Advertisement

ಯಾಸ್‌ ಚಂಡಮಾರುತದ ಪ್ರಭಾವ: ಕೇರಳದಲ್ಲಿ ಹೆಚ್ಚು ಮಳೆ :ಏಳು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ 

08:48 PM May 24, 2021 | Team Udayavani |

ನವದೆಹಲಿ: ಪಶ್ಚಿಮ ಬಂಗಾಳ, ಒಡಿಶಾಗಳಿಗೆ ಬುಧವಾರ ಅಪ್ಪಳಿಸಲಿರುವ “ಯಾಸ್‌’ ಚಂಡಮಾರುತದಿಂದ ಕೇರಳದಲ್ಲಿ ಧಾರಾಕಾರ ಮಳೆಯಾಗಲಿದೆ. ಬುಧವಾರದ ವರೆಗೆ ಮಳೆಯ ಪ್ರಕೋಪ ಇರಲಿದೆ. ಚಂಡಮಾರುತ ಸಾಗಿಬರುವ ಹಾದಿಯನ್ನು ತಜ್ಞರು ಗುರುತಿಸಿದ್ದರೂ, ಆ ದಾರಿಯಲ್ಲಿ ಕೇರಳ ಇಲ್ಲ. ಎರ್ನಾಕುಳಂ, ಇಡುಕ್ಕಿ, ಕೊಟ್ಟಾಯಂ, ಅಲಪ್ಪುಳ, ಪಟ್ಟಣಂತಿಟ್ಟ, ಕೊಲ್ಲಂ ಹಾಗೂ ತಿರುವಂತಪುರ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಈ ಚಂಡಮಾರುತಕ್ಕೆ ಯಾಸ್‌ ಎಂದು ಒಮನ್‌ ದೇಶದ ತಜ್ಞರು ಹೆಸರಿಟ್ಟಿದ್ದಾರೆ. ಅಂದರೆ ಸುವಾಸನೆ ಬೀರುವ ಮರ.

Advertisement

ಭೂಕುಸಿತ: 26ರಂದು ಪೂರ್ವ ಕರಾವಳಿಯನ್ನು ತಟ್ಟಲಿರುವ ಯಾಸ್‌, ಗಂಟೆಗೆ 155ರಿಂದ 165 ಕಿ.ಮೀ. ವೇಗದಲ್ಲಿ ಸಾಗಲಿದ್ದು, ನಂತರ ಇದು ಗಂಟೆಗೆ 185 ಕಿ.ಮೀ. ವೇಗಕ್ಕೆ ವರ್ದಿಸಲಿದೆ. ಭಾರಿ ಮಳೆಯಿಂದಾಗಿ ಬಾಲಸೋರ್‌ನಲ್ಲಿ ಭೂ ಕುಸಿತ ಉಂಟಾಗುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳದ ದಿಘಾದಲ್ಲಿ ಈ ಚಂಡಮಾರುತ ಪ್ರತಿಗಂಟೆಗೆ 610 ಕಿ.ಮೀ. ವೇಗದಲ್ಲಿ ಚಲಿಸಲಿದೆ.

ಆಂಧ್ರಪ್ರದೇಶ, ಅಂಡಮಾನ್‌ ನಿಕೋಬಾರ್‌ ದ್ವೀಪ ಸಮೂಹದಲ್ಲಿ ಬಿರುಸಿನ ಮಳೆಯಾಗಲಿದೆ. ಇದೇ ವೇಳೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ ರಾಜ್ಯ ಸರ್ಕಾರಗಳ ಜತೆಗೆ ಸಭೆ ನಡೆಸಿದ್ದಾರೆ.

ಇದನ್ನೂ ಓದಿ :ಕೋವಿಡ್ ಮರಣ : ಪರಿಹಾರ ಧನ ನೀಡುವ ಬಗ್ಗೆ ನಿಲುವು ತಿಳಿಸಿ : ಕೇಂದ್ರಕ್ಕೆ ಸುಪ್ರೀಮ್ ಸೂಚನೆ

ಈಶಾನ್ಯ ರಾಜ್ಯಗಳಿಗೆ ಹೆಚ್ಚು ಹಾನಿ?
ಪಶ್ಚಿಮ ಬಂಗಾಳ ಹಾಗೂ ಒಡಿಶಾ ಕರಾವಳಿಗಳ ಪ್ರಾಂತ್ಯಗಳಲ್ಲಿ ಬಿರುಗಾಳಿ ಸಹಿತ ಅಗಾಧವಾಗಿ ಮಳೆಯಾಗಲಿದೆ. ಈ ಎರಡೂ ರಾಜ್ಯಗಳ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಬಂಗಾಳ ಕೊಲ್ಲೆಯ ಆಗ್ನೇಯ ಭಾಗದಿಂದಲೇ ಯಾಸ್‌ನ ಮಾರುತಗಳು ಆಗಮಿಸಲಿರುವುದರಿಂದ ಪ್ರಮುಖವಾಗಿ ಆ ಪ್ರದೇಶದಲ್ಲಿ ಯಾವುದೇ ಮೀನುಗಾರಿಕೆ ಚಟುವಟಿಕೆಯನ್ನು ನಡೆಸದಂತೆ ಅಂಡಮಾನ್‌-ನಿಕೋಬಾರ್‌ ದ್ವೀಪಗಳ ಮೀನುಗಾರರಿಗೂ ಸೂಚಿಸಲಾಗಿದೆ.

Advertisement

ಕರ್ನಾಟಕ್ಕೆ ಮುಂಗಾರು ಐದು ದಿನ ಮುಂಚೆ?
ಈ ಮುಂಚಿನ ಲೆಕ್ಕಾಚಾರದ ಪ್ರಕಾರ, ಪ್ರಸಕ್ತ ವರ್ಷದ ಮುಂಗಾರು ಕರ್ನಾಟಕಕ್ಕೆ ಜೂ. 3 ಅಥವಾ 4ಕ್ಕೆ ಆಗಮಿಸಬೇಕಿತ್ತು. ಆದರೆ, ಯಾಸ್‌ ಚಂಡಮಾರುತದಿಂದ ಮುಂಗಾರು ಮಾರುತಗಳು ಕರ್ನಾಟಕಕ್ಕೆ ನಾಲ್ಕು ದಿನ ಮುಂಚಿತವಾಗಿಯೇ ಪ್ರವೇಶಿಸಬಹುದೆಂದು ತಜ್ಞರು ಅಂದಾಜಿಸಿದ್ದಾರೆ. ಹಾಗಾಗಿ, ಮೇ 30 ಅಥವಾ 31ಕ್ಕೆ ಕರ್ನಾಟಕ್ಕೆ ಮುಂಗಾರು ಆಗಮಿಸಬಹುದು.

ಮಾನ್ಸೂನ್‌-ಸೈಕ್ಲೋನ್‌ ಕಾಕ್‌ಟೇಲ್‌!
ಕೇರಳಕ್ಕೆ ಮಾಸಾಂತ್ಯಕ್ಕೇ ಮಂಗಾರು ಮಾರುತಗಳು ಪ್ರವೇಶಿಸುವುದರಿಂದ ಯಾಸ್‌ ಚಂಡಮಾರುತ ತರುವ ಮಳೆ-ಗಾಳಿಯ ಜೊತೆಗೆ ಮುಂಗಾರು ಮಳೆಯೂ ಅಗಾಧವಾಗಿ ಸುರಿಯುವ ಸಾಧ್ಯತೆಯಿದೆ. ಕೇರಳಕ್ಕೆ ಮೇ 31ರಂದು ಪ್ರವೇಶಿಸಬೇಕಿದ್ದ ಮುಂಗಾರು, ಮೇ 26 ಅಥವಾ 27ಕ್ಕೇ ಆಗಮಿಸಬಹುದು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next