Advertisement

ಮಂಕನಾದ ಯಂಕ!

12:26 PM Feb 01, 2018 | |

ಅದೊಂದು ಪುಟ್ಟ ಊರು. ಅಲ್ಲಿನ ಜನ ಕಷ್ಟಪಟ್ಟು ದುಡಿದು ಸಂತೃಪ್ತಿಯ ಜೀವನ ನಡೆಸಿದ್ದರು. ನೂರಾರು ಜನ ಒಳ್ಳೆಯವರ ಮಧ್ಯೆ ಯಂಕನೆಂಬ ದುರ್ಬುದ್ಧಿಯವನೂ ಇದ್ದ. ಮೋಸ ಮಾಡುವುದು ಅವನ ಕೆಲಸವಾಗಿತ್ತು. ಅವನ ಕಾಟದಿಂದ ಜನರು ಬೇಸತ್ತಿದ್ದರು. ಅದಕ್ಕೇ ಅವನೊಂದಿಗೆ ಬೆರೆಯಲು ಯಾರೂ ಇಷ್ಟ ಪಡುತ್ತಿರಲಿಲ್ಲ.

Advertisement

ಯಂಕನ ಮನೆ ಪಕ್ಕ ವಾಸವಿದ್ದ ಮಲ್ಲಪ್ಪನ ಮನೆಯಲ್ಲಿ ಒಂದು ದಿನ ಪೂಜಾ ಕಾರ್ಯಕ್ರಮ ಏರ್ಪಾಡಾಗಿತ್ತು. ಅವನು ತುಂಬಾ ಬಡವನಾಗಿದ್ದ. ಹೀಗಿದ್ದರೂ ಮಲ್ಲಪ್ಪ ಸಾಲ ಮಾಡಿಯಾದರೂ ಪೂಜೆಯ ನಂತರ ಓಣಿಯ ಹತ್ತಿಪ್ಪತ್ತು ಜನರಿಗೆ ಊಟ ಹಾಕಿಸುವ ಯೋಚನೆ ಮಾಡಿದ. ಇದನ್ನು ತಿಳಿದ ಯಂಕ, ಮಲ್ಲಪ್ಪನನ್ನು ಮಾತಿನಲ್ಲಿ ಮರುಳು ಮಾಡಿ ಊಟದ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡ. “ಊಟದ ಖರ್ಚನ್ನು ಸದ್ಯಕ್ಕೆ ನಾನು ಕೊಟ್ಟಿರುತ್ತೇನೆ. ಪೂಜೆ ಕಾರ್ಯಕ್ರಮಗಳೆಲ್ಲವೂ ಮುಗಿದ ನಂತರ ಬಿಲ್‌ ಕೊಡುತ್ತೇನೆ. ನನಗೆ ಸೇರಬೇಕಾದ ಮೊತ್ತ ಕೊಟ್ಟರೆ ಸಾಕು” ಎಂದು ಯಂಕ ಉದಾರ ಮನೋಭಾವದವನಂತೆ ನಾಟಕವಾಡಿದ. ಅದಕ್ಕೆ ಮರುಳಾದ ಮಲ್ಲಪ್ಪ ಯಂಕನಿಗೆ ಕೃತಜ್ಞತೆ ಸಲ್ಲಿಸಿದ. ಆದರೆ ನಿಜಸಂಗತಿಯೇನೆಂದರೆ ಯಂಕನಿಗೆ ಸಹಾಯ ಮಾಡುವ ಉದ್ದೇಶ ಇರಲೇ ಇಲ್ಲ. ಅವನು ಆಹಾರ ಸಾಮಗ್ರಿ ಖರೀದಿಸುವಾಗ ತಪ್ಪು ಲೆಕ್ಕ ತೋರಿಸಿ ಹಣ ಪೀಕುವ ಸಂಚು ಹೂಡಿದ್ದ. 

 ಈ ವಿಷಯ ತಿಳಿಯದ ಮಲ್ಲಪ್ಪ ನಾಲ್ಕಾರು ಪರಿಚಯಸ್ಥರ ಬಳಿ ಯಂಕನ ಗುಣಗಾನ ಮಾಡಿದ. ಆಗ ಗ್ರಾಮಸ್ಥರು ವಿಷಯವೇನೆಂದು ಕೇಳಿದಾಗ ಮಲ್ಲಪ್ಪ ಯಂಕ ಮಾಡಿದ ಸಹಾಯವನ್ನು ಹೇಳಿದ. ಗ್ರಾಮಸ್ಥರಿಗೆ ತುಂಬಾ ಅನುಮಾನ ಬಂದಿತು. ಅವರು ಯಂಕನನ್ನು ನಂಬಲಿಲ್ಲ. ಆಮೇಲೆ ದಿನಸಿ ಅಂಗಡಿಯವನನ್ನು ವಿಚಾರಿಸಿದಾಗ ಯಂಕ ಹೆಚ್ಚಿನ ಮೊತ್ತಕ್ಕೆ ಬಿಲ್‌ ಮಾಡಿಸಿಕೊಂಡಿರುವ ವಿಷಯ ಬಾಯಿಬಿಟ್ಟಿದ್ದ. ಗ್ರಾಮಸ್ಥರೆಲ್ಲಾ ಸೇರಿ ಒಂದು ಉಪಾಯ ಮಾಡಿದರು. 

ಪೂಜೆಯ ದಿನ ಬಂದಿತು. ಕಾರ್ಯಕ್ರಮಕ್ಕೆ ಊರಿನ ಮುಖಂಡರು ಮಾತ್ರವಲ್ಲದೆ ಪಕ್ಕದೂರಿನ ಗಣ್ಯವ್ಯಕ್ತಿಗಳೆಲ್ಲಾ ಬಂದಿದ್ದರು. ಮಧ್ಯಾಹ್ನದ ಊಟ ತುಂಬಾ ರುಚಿಕರವಾಗಿತ್ತು. ಗಣ್ಯರೆಲ್ಲಾ ಭೋಜನ ಸವಿತು ಸಂತಪ್ತರಾದರು. ಯಂಕನ ಸಂಚನ್ನು ತಿಳಿದಿದ್ದ ಊರಿನ ಮುಖಂಡ ಇದೇ ಸಮಯವೆಂದು ಧ್ವನಿವರ್ಧಕವನ್ನು ಕೈಗೆತ್ತಿಕೊಂಡ. ಎಲ್ಲರಿಗೂ ಕೇಳುವಂತೆ “ಇವತ್ತಿನ ಭೋಜನವನ್ನು ಎಲ್ಲರೂ ಸವಿದು ಹೊಗಳಿದ್ದೀರಿ. ಅದರ ಹಿಂದಿನ ರೂವಾರಿ ಶ್ರೀ ಯಂಕನವರು.” ಎಂದ. ಗಣ್ಯರ ಮುಂದೆ ತನ್ನ ಹೆಸರು ಪ್ರಸ್ತಾಪ ಮಾಡಿದ್ದಕ್ಕೆ ಯಂಕನಿಗೆ ಖುಷಿಯೋ ಖುಷಿ. ಅವನು ಕುಳಿತಲ್ಲಿಂದಲೇ ಎದ್ದು ಗರ್ವದಿಂದ ನಮಸ್ಕಾರ ಮಾಡಿದ. ಭಾಷಣವನ್ನು ಮುಂದುವರಿಸಿದ ಮುಖಂಡ “ಭೋಜನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ಮಾತ್ರವಲ್ಲ. ಮಲ್ಲಪ್ಪನಿಗೆ ಸಹಾಯ ಮಾಡುವ ಉದ್ದೇಶದಿಂದ ಅದರ ಪೂರ್ತಿ ಖರ್ಚನ್ನೂ ಅವರೇ ವಹಿಸಿಕೊಂಡಿದ್ದಾರೆ” ಎಂದು ಡಂಗುರ ಸಾರಿದ. ಯಂಕನಿಗೆ ಪೀಕಲಾಟಕ್ಕಿಟ್ಟುಕೊಂಡಿತು. ಗಣ್ಯರು ಚಪ್ಪಾಳೆ ತಟ್ಟಿ ಹೊಗಳುವ ಸಂದರ್ಭದಲ್ಲಿ ಇಲ್ಲ ಎನ್ನಲು ಅವನಿಗೆ ಬಾಯಿ ಬರಲಿಲ್ಲ. ಸುಮ್ಮನೆ ತಲೆಯಾಡಿಸಿದ. ಅವನ ಕುತಂತ್ರ ಫ‌ಲಿಸದಿದ್ದುದಕ್ಕೆ ಗ್ರಾಮಸ್ಥರು ಬಿದ್ದೂ ಬಿದ್ದು ನಕ್ಕರು. ಈ ಘಟನೆಯ ನಂತರ ಯಂಕ ಯಾವತ್ತೂ ಇನ್ನೊಬ್ಬರಿಗೆ ಮೋಸ ಮಾಡಲು ಹೋಗಲಿಲ್ಲ.

ಅಶೋಕ ವಿ. ಬಳ್ಳಾ

Advertisement
Advertisement

Udayavani is now on Telegram. Click here to join our channel and stay updated with the latest news.

Next