Advertisement

ಯರಮರಸ್‌ ಸ್ಥಾವರಕ್ಕೂ ನೀರಿನ ಅಭಾವ?

10:21 AM Apr 08, 2017 | |

ಬೆಂಗಳೂರು: ಬಹುನಿರೀಕ್ಷಿತ ಯರಮರಸ್‌ ಉಷ್ಣವಿದ್ಯುತ್‌ ಸ್ಥಾವರ (ವೈಟಿಪಿಎಸ್‌)ದಲ್ಲಿ ಮೇ ಮೊದಲ ವಾರದಲ್ಲೇ ವಿದ್ಯುತ್‌ ಉತ್ಪಾದನೆಗೆ ಕೆಪಿಸಿಎಲ್‌ ಸಿದ್ಧತೆ ನಡೆಸಿದೆ. ಆದರೆ, ಆರಂಭದಲ್ಲೇ ಘಟಕಕ್ಕೆ ನೀರಿನ ಅಭಾವ ಎದುರಾಗುವ ಸಾಧ್ಯತೆ ಇದೆ.

Advertisement

1,600 ಮೆ.ವಾ. ಸಾಮರ್ಥ್ಯದ 2 ಘಟಕಗಳ ಪೈಕಿ ಬರುವ ತಿಂಗಳು ಮೊದಲ ವಾರದಲ್ಲಿ ಒಂದು ಘಟಕದಲ್ಲಿ ಕನಿಷ್ಠ 400ರಿಂದ 500 ಮೆ.ವಾ. ವಿದ್ಯುತ್‌ ಉತ್ಪಾದನೆಗೆ ಕರ್ನಾಟಕ ವಿದ್ಯುತ್‌ ನಿಗಮ (ಕೆಪಿಸಿಎಲ್‌) ಸಿದ್ಧತೆ ಮಾಡಿಕೊಳ್ಳುತ್ತಿದೆ. ಕಲ್ಲಿದ್ದಲು ಪೂರೈಕೆಗೂ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿದೆ. ಆದರೆ, ತಿಂಗಳಾಂತ್ಯಕ್ಕೆ ಮಳೆ ಬರದಿದ್ದರೆ ಘಟಕಕ್ಕೆ ನೀರಿನ ಕೊರತೆ ಎದುರಾಗಲಿದೆ. ಇದು ಕೆಪಿಸಿಎಲ್‌ ನಿದ್ದೆಗೆಡಿಸಿದೆ.

ಬಾಯ್ಲರ್‌, ಕೂಲಿಂಗ್‌ ಸೇರಿದಂತೆ ವಿವಿಧ ಉದ್ದೇಶಗಳಿಗೆ ವೈಟಿಪಿಎಸ್‌ಗೆ ಕೃಷ್ಣಾ ನದಿಯಿಂದ ನೀರು ಪೂರೈಸಲು ಉದ್ದೇಶಿಸಲಾಗಿದ್ದು, ಯೋಜನೆಯಂತೆ ಮೇ ಮೊದಲ ವಾರದಲ್ಲಿ 800 ಮೆ.ವಾ. ಸಾಮರ್ಥ್ಯದ ಒಂದು ಘಟಕವನ್ನು ಆರಂಭಿಸಲಾಗುತ್ತಿದೆ. ಇದಕ್ಕೆ ನಿತ್ಯ 30 ಸಾವಿರ ಕ್ಯುಬಿಕ್‌ ಮೀಟರ್‌ ನೀರು ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

ಇದಕ್ಕೆ ತಿಂಗಳಿಗೆ 0.12 ಟಿಎಂಸಿ ನೀರು ಬೇಕಾಗುತ್ತದೆ. ಇದರ ಜತೆಗೆ ರಾಯಚೂರು ಉಷ್ಣ ವಿದ್ಯುತ್‌ ಸ್ಥಾವರ (ಆರ್‌ಟಿಪಿಎಸ್‌)ಕ್ಕೂ ಇದೇ ಕೃಷ್ಣಾ ನದಿಯಿಂದ ನೀರು ಸರಬರಾಜು ಆಗುತ್ತದೆ. ಎಂಟೂ ಘಟಕಗಳಿಗೆ ತಿಂಗಳಿಗೆ 0.24 ಟಿಎಂಸಿ ನೀರು ಪೂರೈಕೆಯಾಗುತ್ತದೆ. ಆದರೆ, ಈಗ ನಾರಾಯಣಪುರ ಜಲಾಶಯದಲ್ಲಿ ಲಭ್ಯವಿರುವ ನೀರು ಮೇ ಅಂತ್ಯದವರೆಗೆ ಸಾಕಾಗುವುದು ಅನುಮಾನ ಹೆಸರು ಹೇಳಲಿಚ್ಛಿಸದ ಕೆಪಿಸಿಎಲ್‌ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಮಳೆ ಬಂದರೆ ಚಿಂತೆ ಇಲ್ಲ
ಜಲಾಶಯದಲ್ಲಿ ಪ್ರಸ್ತುತ ಅಂದಾಜು 5.96 ಟಿಎಂಸಿ ನೀರು ಲಭ್ಯವಿದೆ. ಈ ಪೈಕಿ ರಾಯಚೂರು ರಾಜ್ಯದಲ್ಲಿ ಅತ್ಯಧಿಕ ಉಷ್ಣಾಂಶ ಇರುವ ಜಿಲ್ಲೆಯಾಗಿದ್ದು, ತಿಂಗಳಲ್ಲಿ ಅರ್ಧಕ್ಕರ್ಧ ನೀರು ಆವೆಯಾಗಿ ಹೋಗುತ್ತದೆ. ಉಳಿದ ನೀರಿನಲ್ಲಿ ಕುಡಿಯಲು, ದನ-ಕರುಗಳಿಗೆ ಹಾಗೂ ಶಾಖೋತ್ಪನ್ನ ಘಟಕಗಳಿಗೆ ಪೂರೈಕೆ ಮಾಡಬೇಕಾಗಿದೆ. ಇದು ಸವಾಲಾಗಿದ್ದು, ಮೇ ಅಂತ್ಯಕ್ಕೆ ಮಳೆಯಾದರೆ ಸಮಸ್ಯೆ ಬಗೆಹರಿಯಲಿದೆ.

Advertisement

ಈ ಮಧ್ಯೆ ಆರ್‌ಟಿಪಿಎಸ್‌ಗೆ ನೀರಿನ ಅವಶ್ಯಕತೆ ಇದ್ದು, ರಾಜ್ಯದಲ್ಲಿ ವಿದ್ಯುತ್‌ ಬೇಡಿಕೆ ಪೂರೈಸಲು ಎಂಟೂ ಘಟಕಗಳ ಕಾರ್ಯಾಚರಣೆ ಅತ್ಯವಶ್ಯಕವಾಗಿದೆ. ಆದ್ದರಿಂದ ತಕ್ಷಣ ನಾರಾಯಣಪುರ ಜಲಾಶಯದಿಂದ ನೀರು ಪೂರೈಸುವಂತೆ ಕೆಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕರು ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಮೂರು ದಿನಗಳ ಹಿಂದೆಯೇ ಪತ್ರ ಬರೆದಿದ್ದಾರೆ.

500 ಮೆ.ವಾ. ಉತ್ಪಾದನೆ
ದಾಖಲೆ ವಿದ್ಯುತ್‌ ಬೇಡಿಕೆ ಇರುವ ಸಂದಿಗ್ಧ ಸ್ಥಿತಿಯಲ್ಲಿ ವೈಟಿಪಿಎಸ್‌ ಕಾರ್ಯಾಚರಣೆಗೆ ಅಣಿಯಾಗಿರುವುದು ಸಹಜವಾಗಿ ಹೊರೆ ಕಡಿಮೆ ಆಗುವಂತೆ ಮಾಡಿದೆ. ಆದರೆ ಇಲ್ಲೊಂದು ತಾಂತ್ರಿಕ ಅಡತಡೆಯೂ ಇದೆ. 800 ಮೆ.ವಾ. ಸಾಮರ್ಥ್ಯ ಎರಡೂ ಘಟಕಗಳು ಸಿದ್ಧವಾಗಿದ್ದರೂ, ಆ ವಿದ್ಯುತ್‌ ಸರಬರಾಜು ಮಾಡಲು ಅಗತ್ಯವಿರುವ ಪ್ರಸರಣ ಮಾರ್ಗಗಳ ಕೊರತೆ ಇರುವುದರಿಂದ ಆರಂಭದಲ್ಲಿ ಮೊದಲ ಘಟಕದಿಂದ 500 ಮೆ.ವಾ. ವಿದ್ಯುತ್‌ ಉತ್ಪಾದಿಸಲು ಕೆಪಿಸಿಎಲ್‌ ಉದ್ದೇಶಿಸಿದೆ.

ಉದ್ದೇಶಿತ ವೈಟಿಪಿಎಸ್‌ಗೆ ಇನ್ನೂ ಕಲ್ಲಿದ್ದಲು ಹಂಚಿಕೆ ಆಗಿಲ್ಲ. ತಾತ್ಕಾಲಿಕವಾಗಿ “ಕೋಲ್‌ ಇಂಡಿಯಾ’ದಿಂದ ಪೂರೈಕೆಯಾಗಲಿದೆ. ವಾರ್ಷಿಕ 5.81 ಮಿಲಿಯನ್‌ ಟನ್‌ ಕಲ್ಲಿದ್ದಲು ಬೇಕಾಗುತ್ತದೆ. ಇದನ್ನು ಘಟಕದವರೆಗೆ ತೆಗೆದುಕೊಂಡು ಹೋಗಲು ರೈಲು ಹಳಿಗಳ ವ್ಯವಸ್ಥೆ ಇಲ್ಲ. ಆದ್ದರಿಂದ ತಾತ್ಕಾಲಿಕವಾಗಿ ಇದನ್ನು ಆರ್‌ಟಿಪಿಎಸ್‌ನಿಂದ ಲಾರಿಗಳ ಮೂಲಕ ಪೂರೈಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹಾಗಾಗಿ, ಇದರ ಸಮಸ್ಯೆ ಇಲ್ಲ ಎಂದು ಕೆಪಿಸಿಎಲ್‌ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ವರ್ಷದಲ್ಲಿ 2,300 ಮೆ.ವಾ.; ದಾಖಲೆ
ಕೇವಲ ಒಂದು ವರ್ಷದ ಅಂತರದಲ್ಲಿ 2,300 ಮೆ.ವಾ. ವಿದ್ಯುತ್‌ ಉತ್ಪಾದನಾ ಘಟಕಗಳು ಸಿದ್ಧಗೊಂಡಿದ್ದು, ಇದು ದಾಖಲೆಯಾಗಿದೆ.
ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರದ 700 ಮೆ.ವಾ. ಸಾಮರ್ಥ್ಯದ ಒಂದು ಘಟಕ 2016ರ ಸೆಪ್ಟೆಂಬರ್‌ನಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಈಗ ವೈಟಿಪಿಎಸ್‌ನ ಎರಡೂ ಘಟಕಗಳು 1,600 ಮೆ.ವಾ. ಉತ್ಪಾದನೆಗೆ ಸಿದ್ಧಗೊಂಡಿವೆ. ಈ ಎರಡು ಘಟಕಗಳಲ್ಲಿ ಒಂದು ಜರ್ಮನಿಯ ಸೀಮನ್ಸ್‌ ಕಂಪೆನಿ ತಯಾರಿಸಿದ್ದರೆ, ಮತ್ತೂಂದು ಘಟಕ ಸಂಪೂರ್ಣ ಸ್ವದೇಶಿಯಾಗಿದೆ.

ಸಂಸ್ಕರಿಸಿದ ನೀರು ಪರಿಹಾರ
ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಸಂಸ್ಕರಿಸಿದ ನೀರು ಮರುಬಳಕೆ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಇದೆ.

ಈ ಹಿಂದೆ ಬಳ್ಳಾರಿ ಉಷ್ಣವಿದ್ಯುತ್‌ ಸ್ಥಾವರ ಆರಂಭಗೊಂಡಾಗಲೂ ನೀರಿನ ಸಮಸ್ಯೆ ಎದುರಾಗಿತ್ತು. ಅಲ್ಲಿ ತುಂಗಭದ್ರ ನದಿಯಿಂದ ಕಾಲುವೆಗಳಿಗೆ ಹರಿಸಿದ ನೀರನ್ನು ಬಳಸಿಕೊಳ್ಳಲಾಗುತ್ತಿತ್ತು. ಈಗ ವೈಟಿಪಿಎಸ್‌ನಲ್ಲಿ ಕೂಡ ಇದೇ ಸಮಸ್ಯೆ ಎದುರಾಗುವ ಸಾದ್ಯತೆ ಕಂಡುಬರುತ್ತಿದೆ. ಆದ್ದರಿಂದ ಸಂಸ್ಕರಿಸಿದ ನೀರನ್ನು ಬಳಕೆ ಮಾಡುವುದೇ ಪರಿಹಾರ ಎಂದು ಇಂಧನ ತಜ್ಞರು ಹೇಳುತ್ತಾರೆ.

ಉಷ್ಣವಿದ್ಯುತ್‌ ಘಟಕಗಳಿರುವ ಕಡೆಗಳಲ್ಲಿ ಬಾಯ್ಲರ್‌ಗಳಿಗೆ ಹೊರತುಪಡಿಸಿ, ಉಳಿದೆಲ್ಲ ಚಟುವಟಿಕೆಗಳಿಗೆ ಸಂಸ್ಕರಿಸಿದ ನೀರನ್ನೇ ಬಳಸಬೇಕು ಎಂದು ಕೇಂದ್ರ ಸರ್ಕಾರ ಕೂಡ ಹೇಳಿದೆ.

ವೈಟಿಪಿಎಸ್‌ನ ಎರಡೂ ಘಟಕಗಳು ಸಂಪೂರ್ಣವಾಗಿ ಕಾರ್ಯಾರಂಭಗೊಳ್ಳಲು 4-5 ತಿಂಗಳಾಗುತ್ತದೆ. ಮೇ ಮೊದಲ ವಾರದಲ್ಲಿ ಒಂದು ಘಟಕದಲ್ಲಿ 400-500 ಮೆ.ವಾ. ವಿದ್ಯುತ್‌ ಉತ್ಪಾದಿಸಲು ಉದ್ದೇಶಿಸಲಾಗಿದೆ. ಆದರೆ, ಇದಕ್ಕೆ ಯಾವುದೇ ನೀರಿನ ಕೊರತೆ ಎದುರಾಗದು ಎಂದು ಕೆಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಕುಮಾರ್‌ ನಾಯಕ್‌ ಸ್ಪಷ್ಟಪಡಿಸಿದ್ದಾರೆ.

ಎರಡೂ ಘಟಕಗಳಿಗೆ ಒರಿಸ್ಸಾದ ಗೋಗರ್‌ಪಲ್ಲಿಯಿಂದ ಕಲ್ಲಿದ್ದಲು ಗಣಿ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದು, ಅರ್ಜಿ ಪರಿಶೀಲನೆ ಅಂತಿಮ ಹಂತದಲ್ಲಿದೆ. ಸದ್ಯಕ್ಕಂತೂ ಕಲ್ಲಿದ್ದಲು ಕೊರತೆ ಇಲ್ಲ. ನೀರಿಗೂ ಯಾವುದೇ ಸಮಸ್ಯೆ ಆಗದು ಎಂಬ ವಿಶ್ವಾಸ ಇದೆ. ಆದಾಗ್ಯೂ ನಿಸರ್ಗ ಕೈಕೊಟ್ಟರೆ ಏನೂ ಮಾಡಲಿಕ್ಕಾಗದು ಎಂದೂ ಅವರು ಹೇಳುತ್ತಾರೆ.

– ವಿಜಯಕುಮಾರ್‌ ಚಂದರಗಿ
 

Advertisement

Udayavani is now on Telegram. Click here to join our channel and stay updated with the latest news.

Next