Advertisement
ಮಿಜಾರು ಮೋಹನ ಶೆಟ್ಟಿಗಾರ ಶೆಟ್ಟಿಗಾರರು ತೆಂಕುತಿಟ್ಟಿನ ಪ್ರಸಿದ್ಧ ಮದ್ದಲೆ ಚೆಂಡೆ ವಾದಕರು. 15ನೇ ಪ್ರಾಯದಲ್ಲೇ ಗುರುಪುರ ಅಣ್ಣಿಭಟ್ ರವರಲ್ಲಿ ಚೆಂಡೆ – ಮದ್ದಲೆ ವಾದನ ಕಲಿತುಕೊಂಡು ಪರಿಣತರಾದರು.1982ರಲ್ಲಿ ಕಟೀಲು ಮೇಳದ ಯಜಮಾನರಾದ ಕಲ್ಲಾಡಿ ವಿಠಲ ಶೆಟ್ಟರಿಂದ ಆಹ್ವಾನ ಬಂದಾಗ ಅದರಲ್ಲಿ ಸೇರಿದರು . ಆಗ ಭಾಗವತರಾಗಿದ್ದವರು ಕುರಿಯ ಗಣಪತಿ ಶಾಸ್ತ್ರಿ ಹಾಗೂ ಮುಖ್ಯ ಮದ್ದಲೆಗಾರರಾಗಿದ್ದವರು ನೆಡ್ಲೆ ನರಸಿಂಹ ಭಟ್ಟರು . ಇವರಿಬ್ಬರ ಸಾಂಗತ್ಯದಲ್ಲಿ ಶೆಟ್ಟಿಗಾರರಿಗೆ ಅಪೂರ್ವವಾದ ಅನುಭವ ದೊರಕಿತು . ಮೇಳದಲ್ಲಿದ್ದ ಕಲಾವಿದರೂ ದಿಗ್ಗಜರೇ ಆಗಿದ್ದ ಕಾರಣ ಶೆಟ್ಟಿಗಾರು ಹಿಮ್ಮೇಳ ವಾದನದಲ್ಲಿ ನೈಪುಣ್ಯತೆ ಗಳಿಸಿದರು. ಚೌಕಿಪೂಜೆಗೆ ಮದ್ದಲೆ ಹಿಡಿದರೆ , ಮುಂಜಾವು ಮಂಗಲಕ್ಕೇ ಮದ್ದಲೆ ಕೆಳಗಿಡುವುದು . ಅನಂತರ ಕರ್ಣಾಟಕ ಮೇಳಕ್ಕೆ ಹೋಗಿ ದಾಮೋದರ ಮಂಡೆಚ್ಚ, ಕಾಂಚನ ನಾರಾಯಣ ಭಟ್ಟ , ದಿನೇಶ ಅಮ್ಮಣ್ಣಾಯ , ಬೊಟ್ಟಿಕೆರೆ ಪುರುಷೋತ್ತಮ ಪೂಂಜರಂಥ ಭಾಗವತ ದಿಗ್ಗಜರಿಗೆ ಸಾಥಿಯಾಗಿ ಮೆರೆದರು. ಈಗ ಕಟೀಲು ಮೂರನೇ ಮೇಳದಲ್ಲಿ ವೃತ್ತಿ ನಿರತರಾಗಿರುವ ಮೋಹನ ಶೆಟ್ಟಿಗಾರರು 35 ವರ್ಷಗಳ ತಿರುಗಾಟದ ಅನುಭವ ಹೊಂದಿದ್ದಾರೆ. ರಾಕ್ಷಸ ಪಾತ್ರಗಳ ತೆರೆಪೊರಪ್ಪಾಟು , ಹನುಮಂತನ ಪ್ರವೇಶ , ಕಿರಾತನ ಪ್ರವೇಶ , ಶ್ರೀರಾಮನ ಒಡ್ಡೋಲಗ, ಶ್ರೀಕೃಷ್ಣನ ಒಡ್ಡೋಲಗ ಮುಂತಾದ ಅಪೂರ್ವ ಸನ್ನಿವೇಶಗಳ ಹಿಮ್ಮೇಳ ವಾದನ ಅರಿತವರಲ್ಲಿ ಶೆಟ್ಟಿಗಾರರೂ ಓರ್ವರು.
ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಬೇತದವರಾದ ಐತಪ್ಪ ಟೈಲರ್ ಎರಡನೇ ತರಗತಿ ಮುಗಿಸಿ ಕುರಿಯ ವಿಠಲ ಶಾಸ್ತ್ರಿಗಳ ಪ್ರೇರಣೆಯಿಂದ ಧರ್ಮಸ್ಥಳ ಮೇಳದಲ್ಲಿ ನಿತ್ಯವೇಷಕ್ಕೆ ಸೇರಿದರು.10 ವರ್ಷಗಳ ಕಾಲ ತಿರುಗಾಟ ನಡೆಸಿ ಮೇಳ ಬಿಟ್ಟ ಬಳಿಕ ಒಲಿದದ್ದು ಟೈಲರ್ ಕೆಲಸ . ಯಕ್ಷಗಾನದ ಎಲ್ಲಾ ಪಾತ್ರಗಳ ಅನುಭವ ಹಾಗೂ ಮಾಹಿತಿಯಿರುವ ಕಾರಣ ಯಕ್ಷಗಾನದ ವೇಷಭೂಷಣಗಳ ತಯಾರಿಯಲ್ಲಿ ತೊಡಗಿಸಿಕೊಂಡರು.ತೆಂಕು – ಬಡಗು ಎರಡೂ ತಿಟ್ಟುಗಳ ಪೌರಾಣಿಕ, ಐತಿಹಾಸಿಕ, ಸಾಂಪ್ರದಾಯಿಕ ಹಾಗೂ ನಾಟಕೀಯ ವೇಷಭೂಷಣಗಳ ತಯಾರಿಯಲ್ಲಿ ವಿಶೇಷ ಪರಿಣತಿ ಹೊಂದಿರುವ ಅನುಭವಿಗಳು. ರಘು ಶೆಟ್ಟಿ ನಾಳ
ನಲವತ್ತು ವರ್ಷಗಳಿಂದ ಕಟೀಲು ಮೇಳದಲ್ಲಿ ನೇಪಥ್ಯ ಕಲಾವಿದರಾಗಿದ್ದಾರೆ ನಾಳ ರಘು ಶೆಟ್ಟಿ. ಚೌಕಿಯಲ್ಲಿ ರಂಗ ಸಹಾಯಕರಾಗಿ ಕಲಾವಿದರ ಪಾತ್ರ ಪೋಷಣೆಗೆ ಸಹಕಾರಿಯಾಗುವ ಕೆಲಸಗಳನ್ನು ಮಾಡುವ ಹಿರಿಯ ವ್ಯಕ್ತಿ . ಎಲ್ಲಾ ವೇಷಗಳು ಸಿದ್ಧವಾಗಬೇಕಾದರೆ ಹಿನ್ನೆಲೆಯಲ್ಲಿ ರಘುರವರ ಸಹಾಯ ಅಗತ್ಯ . ಚುರುಕಿನಿಂದ ಚೌಕಿಯಲ್ಲಿ ಓಡಾಡುವ ರಘುಶೆಟ್ಟರೆಂದರೆ , ಕಲಾವಿದರಿಗೂ ಪ್ರೀತಿ , ಅಭಿಮಾನ. ಎಲ್ಲಾ ಪ್ರಸಂಗಗಳ ರಂಗ ಮಾಹಿತಿ ಹೊಂದಿರುವ ರಘುರವರು ಪ್ರಸಂಗದ ಓಟಕ್ಕೆ ಬೇಕಾಗುವ ಪರಿಕರಗಳ , ಪಾತ್ರಗಳ ವೇಷಭೂಷಣ , ಮಣಿ ಆಭರಣಗಳ , ಆಯುಧಗಳ ಖಚಿತವಾದ ಜ್ಞಾನ ಹೊಂದಿದ್ದು ಅದನ್ನು ಮೊದಲೇ ಸಿದ್ಧಪಡಿಸುವಲ್ಲಿ ನಿಷ್ಣಾತರು.
ಎಂ.ಶಾಂತರಾಮ ಕುಡ್ವ