Advertisement
ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶ್ರೀಕೃಷ್ಣ ಮಠಕ್ಕೂ ಯಕ್ಷಗಾನಕ್ಕೂ ಸಂಬಂಧವಿದೆ ಎಂದೂ ಹೇಳಲಾಗುತ್ತದೆ. ಇದರ ಕುರಿತಾಗಿ ಸಂಶೋಧನೆ ಕೈಗೊಳ್ಳಬಹುದು. ಇದು ದ್ರಾವಿಡ ಕಲೆಯಲ್ಲ. ಅಖೀಲ ಭಾರತೀಯ ಕಲೆ. ಕರಾವಳಿಯಲ್ಲಿ ಯಕ್ಷಗಾನ, ಕೇರಳದಲ್ಲಿ ಕಥಕ್ಕಳಿ, ಈಶಾನ್ಯ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಗುರುತಿಸಿಕೊಂಡು ವಿದೇಶಕ್ಕೂ ಹಬ್ಬಿದೆ. ಇದರಲ್ಲಿ ಶಾಸ್ತ್ರೀಯ, ಅಶಾಸ್ತ್ರೀಯ ಎಂಬುದಿಲ್ಲ. ಆದರೆ ಕಲೆಗೆ ಅತಿರೇಕದ ವಿಮರ್ಶೆ ಸಲ್ಲದು. ಕಲೆಯ ಪ್ರೋತ್ಸಾಹದ ದೃಷ್ಟಿಯಿಂದ ಶಿಕ್ಷಣ ನೀತಿಯಲ್ಲೂ ಅಮೂಲಾಗ್ರ ಬದಲಾವಣೆಯಾಗಬೇಕು ಎಂದು ಹೇಳಿದರು.
ಕರಾವಳಿಯಲ್ಲಿ ಯಕ್ಷಗಾನ ಬೆಳೆಯಲು ಆಧುನಿಕ ಮಣಿಪಾಲದ ನಿರ್ಮಾತೃ ಡಾ| ಟಿ.ಎಂ.ಎ. ಪೈ, ಮಾಹೆ ವಿಶ್ವವಿದ್ಯಾಲಯ ಹಾಗೂ ಉದಯವಾಣಿ ದಿನಪತ್ರಿಕೆಯ ಯೋಗದಾನ ಸಾಕಷ್ಟಿದೆ. ಉದಯವಾಣಿ ದಿನಪತ್ರಿಕೆಯು ಅನೇಕ ರೀತಿಯಲ್ಲಿ ಕಲಾವಿದರನ್ನು ಪರಿಚಯಿಸುವಲ್ಲಿ ಸಹಕಾರಿಯಾಗಿದೆ ಎಂದು ಸಮ್ಮೇಳನಾಧ್ಯಕ್ಷರು ಸ್ಮರಿಸಿಕೊಂಡರು. ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ| ಎಂ.ಎಲ್. ಸಾಮಗ ಅವರು ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿದರು.
Related Articles
ಯಕ್ಷಗಾನದ ಸ್ವರೂಪ, ಸಂಚಲನೆ, ವಿಚಲನೆಗೆ ಸಂಬಂಧಿಸಿದಂತೆ ಸಾಂಪ್ರದಾಯಿಕ ಚೌಕಟ್ಟಿದೆ. ಕಲೆಯಲ್ಲಿ ಯಾವುದೇ ವಸ್ತು ಸ್ವತಂತ್ರವಾಗಿರದು. ಹೊಸತನವನ್ನು ತರುವಾಗ ವಿಚಲನೆ ಉಂಟಾಗುವುದು ಸ್ವಾಭಾವಿಕ. ರಂಗದಲ್ಲಿ ಕಂಡದ್ದು, ಕಲೆಯಲ್ಲ. ಮನಸ್ಸಿನಲ್ಲಿ ಪೂರ್ಣಗೊಳಿಸುವುದೇ ಯಕ್ಷಗಾನ ಕಲೆ. ವಸ್ತುವನ್ನು ಯಕ್ಷಗಾನೀಕರಿಸಬೇಕು, ಹೊರತು ಯಕ್ಷಗಾನವನ್ನು ವಸ್ತುವನ್ನಾಗಿಸಬಾರದು ಎಂದು ಸಂವಾದದಲ್ಲಿ ಡಾ| ಎಂ. ಪ್ರಭಾಕರ ಜೋಷಿ ಹೇಳಿದರು.
Advertisement
ಯಕ್ಷಗಾನದ ಪ್ರಬೋಧನೆ ಮಾಡಬಲ್ಲ ಗ್ರಂಥಾಲಯವನ್ನು ದೇವಾಲಯಗಳು ಸ್ಥಾಪಿಸಿ, ಪುಸ್ತಕಗಳನ್ನು ಓದಿ ಅರ್ಥ ಮಾಡಿಕೊಂಡು ಕಲಾವಿದರಿಗೆ ವಿವರಿಸುವ ಯಕ್ಷಗಾನದ ಪರಿಣಿತಿ ಇರುವ ಶಿಕ್ಷಕರನ್ನು ನೇಮಿಸಬೇಕು. ಇದರಿಂದಾಗಿ ಯುವ ಕಲಾವಿದರಿಗೆ ಯಕ್ಷಗಾನದ ಪ್ರಯೋಗದ ಜತೆಗೆ ಮೌಲ್ಯಗಳ ಅರಿವಾಗುತ್ತದೆ. ಪ್ರಸ್ತುತ ಸ್ತ್ರೀ-ಪುರುಷ ಪಾತ್ರಧಾರಿಗಳು ಸಮಾನವಾಗಿ ರಂಗಸ್ಥಳದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಯಾಗಬೇಕಿದೆ ಎಂದರು.
ಯಕ್ಷಗಾನದ ಕಲಾ ಪ್ರಕಾರವಾಗಿ ತಾಳಮದ್ದಲೆಯನ್ನು ಅಂಗೀಕರಿಸಿಕೊಂಡಿದ್ದೇವೆ. ವಾಚಕದಲ್ಲಿ ಯಕ್ಷಗಾನೀಯತೆ ಇದ್ದರೆ ತಾಳಮದ್ದಳೆ ಅರ್ಥಗರ್ಭಿತವಾಗಲಿದೆ ಎಂದು ಹೇಳಿದರು.ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ, ಹಿರಿಯ ವಿದ್ವಾಂಸ ಡಾ| ರಮಾನಂದ ಬನಾರಿ ಉಪಸ್ಥಿತರಿದ್ದರು. ಸಂವಾದಕಾರರಾಗಿ ಕಲಾವಿದ ವಾಸುದೇವ ರಂಗಭಟ್ ನಿರ್ವಹಿಸಿದರು. ಸಮ್ಮೇಳನಾಧ್ಯಕ್ಷರ ಒತ್ತಾಸೆ
– ಯಕ್ಷಗಾನದ ವಿವಿಧ ತಿಟ್ಟು, ಮೇಳಗಳು, ತಾಳಮದ್ದಳೆ, ಮೂಡಲ ಪಾಯ, ಘಟ್ಟದ ಕೋರೆ, ಕೇಳಿಕೆ ಸಹಿತ ತಿಟ್ಟುಗಳ ಲಭ್ಯ ಪಾರಂಪರಿಕ ರೂಪಗಳ ತಜ್ಞ ದಾಖಲೀಕರಣ ಆಗಬೇಕು
– ದೇವಾಲಯಗಳ ಮೇಳಗಳನ್ನು ಸಾಂಸ್ಕೃತಿಕ ನೀತಿಯೊಂದಿಗೆ ವ್ಯವಸ್ಥಿತ ಗೊಳಿಸಲು ತಜ್ಞರ ಸಮಿತಿ ಆಗಬೇಕುಯಕ್ಷಗಾನ ಕಲೆ, ಕಲಾವಿದ, ಮೇಳಗಳು, ಗ್ರಂಥಗಳ ಸಮಗ್ರ ಡಾಟಾಬೇಸ್ ಸಿದ್ಧವಾಗಬೇಕು
– ಕಲಾವಿದರಿಗೆ ಭವಿಷ್ಯ ನಿಧಿ ಸಿಗಬೇಕು.
– ಹತ್ತುವರ್ಷ ಪೂರೈಸಿರುವ ಯಕ್ಷಗಾನ ಕಲಾಕೇಂದ್ರಗಳಿಗೆ ಖಾಯಂ ಅನುದಾನ ಸಿಗಬೇಕು.
– ದೇವಾಲಯಗಳಿಗೆ ಕಲಾ ನೀತಿ ಅನುಷ್ಠಾನ ಮಾಡಬೇಕು.
– ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಲೋತ್ಸವದಲ್ಲಿ ಯಕ್ಷಗಾನಕ್ಕೆ ಅವಕಾಶ ಸಿಗಬೇಕು, ಇದಕ್ಕಾಗಿ ರಾಜ್ಯ ಸಭಾ ಸದಸ್ಯರೂ ಆದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಕಾರ್ಯಪಡೆ ಸ್ಥಾಪಿಸಬೇಕು.
– ಯಕ್ಷಗಾನಕ್ಕೆ ಯುನೆಸ್ಕೋ ಮಾನ್ಯತೆ ಸಿಗುವಂತೆ ಪ್ರಯತ್ನ ಪುನರ್ ಆರಂಭಿಸಬೇಕು.
– ಯಕ್ಷಗಾನ ದಿರಿಸು ಉಳಿಸಲು ಗೆಜ್ಜೆಬ್ಯಾಂಕ್ ಸ್ಥಾಪಿಸಬೇಕು ಎಂಬುದು ಸೇರಿದಂತೆ 28 ಒತ್ತಾಸೆಗಳನ್ನು ಪ್ರಸ್ತಾವಿಸಿದರು.