Advertisement

ಗೋರಿಯಿಂದ ಹಾಡು ಬಂತು; ಹುಟ್ಟು ಸಾವಿನ ನಡುವಿನ ಸಿನಿಮಾ 

03:52 PM Apr 12, 2018 | Sharanya Alva |

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ತರಹೇವಾರಿ ಶೀರ್ಷಿಕೆವುಳ್ಳ ಚಿತ್ರಗಳು ಮೂಡಿಬಂದಿವೆ. ಆ ಸಾಲಿಗೆ “ಯಾರ್‌ ಯಾರೋ ಗೋರಿ ಮೇಲೆ …’ ಎಂಬ ಚಿತ್ರವೂ ಒಂದು. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ. ಇತ್ತೀಚೆಗೆ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ. ಅಂದು ನಿರ್ದೇಶಕ ಹೆಚ್‌.ವಾಸು, ಎಂ.ಡಿ.ಶ್ರೀಧರ್‌ ಹಾಗೂ ತೆಲುಗು ನಟ ಶಫಿ ಆಡಿಯೋ ಸಿಡಿ ಬಿಡುಗಡೆ ಮಾಡಿದರು.
 
ರಾಘುಚಂದ್‌ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆಯ ಜವಾಬ್ದಾರಿಯೂ ಇವರದೇ. ಇದೊಂದು ಪಕ್ಕಾ ಯುವಕರಿಗೆ ಸಂಬಂಧಿಸಿದ ಚಿತ್ರ. ಹಳ್ಳಿಯಿಂದ ಸಿಟಿಗೆ ಬರುವ ಹುಡುಗರಿಬ್ಬರು ಆ ಸಿಟಿಯಲ್ಲಿ ಯಾವ ರೀತಿ ಸಮಸ್ಯೆ ಎದುರಿಸುತ್ತಾರೆ. ಕೆಲ ಸಮಸ್ಯೆಯಿಂದ ಹೇಗೆ ಹೊರಬರುತ್ತಾರೆ ಎಂಬ ಅಂಶ ಚಿತ್ರದ ಹೈಲೈಟ್‌. ಇಡೀ ಚಿತ್ರದ ಕಥೆ ಇಬ್ಬರು ನಾಯಕರ ಸುತ್ತ ನಡೆಯಲಿದೆ.

Advertisement

ನಿರ್ದೇಶಕ ರಾಘುಚಂದ್‌ ಅವರಿಗೆ ತಾನೊಬ್ಬ ನಿರ್ದೇಶಕ ಎನಿಸಿಕೊಳ್ಳಬೇಕು ಎಂಬುದು ಅವರ ಬಹುದಿನಗಳ ಕನಸಂತೆ. ಅದು ಅವರ ಗೆಳೆಯನ ಮೂಲಕ ಈಡೇರಿದೆಯಂತೆ. ಇದೊಂದು ಸಸ್ಪೆನ್ಸ್‌, ಥ್ರಿಲ್ಲರ್‌ನಲ್ಲಿ ಸಾಗುವ ಸಿನಿಮಾ ಆಗಿದ್ದರೂ, ವಾಸ್ತವ ಅಂಶಗಳು ಚಿತ್ರದ ಪ್ರಮುಖ ಅಂಶವಂತೆ. ಹುಟ್ಟು ಸಾವಿನ ನಡುವೆ ಸಮಯ ಎಂಬುದು ಮನುಷ್ಯನ್ನು ಹೇಗೆಲ್ಲಾ ಆಡಿಸುತ್ತದೆ ಎಂಬುದನ್ನಿಲ್ಲಿ ಸೂಕ್ಷ್ಮವಾಗಿ ಹೇಳಲಾಗಿದೆಯಂತೆ. ಬಳ್ಳಾರಿ ಸುತ್ತಮುತ್ತ ಶೇ.80 ರಷ್ಟು ಚಿತ್ರೀಕರಿಸಿರುವ ನಿರ್ದೇಶಕರು, ಸಕಲೇಶಪುರ, ಶ್ರೀರಂಗಪಟ್ಟಣ, ಬೆಂಗಳೂರಿನಲ್ಲೂ ಚಿತ್ರೀಕರಿಸಿದ ಬಗ್ಗೆ ವಿವರ ಕೊಡುತ್ತಾರೆ.

ಚಿತ್ರಕ್ಕೆ ಅಭಿ ಮತ್ತು ರಾಜ್‌ ಇಬ್ಬರು ನಾಯಕರು.  ಈ ಪೈಕಿ ರಾಜ್‌ ಅವರು ಅಭಿನಯದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರಂತೆ. ಇನ್ನು, ವರ್ಷಾ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ. ನಾಯಕ ರಾಜು ಅವರು ಮೂಲತಃ ಬಳ್ಳಾರಿಯವರು. 

ಚಿತ್ರರಂಗದಲ್ಲಿ ತಾನೂ ಹೀರೋ ಆಗಬೇಕು ಅಂತ ಕಳೆದ ಏಳು ವರ್ಷಗಳಿಂದ ಪ್ರಯತ್ನ ಪಡುತ್ತಿದ್ದರಂತೆ. ಕೊನೆಗೆ ಗೆಳೆಯನಿಗೂ ನಿರ್ದೇಶನದ ಕನಸು ಇದ್ದುದರಿಂದ ಅವರೇ ಹಣ ಹಾಕುವ ಮೂಲಕ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಅವರ ಈ ಕೆಲಸಕ್ಕೆ ಮನೆಯವರಿಂದಲೂ ಬೆಂಬಲ ಸಿಕ್ಕಿದೆ. ಆಂದಹಾಗೆ, ರಾಜು ಇಲ್ಲಿ ಒಂದು ರೀತಿಯ ಸೈಕೋ ಪಾತ್ರ ಮಾಡಿದ್ದಾರಂತೆ. 

ಇನ್ನೊಬ್ಬ ಹೀರೋ ಅಭಿ ಅವರಿಗೂ ಚಿತ್ರರಂಗ ಹೊಸದೇನಲ್ಲ. ಸಿನಿಮಾರಂಗದಲ್ಲಿ ಅವರು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಫೇಸ್‌ಬುಕ್‌ ಮೂಲಕ ಈ ಚಿತ್ರತಂಡಕ್ಕೆ ಪರಿಚಯವಾಗಿ, ಆ ಮೂಲಕ ಹೀರೋ ಆಗುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಅಭಿ. “ಇದೊಂದು ತ್ರಿಕೋನ ಪ್ರೇಮಕಥೆಯಾಗಿದ್ದು, ಪಕ್ಕಾ ರಾ ಲವ್‌ ಸಬ್ಜೆಕ್ಟ್ ಎಂಬುದು ಅಭಿ ಮಾತು.

Advertisement

ಚಿತ್ರಕ್ಕೆ ಲೋಕಿ ಅವರು ಸಂಗೀತ ನೀಡಿದ್ದಾರೆ. ಹಂಸಲೇಖ ಅವರ ದೇಸಿ ಕಾಲೇಜಿನಲ್ಲಿ ಕೆಲಸ ಮಾಡಿದ್ದ ಲೋಕಿ ಇಲ್ಲಿ ನಾಲ್ಕು ಹಾಡುಗಳನ್ನು ನೀಡಿದ್ದಾರೆ. ವಿನು ಮನಸು ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಪ್ರದೀಪ್‌ ಗಾಂಧಿ ಚಿತ್ರದ ಛಾಯಾಗ್ರಾಹಕರು.

Advertisement

Udayavani is now on Telegram. Click here to join our channel and stay updated with the latest news.

Next