್ಗೆ ಮಾತನಾಡಿದ ಅವರು, ಇದೂ ನಮ್ಮ ಸಿನಿಮಾವೇ ಎಂದರು. ಅಂದರೆ, ಇಲ್ಲಿ ಆಗುವ ಎಲ್ಲ ಸಿನಿಮಾಗಳು ನಮ್ಮವೇ ಎಂದು ಪರಿಗಣಿಸಬೇಕು ಎಂದರು.