Advertisement

25 ವರ್ಷಗಳಿಂದ ಡಾಮರು ಕಾಣದ ಯರ್ಲಪಾಡಿ ಮುಖ್ಯ ರಸ್ತೆ

03:55 PM Oct 14, 2019 | sudhir |

ಅಜೆಕಾರು: ಯರ್ಲಪಾಡಿ ಗ್ರಾ.ಪಂ. ಕಚೇರಿ ಸಂಪರ್ಕಿ ಸುವ, ಗ್ರಾಮದ ಪ್ರಮುಖ ಏಕೈಕ ರಸ್ತೆಯಾಗಿರುವ ಬೈಲೂರು ಕಾಂತರ ಗೋಳಿ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಬೃಹತ್‌ ಹೊಂಡಗಳಿಂದ ಆವೃತವಾಗಿ ಸಂಚಾರಕ್ಕೆ ಅಡಚಣೆ ಯಾಗಿದೆ.

Advertisement

ಸುಮಾರು 25 ವರ್ಷಗಳ ಹಿಂದೆ ಡಾಮಾರು ಕಂಡ ಈ ರಸ್ತೆಯು ಅನಂತರದ ದಿನಗಳಲ್ಲಿ ಮರು ಡಾಮರು ಆಗದೆ ರಸ್ತೆ ಸಂಪೂರ್ಣ ದುಸ್ಥಿತಿಗೆ ತಲುಪಿತ್ತು. ಯರ್ಲಪಾಡಿ ಗ್ರಾ.ಪಂ. ಕಚೇರಿ, ಗ್ರಾಮಕರಣಿಕರ ಕಚೇರಿ, ಆರೋಗ್ಯ ಇಲಾಖೆಯ ಉಪ ಕೇಂದ್ರ, ಅಂಗನವಾಡಿ, ಶಾಲೆ, ಅಂಚೆ ಕಚೇರಿ ಕಾಂತರಗೋಳಿ ಪರಿಸರದಲ್ಲಿಯೇ ಇದ್ದು ಪಂಚಾಯತ್‌ ವ್ಯಾಪ್ತಿಯ ಗ್ರಾಮಸ್ಥರು ಈ ರಸ್ತೆ ಮೂಲಕವೇ ಪ್ರತಿನಿತ್ಯ ಸಂಚರಿಸುತ್ತಾರೆ. ಇದು ಸುಮಾರು 5,000
ಜನಸಂಖ್ಯೆ ಹೊಂದಿದ್ದು ಈ ಪಂಚಾಯತ್‌ ಜಾರ್ಕಳ, ಗೋಂದೂರು, ಹೆಪ್ಪಳ, ಕಾಂತರಗೋಳಿ ಗ್ರಾಮಗಳ ವಾರ್ಡ್‌ ಗಳನ್ನು ಹೊಂದಿದೆ.

ರಸ್ತೆಯುದ್ದಕ್ಕೂ ಜಲ್ಲಿಕಲ್ಲುಗಳ ರಾಶಿ ಬಿದ್ದಿದೆ. ಕಾಂತರಗೋಳಿ ಪರಿಸರದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಬೈಲೂರು , ಕಾರ್ಕಳ ನಗರಕ್ಕೆ ತೆರಳಲು ಈ ರಸ್ತೆ ಅವಲಂಬಿಸಿದ್ದಾರೆ.

ಪ್ರಮುಖ ಸಂಪರ್ಕ ರಸ್ತೆ
ಈ ರಸ್ತೆಯು ಬೈಲೂರು ಭಾಗದ ಜನತೆಗೆ ಅಜೆಕಾರು ಹೆಬ್ರಿ ಸಂಪರ್ಕಿಸಲು ಅನುಕೂಲ. ಅಲ್ಲದೇ ಹಿರ್ಗಾನ ಚಿಕ್ಕಲ್‌ಬೆಟ್ಟು ಕಾಂತರಗೋಳಿ ಪರಿಸರದ ಜನತೆಗೆ ಬೈಲೂರು ಸಂಪರ್ಕಿಸಲು ಇರುವ ಹತ್ತಿರದ ಏಕೈಕ ರಸ್ತೆ ಇದಾಗಿದೆ.

ವಾಹನ ಸಂಚಾರಕ್ಕೆ ತೊಂದರೆ
ರಿûಾ ಚಾಲಕರು ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮೀಣ ಭಾಗವಾಗಿರುವ ಯರ್ಲ ಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ರೈತರು ಹೆಚ್ಚಾಗಿ ವಾಸಿಸುತ್ತಿದ್ದು, ತಾವು ಬೆಳೆದ ಬೆಳೆ ಮಾರುಕಟ್ಟೆಗೆ ಒಯ್ಯಲು, ದಿನಬಳಕೆಯ ವಸ್ತು ಮನೆಗೆ ಕೊಂಡೊಯ್ಯಲು ಇದನ್ನು ಆಶ್ರಯಿಸಿದ್ದಾರೆ.

Advertisement

ಹಲವು ಬಾರಿ ಆಶ್ವಾಸನೆ
ಜನಪ್ರತಿನಿಧಿಗಳು ಕಳೆದ ಕೆಲ ವರ್ಷಗಳಿಂದ ರಸ್ತೆ ದುರಸ್ತಿಗೆ ಅನುದಾನ ಬಿಡುಗಡೆಗೊಂಡಿದ್ದು, ಶೀಘ್ರ ಕಾಮಗಾರಿ ನಡೆಯಲಿದೆ ಎನ್ನುತ್ತಿದ್ದರೂ ಕಾಮಗಾರಿ ನಡೆಯದೆ ಕೇವಲ ಆಶ್ವಾಸನೆಗಷ್ಟೇ ಸೀಮಿತವಾಗಿದೆ ಎಂಬುದು ಗ್ರಾಮಸ್ಥರ ಅಳಲು.

ಸ್ಥಗಿತಗೊಂಡ ಬಸ್‌
ಬೈಲೂರು ಯರ್ಲಪಾಡಿ ಕಾಂತರಗೋಳಿ, ಚಿಕ್ಕಲ್‌ಬೆಟ್ಟು, ಹಿರ್ಗಾನ ಮಾರ್ಗವಾಗಿ ಕಾರ್ಕಳಕ್ಕೆ ತಲುಪಲು ಕಳೆದ ಕೆಲ ವರ್ಷಗಳ ಹಿಂದೆ ಹಲವು
ಬಸ್‌ಗಳು ಸಂಚಾರ ನಡೆಸುತ್ತಿದ್ದವಾದರೂ ಹದಗೆಟ್ಟ ರಸ್ತೆಯಿಂದಾಗಿ ಈಗ
ಕೇವಲ ಒಂದು ಬಸ್‌ ಮಾತ್ರ ಓಡಾಟ ನಡೆಸುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಜನಪ್ರತಿನಿಧಿಗಳು, ಅಧಿಕಾರಿಗಳು ಶೀಘ್ರ ಮರುಡಾಮರುಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಅನುದಾನದ ಕೊರತೆ
ಈ ರಸ್ತೆ ವಿಸ್ತರಣೆಗೆ ಮರುಡಾಮರಿಗೆ ಅನುದಾನ ಒದಗಿಸುವಂತೆ ಶಾಸಕ ಸುನಿಲ್‌ ಕುಮಾರ್‌ ಅವರಲ್ಲಿ ಮನವಿ ಮಾಡಿದ್ದು, ಅನುದಾನದ ಕೊರತೆಯಿಂದಾಗಿ ರಸ್ತೆ ಅಭಿವೃದ್ಧಿ ವಿಳಂಬವಾಗಿದೆ. ಈಗ ಶಾಸಕರು ಹೆಚ್ಚಿನ ಮುತುವರ್ಜಿ ವಹಿಸಿ ರಾಜ್ಯ ಸರಕಾರದಿಂದ ಅನುದಾನ ಒದಗಿಸಿ ರಸ್ತೆ ಅಭಿವೃದ್ಧಿಗೆ 10 ಕೋ.ರೂ. ಅನುದಾನ ಒದಗಿಸಿದ್ದಾರೆ. ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ.
-ಸುಮಿತ್‌ ಶೆಟ್ಟಿ, ಜಿಲ್ಲಾ ಪಂಚಾಯತ್‌ ಸದಸ್ಯರು

ಪ್ರಸ್ತಾವನೆ ಸಲ್ಲಿಸಲಾಗಿದೆ
ಪಂಚಾಯತ್‌ ವ್ಯಾಪ್ತಿಯ ಪ್ರಮುಖ ರಸ್ತೆ ಇದಾಗಿದ್ದು, ಮರುಡಾಮರುಗೊಳಿಸುವಂತೆ ಶಾಸಕರಿಗೆ, ಅಧಿಕಾರಿಗಳಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ., ಶಾಸಕ ಸುನಿಲ್‌ ಕುಮಾರ್‌ ಈ ಬಗ್ಗೆ ಸೂಕ್ತ ಸ್ಪಂದನೆ ನೀಡಿದ್ದಾರೆ.
-ವಸಂತ ಕುಲಾಲ್‌, ಅಧ್ಯಕ್ಷರು, ಯರ್ಲಪಾಡಿ ಗ್ರಾಮ ಪಂಚಾಯತ್‌

ಹಲವು ಬಾರಿ ಮನವಿ
ಯರ್ಲಪಾಡಿ -ಹಿರ್ಗಾನ ಎರಡು ಗ್ರಾಮಗಳಿಗೆ ಅತ್ಯಂತ ಪ್ರಮುಖ ರಸ್ತೆ ಇದಾಗಿದ್ದು, ಅಜೆಕಾರು -ಹೆಬ್ರಿ ಸಂಪರ್ಕಿಸಲು ಅತಿ ಹತ್ತಿರದ ರಸ್ತೆ ಇದಾಗಿದೆೆ.
ಈ ರಸ್ತೆ ದುರಸ್ತಿಪಡಿಸಲು ದಶಕಗಳಿಂದ ಮನವಿ ಮಾಡುತ್ತಾ ಬಂದಿದ್ದರೂ ರಸ್ತೆ ಮಾತ್ರ ಅಭಿವೃದ್ಧಿ ಕಂಡಿಲ್ಲ.
-ಉದಯಕುಮಾರ್‌ ಹೆಗ್ಡೆ, ಮಾಜಿ ಅಧ್ಯಕ್ಷರು ಯರ್ಲಪಾಡಿ ಗ್ರಾ. ಪಂ.

– ಜಗದೀಶ್‌ ರಾವ್‌ ಅಜೆಕಾರು

Advertisement

Udayavani is now on Telegram. Click here to join our channel and stay updated with the latest news.

Next