Advertisement

ಹಿರಿಯರ ಕೊಡುಗೆಯಿಂದ ಎತ್ತರಕ್ಕೇರಿದ ಯಕ್ಷರಂಗ

06:09 PM Mar 16, 2018 | Team Udayavani |

ಶಿರಸಿ: ಯಕ್ಷರಂಗ ಇಂದು ಇಷ್ಟು ಎತ್ತರದಲ್ಲಿ ಇರಲು, ನಾವು ಯಕ್ಷರಂಗದಿಂದ ಗೌರವ ಪಡೆಯಲು ಹಿರಿಯರು ಕೊಟ್ಟ ಅನನ್ಯ ಕೊಡುಗೆ ಕಾರಣ. ಅವರು ಅಷ್ಟು ಶ್ರಮಿಸಿದ್ದರ ಪರಿಣಾಮವೇ ಇಂದು ನಾವು ಈ ಕ್ಷೇತ್ರದಲ್ಲಿ  ಗುರುತಿಸಿಕೊಳ್ಳಲು ಕಾರಣ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಕೂರು ಕೃಷ್ಣಯಾಜಿ ಅಭಿಮತ ವ್ಯಕ್ತಪಡಿಸಿದರು.

Advertisement

ಅವರು ಉದಯವಾಣಿ ಜೊತೆ ಮಾತನಾಡಿ, ಹಿರಿಯರು ಕೊಟ್ಟ ಕೊಡುಗೆ ನೆನಪಿಡಬೇಕು. ಇದೇ ಕಾರಣಕ್ಕೆ ಯಾಜಿ ಯಕ್ಷ ಮಿತ್ರ ಮಂಡಳಿ ಪ್ರತೀವರ್ಷ ಪ್ರಶಸ್ತಿ ಜೊತೆ ಆರ್ಥಿಕ ನೆರವನ್ನೂ ನೀಡುತ್ತಿದೆ. ಕಳೆದ 13 ವರ್ಷದಿಂದ ನಿರಂತರವಾಗಿ ಬಡ ಅಶಕ್ತ ಕಲಾವಿದರಿಗೆ ನೀಡುವ ಮೂಲಕ ನಾನು ಸಾರ್ಥಕ್ಯ ಕಾಣುತ್ತಿದ್ದೇನೆ. ವಿಶೇಷ ಎಂದರೆ ಈವರೆಗೆ ಈ ಯಾಜಿ ಒಂದು ರೂ. ನೀಡಿಲ್ಲ. ಕಲಾಭಿಮಾನಿಗಳೇ ಈ ಪುರಸ್ಕಾರ ಸಮಾರಂಭ ನಡೆಸಿಕೊಡುತ್ತಿದ್ದಾರೆ ಎಂದು ಹೇಳಿದರು.

ಯಕ್ಷಗಾನದಲ್ಲಿ ಮುಂದಿನ ತಲೆಮಾರಿನಲ್ಲಿ ಹೊಸಬರ ಜೊತೆಗೆ ಅಧ್ಯಯನ, ಅಧ್ಯಾಪನ ಮಾಡುವುದನ್ನೂ ರೂಢಿಸಿಕೊಳ್ಳಬೇಕು ಎನ್ನುವ ಯಾಜಿ, ಈ ಪ್ರಶಸ್ತಿ ಪ್ರದಾನ ನನ್ನ ನಂತರವೂ ಮುಂದುವರಿಯಬೇಕು. ನನಗೆ ಗಂಡು ಮಕ್ಕಳಿಲ್ಲ. ಮಗಳ ಮಗ ಅಭಿಷೇಕ ಹಾಗೂ ಅವರ ತಂದೆ ಮುಂದುವರಿಸಿಕೊಂಡು ಹೋಗುತ್ತಾರೆ ಎಂಬ ವಿಶ್ವಾಸವಿದೆ ಎಂದೂ ಹೇಳಿದರು.

ಪ್ರಶಸ್ತಿ ಪ್ರದಾನ: ಬಡಗುತಿಟ್ಟಿನ ರಂಗಸ್ಥಳದಲ್ಲಿ ಐದು ದಶಕಗಳ ಕಾಲ ಎರಡನೇ ಪ್ರಧಾನ ವೇಷಧಾರಿಯಾಗಿ ರಂಗಸ್ಥಳ ಆಳಿದ ಕೊಪ್ಪಾಟೆ ಮುತ್ತು ಗೌಡರಿಗೆ ಯಾಜಿ ಯಕ್ಷಮಿತ್ರ ಪ್ರಶಸ್ತಿ ಹಾಗೂ 25 ಸಾವಿರ ರೂ. ಅರ್ಪಿಸುವ ಯಕ್ಷ ಯುಗಾದಿ ಸಮಾರಂಭ ಮಾ.18ರಂದು ಸಂಜೆ 4ಕ್ಕೆ ನಗರದ ತೋಟಗಾರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ. ವಿ.ಉಮಾಕಾಂತ ಭಟ್ಟ ಮೇಲುಕೋಟೆ, ಶಾಂತಾರಾಂ ಹೆಗಡೆ ಶೀಗೇಹಳ್ಳಿ, ಪ್ರೊ| ಎಂ.ಎ.ಹೆಗಡೆ ದಂಟಕಲ್‌, ಭೀಮಣ್ಣ ನಾಯ್ಕ, ಉಪೇಂದ್ರ ಪೈ
ಇತರರು ಪ್ರಶಸ್ತಿ ಪ್ರದಾನ ಮಾಡುತ್ತಿದ್ದಾರೆ. ಬಳಿಕ ಶ್ರೀಕೃಷ್ಣ ಸಂಧಾನ ಯಕ್ಷಗಾನ ಪ್ರದರ್ಶನ ಕೂಡ ಹಮ್ಮಿಕೊಳ್ಳಲಾಗಿದೆ.

ಯಕ್ಷಗಾನ: ಶ್ರೀ ಕೃಷ್ಣ ಸಂಧಾನ ಆಟದ ಹಿಮ್ಮೇಳದಲ್ಲಿ ಬಡಗಿನ ಖ್ಯಾತ ಭಾಗವತ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ್‌ ಯಲ್ಲಾಪುರ, ಗಣೇಶ ಗಾಂವಕರ್‌ ಸಹಕಾರ ನೀಡಲಿದ್ದಾರೆ. ಮುಮ್ಮೇಳದಲ್ಲಿ ಕೃಷ್ಣಯಾಜಿ ಬಳಕೂರು, ರಾಮಚಂದ್ರ ಹೆಗಡೆ ಕೊಂಡದಕುಳಿ, ಪ್ರದೀಪ ಸಾಮಗ, ಶ್ರೀಪಾದ ಹೆಗಡೆ ಹಡಿನಬಾಳ, ಅಶೋಕ ಭಟ್ಟ ಸಿದ್ದಾಪುರ, ಶ್ರೀಧರ ಹೆಗಡೆ ಚಪ್ಪರಮನೆ, ಹಮ್ಮಣ್ಣ ಗಾಂವಕರ್‌, ವೆಂಕಟೇಶ ಹೆಗಡೆ,  ಸಂತೋಷ ಹೆಗಡೆ, ಅಭಿಷೇಕ ಅಡಿ ಹಾಗೂ ಇತರ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next