ಯಲ್ಲಾಪುರ: ನಲ್ವತ್ತಕ್ಕೂ ಹೆಚ್ಚು ಟರ್ಕಿ ಕೋಳಿಗಳು ಸಾವಿಗೀಡಾದ ಘಟನೆ ತಾಲೂಕಿನ ಉಮ್ಮಚ್ಗಿ ಪಂಚಾಯತ್ ವ್ಯಾಪ್ತಿಯ ಕೋಟೆಮನೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಉಮ್ಮಚಗಿಯ ಕಲಾವತಿ ಸೋಮಿನ್ ಸಿದ್ದಿ ಎಂಬ ಮಹಿಳೆಗೆ ಸೇರಿದ ಸುಮಾರು ನಲವತ್ತಕ್ಕೂ ಹೆಚ್ಚು ಟರ್ಕಿ ಕೋಳಿಗಳಿಗೆ ಕಿಡಿಗೇಡಿಗಳು ಮಾಡಿಸಿದ ವಿಷ ಪ್ರಾಶನದಿಂದಾಗಿ ಎರಡು ಹಂತಗಳಲ್ಲಿ ಸಾವಿಗೀಡಾಗಿದೆ.
ತಿಂಗಳ ಮೊದಲು ಮೊದಲ ಸಲ ಇದ್ದಕ್ಕಿದ್ದಂತೆ ಮೂವತ್ತಕ್ಕೂ ಹೆಚ್ಚು ಕೋಳಿಗಳು ಸಾವಿಗೀಡಾಗಿತ್ತು. ಆ ಸಂದರ್ಭದಲ್ಲಿ ಮನೆಮಂದಿ ಅವುಗಳನ್ನು ಅಡುಗೆ ಮಾಡಿ ಸೇವಿಸಿದ್ದರು. ಮರುದಿನ ಮನೆ-ಮಂದಿಗೆಲ್ಲ ವಾಂತಿ-ಭೇದಿಯಂತಹ ಸಮಸ್ಯೆಗಳು ಶುರುವಾಗಿ, ವೈದ್ಯರ ಬಳಿ ಪರೀಕ್ಷಿಸಿದ ಸಂದರ್ಭ, ಸಣ್ಣ ಪ್ರಮಾಣದ ವಿಷ ದೇಹ ಸೇರಿರುವುದು ತಿಳಿದು ಬಂದು, ನಾಲ್ಕಾರು ದಿನ ಔಷಧೋಪಚಾರ ನಡೆದಿರುವುದಾಗಿ ತಿಳಿಸಿದ್ದಾರೆ.
ಈಗ ಐದಾರು ದಿನಗಳ ಹಿಂದೆ ಮತ್ತೊಂದಿಷ್ಟು ಕೋಳಿಗಳು ಸಾವಿಗೀಡಾದಾಗ ಮನೆಮಂದಿ ಮತ್ತಷ್ಟು ಕಂಗಾಲಾದರು. ಸಂಘದಿಂದ ಸಾಲ ಮಾಡಿ ಕೋಳಿ ಸಾಕಿದ್ದ ಬಡಕುಟುಂಬಕ್ಕೀಗ ಕಣ್ಣೀರಲ್ಲದೆ ಮತ್ತೇನೂ ಉಳಿದಿರುವುದಿಲ್ಲ. ಯಾರೋ ಕಿಡಿಗೇಡಿಗಳು ವಿಷಪ್ರಾಶನ ಮಾಡಿರುವ ಪರಿಣಾಮ ಈ ರೀತಿಯಾಗಿ ಕೋಳಿಗಳು ಸತ್ತು ಹೋಗಿವೆ ಎಂದು ಕೊಳ್ಳಲಾಗಿದೆ.
ಕೋಳಿಗಳು ಮನೆ ಬಾಗಿಲಿಗೆ ಬಂದು ತೊಂದರೆ ಕೊಡುತ್ತವೆಂದು ಅಮಾನವೀಯ ಕೆಲಸ ಮಾಡಬಾರದು. ಕೃತ್ಯ ಎಸಗಿದವರು ಯಾರೇ ಆಗಿದ್ದರೂ ತಕ್ಕ ಶಿಕ್ಷೆ ಆಗಲಿ. ನೊಂದ ಕುಟುಂಬಕ್ಕೆ ಪಂಚಾಯತ್ ನಿಂದ ಕೈಲಾದ ಸಹಾಯ ಮಾಡಲಾಗುವುದು. -ಗ.ರಾ.ಭಟ್ಟ, ಗ್ರಾ.ಪಂ ಸದಸ್ಯ, ಉಮ್ಮಚಗಿ