ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕು ಇನ್ನೂ ಒಂದಿಷ್ಟು ಹಸಿರು ಅರಣ್ಯಗಳನ್ನು ಕೃಷಿ ಭೂಮಿಯನ್ನು ಉಳಿಸಿಕೊಂಡಿರುವ ಪ್ರದೇಶ. ಅಘನಾಶಿನಿ ಇಲ್ಲಿಯ ಮುಖ್ಯ ನದಿಯಾದರೆ ಅದಕ್ಕೆ ಬಂದು ಸೇರುವ ಬಿಳಗಿ ಹೊಳೆ, ಮಳಲಹೊಳೆ, ಸೋಮ ನದಿ ಇತ್ಯಾದಿ ಸಣ್ಣ ಸಣ್ಣ ಹೊಳೆಗಳು ಅಡಿಕೆ ಕೃಷಿ ತೆಂಗು ಭತ್ತಗಳಿಗೆ ಈಗಲೂ ಭೂಮಿಯನ್ನು ಸಜ್ಜು ಮಾಡಿ ಕೊಡುತ್ತಿವೆ.
ಇಟಗಿ ಸಮೀಪದ ಕಲಗದ್ದೆ ಎಂಬ ಚಿಕ್ಕ ಹಳ್ಳಿಯ ವಿನಾಯಕ ಹೆಗಡೆ ಒಬ್ಬ ಕೃಷಿಕ, ಯಕ್ಷಗಾನ ಕಲಾವಿದ. ಕೆರೆಮನೆ ಶಿವರಾಮ ಹೆಗಡೆ, ಶಂಭು ಹೆಗಡೆಯವರ ಜತೆಯಲ್ಲಿದ್ದು ಯಕ್ಷಗಾನವನ್ನು ಕಲಿತು ಶುದ್ದ ನರ್ತನದ ಮೂಲಕ ಯಕ್ಷಗಾನ ಪ್ರದರ್ಶನ ನೀಡುತ್ತ ಬಂದಿರುವ ಹವ್ಯಾಸಿ ಕಲಾವಿದ.
ಹಿಂದಿನಿಂದಲೂ ಯಕ್ಷಗಾನಕ್ಕೂ ಗಣಪತಿಗೂ ವಿಶಿಷ್ಟವಾದ ನಂಟು. ಗಣಪತಿಯ ಕಿರೀಟವನ್ನಿಟ್ಟು ಪೂಜಿಸಿದ ನಂತರವೇ ಪ್ರಸಂಗ ತೊಡಗುವುದು. ಆಟದ ಪ್ರಾರಂಭ ಸಹ ಗಜಮುಖನ ಸ್ತುತಿಯಿಂದಲೇ. ಗಜಮುಖ ನಾನಿನ್ನ ಪಾದವ ನೆನೆವೇ…ಪ್ರಸಂಗದ ಕೊನೆಯಲ್ಲಿಯೂ ಗಜಮುಖದವಗೆ ಗಣಪಗೆ ಚೆಲುವ ತ್ರಿಜಗವಂದಿತಗೆ ಆರತಿ ಎತ್ತಿರೇ.. ಎನ್ನುತ್ತಲೇ ಭಾಗವತರು ತಾಳ ಕೆಳಗಿಡುವುದು.
ಇಂಥ ಆದಿಪೂಜಿತನ ಆರಾಧಕರಾದ ಕಲಗದ್ದೆ ವಿನಾಯಕ ಹೆಗಡೆ ಅವರು ಈಗ ಎರಡು ವರ್ಷಗಳ ಹಿಂದೆ ತನ್ನ ಬಾಲ್ಯದಲ್ಲಿ ತಾನು ಹೊಳೆಯಲ್ಲಿ ಪೂಜಿಸುತ್ತಿದ್ದ ಕಲ್ಲಿನ ಗಣಪನನ್ನು ಯಕ್ಷವಿನ್ಯಾಸದಲ್ಲಿ ಕಟೆದು ಸ್ಥಾಪನೆ ಮಾಡಿ ಯಕ್ಷಗಣಪನನ್ನು ನಾಟ್ಯ ವಿನಾಯಕನ ಮೂರ್ತಿಯಲ್ಲಿ ಆವಾಹಿಸಿಕೊಂಡು ಪೂಜಿ ಸುವ ಸಂಕಲ್ಪ ಮಾಡಿದರು. ಅವರ ಈ ಸಂಕಲ್ಪಕ್ಕೆ ಊರವರು, ಮಡದಿ ಮಕ್ಕಳು, ಸ್ನೇಹಿತರು ಸಮಾನ ಮನಸ್ಕರು ಹೀಗೆ ಅನೇಕರು ಕೈಜೋಡಿಸಿದರು.
ಸುಂದರವಾದ ಮೂರ್ತಿ ಯನ್ನು ಯಕ್ಷಗಾನ ದಿರಿಸಿನಲ್ಲಿ ಕಟೆದು ಕೊಟ್ಟವರು ಇಡಗುಂಜಿಯ ಶಿಲ್ಪಿಯಾದ ಬೆಂಗಳೂರಿನಲ್ಲಿ ನೆಲೆಸಿರುವ ಜಿ.ಎಲ್. ಭಟ್ಟರು. ಯಕ್ಷಗಾನದ ಕಿರೀಟ, ಎದೆಹಾರ, ಭುಜಕೀರ್ತಿ, ಕಾಲಿಗೆ ಗೆಜ್ಜೆ, ಹಾರಗಳು… ಯಥಾವತ್ತಾಗಿ ಯಕ್ಷಗಾನದ ರಾಜ ವೇಷವೊಂದರ ವಿನ್ಯಾಸದಲ್ಲಿ ನಮ್ಮಿ ‘ಜ್ಯೇಷ್ಠ ರಾಜ’ ಗಣಪ ಮೂಡಿಬಂದ ಸೊಗಸನ್ನು ನೋಡಲು ಆ ಮೂರ್ತಿಯನ್ನು ಸ್ವತಃ ನೋಡಬೇಕು. ಕಾಲ ಕೆಳಗಿರುವ ಪುಟ್ಟ ಮೂಷಿಕನಿಗೆ ಯಕ್ಷಗಾನದ ಕಸೆ ಅಂಗಿ ತೊಡಿಸಿರುವುದು ವಿಶೇಷ. ಯಕ್ಷಗಾನದ ವೇಷದ ನಾಟ್ಯ ವಿನಾಯಕ ಆರುಕೈ ಹೊಂದಿ ತ್ರಿನೇತ್ರನಾಗಿ, ಬಲಮುರಿಯಾಗಿ, ಚಂದ್ರಧಾರಿಯಾಗಿ, ಬಹುಬೀಜ ಫಲಧಾರಿಯಾಗಿ ತಾ ತೋ ತರಿಕಿಟಕಿಟತ ಎಂದು ಕಾಲೆತ್ತಿ ಕುಣಿಯುವ ಭಂಗಿಯಲ್ಲಿ ನಿಂತಿದ್ದು ಭಕ್ತಿಯ ಜೊತೆಗೆ ಒಂದು ಉತ್ಸಾಹದ ಸೆಳಕನ್ನು ತೋರುತ್ತ ನಿಂತಂತಿದೆ. ಈ ತರದ ಯಕ್ಷ ಗಣಪ ಮತ್ತೆಲ್ಲೂ ಇಲ್ಲ. ಪ್ರಥಮ ಬಾರಿಗೆ ಕಲಗದ್ದೆಯಲ್ಲಿ ಮೈದಳೆದು ನಿಂತ ಈ ಮುದ್ದು ಗಣಪ ಕೇವಲ ಒಂದು ವರ್ಷದ ಒಳಗೆ ಅಪಾರ ಸಂಖ್ಯೆಯ ಭಕ್ತರನ್ನು ತನ್ನೆಡೆಗೆ ಸೆಳೆದ ಆಕರ್ಷಕ ಮೂರ್ತಿ. ಭಕ್ತರ ಕೋರಿಕೆಗೆ ಕ್ಷಿಪ್ರವಾಗಿ ಸ್ಪಂದಿಸುವ, ಪ್ರಸಾದ ನೀಡಿ ಧೈರ್ಯ ತುಂಬುವ ಈ ಗಣಪನಿಗೆ ‘ಕ್ಷಿಪ್ರ ಗಣಪ’ ಎಂಬ ಹೆಸರೂ ಪ್ರಾಪ್ತವಾಗಿದೆ.
ಯೋಗ ಪಟ್ಟಾಭಿಷೇಕ
ಅದಕ್ಕೆ ಇಂಬು ಕೊಡುವಂತೆ ಲಕ್ಷ ಮೋದಕ ಹವನವನ್ನೂ ಸ್ಥಾಪನೆಗೊಂಡು ವರ್ಷದೊಳಗೆ ಮಾಡಿ ಆಗಿದೆ. ಮಂಡಲ ಗಣಹವನ, ನಿತ್ಯ ಗಣಹವನ ಸೇವೆ ಜೊತೆಗೆ ಇತ್ತೀಚೆಗೆ ಕಲಗದ್ದೆಯಲ್ಲಿ ಮಹಾಗಣಪತಿಯ ‘ಯೋಗ ಪಟ್ಟಾಭಿಷೇಕ’ ಎಂಬ ವಿಶಿಷ್ಟ ವಿನೂತನ ಕಾರ್ಯಕ್ರಮವೂ ನೆರವೇರಿತು.
ದಂಡಿಸಲು ಅಸಾಧ್ಯವಾದ ದಾನವ ಸಂತತಿಗಳನ್ನು ನಿಗ್ರಹಿಸಲು ಒಮ್ಮೆ ಗಣಪತಿ ದಂಡೆತ್ತಿ ಹೋಗಿ ಕೆಲವು ದಾನವರನ್ನು ಕೊಂದು, ಕೆಲವರನ್ನು ಮನಪರಿವರ್ತನೆ ಮಾಡಿ ಕೆಲವರಿಗೆ ಅನುಗ್ರಹ ನೀಡಿ ಒಟ್ಟು ದಾನವ ಕುಲದಿಂದ ದೇವತೆಗಳಿಗೆ ಉಪಟಳವಾಗುವುದನ್ನು ತಪ್ಪಿಸಿದ. ಈ ದಂಡಯಾತ್ರೆಗೆ ಹೋಗಿ ಯಶಸ್ವಿಯಾಗಿ ಬಂದ ಗಣಪನಿಗೆ ದೇವತೆಗಳೆಲ್ಲ ತಮ್ಮ ತಮ್ಮ ಆಯುಧಗಳನ್ನು ನೀಡಿ ಪಟ್ಟಾಭಿಷೇಕ ಮಾಡಿ ‘ಜ್ಯೇಷ್ಠ ರಾಜ’ ಎಂಬ ಬಿರುದು ಕೊಟ್ಟರು ಎಂಬ ಐತಿಹ್ಯವನ್ನು ಆಧರಿಸಿ ಈ ಯೋಗ ಪಟ್ಟಾಭಿಷೇಕ ನಡೆಯುತ್ತದೆ. ತ್ರಿಮೂರ್ತಿಗಳಲ್ಲಿ ಬ್ರಹ್ಮ ತನ್ನ ಕೈಯಲ್ಲಿರುವ ಕಮಲವನ್ನು ಕೊಟ್ಟರೆ ವಿಷ್ಣು ಚಕ್ರವನ್ನೇ ಗಣಪತಿಗೆ ಇತ್ತ. ಈಶ್ವರ ತನ್ನ ತಲೆಯಲ್ಲಿರುವ ಚಂದ್ರನನ್ನು ಮಗನ ತಲೆಗಿಟ್ಟ, ತಾಯಿ ಮಗನಿಗಿಷ್ಟವಾದ ಬಹುಬೀಜ ಫಲವೊಂದನ್ನು ಮಗನ ಕೈಯಲ್ಲಿಟ್ಟಳು.ಇವೆಲ್ಲವನ್ನೂ ಈ ಯಕ್ಷ ಗಣಪನ ಮೂರ್ತಿಯಲ್ಲಿ ಸ್ಪುಟವಾಗಿ ಕಾಣಬಹುದು.
ಅನೇಕ ಋತ್ವಿಕರ ವೇದಮಂತ್ರಗಳ ನಡುವೆ ಗಣಪನ ಉತ್ಸವ ಮೂರ್ತಿ ಸವಾರಿ ಗ್ರಾಮ ಗ್ರಾಮಗಳಿಗೆ ಮೆರವಣಿಗೆಯಲ್ಲಿ ಹೋಗಿ ಬಂದಿತ್ತು. ಹಳ್ಳಿಗರಿಗೆ ಇದೊಂದು ರೋಮಾಂಚನಕಾರಿಯಾದ ಅನುಭವ. ಕಳೆದೊಂದು ತಿಂಗಳಿಂದ ಕೃಷಿ ಚಟುವಟಿಕೆಯ ನಡುವೆಯೇ ಈ ಯೋಗ ಪಟ್ಟಾಭಿಷೇಕಕ್ಕೆ ಬೇಕಾದ ವೇದಿಕೆ ನಿರ್ಮಾಣ, ಬಯಲು ಸಿದ್ಧತೆ ಬಾಣಸಿಗರ ಮನೆ, ಊಟದ ಮನೆ ವಾಹನ ತಂಗುದಾಣ ಹೀಗೆ ವಿಶಾಲವಾದ ಜಾಗವನ್ನು ಹಳ್ಳಿಗರು ಹೆಂಗಸರು ಗಂಡಸರು ಎಂಬ ಭೇದವಿಲ್ಲದೆ ಜಾತಿ ಪಂಗಡಗಳ ಎಣಿಕೆ ಇಲ್ಲದೆ ಶ್ರಮದಾನದಿಂದಲೇ ಮಾಡಿ ಮುಗಿಸಿದ್ದರು. ವಿಶೇಷವೆಂದರೆ, ಹಳ್ಳಿಯ ಸುತ್ತಮುತ್ತ ಇರುವ ಕೆಲವೇ ಮುಸ್ಲಿಂ ಕುಟುಂಬದ ಯುವಕರು ಈ ಶ್ರಮದಾನದಲ್ಲಿ ಕಾಯೇನಾ ವಾಚಾ ಮನಸಾ ಸೇರಿಕೊಂಡಿದ್ದು ಕೊನೆಯ ದಿನದ ಪ್ರಸಾದ ಭೋಜನದ ತನಕವೂ ಕಾರ್ಯಕರ್ತರಾಗಿ ದುಡಿದಿದ್ದು ವಿಶೇಷವಾಗಿತ್ತು. ಬಸ್ಸಿನ ವ್ಯವಸ್ಥೆಯೂ ಇಲ್ಲದ ಸಣ್ಣಹಳ್ಳಿ ಕಲಗದ್ದೆಯಲ್ಲಿ ಮೂರು ದಿನಗಳ ಪರ್ಯಂತ ಸಾವಿರ ಸಾವಿರ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅನ್ನಪ್ರಸಾದ ಸ್ವೀಕರಿಸಿ ಯಕ್ಷಗಾನ ನಾಟ್ಯಗಳ ಕಾರ್ಯಕ್ರಮಗಳನ್ನು ವೀಕ್ಷಿಸಿ ತೆರಳುತ್ತಿದ್ದರು. ಮೂಲ ಗಣಪನ ವಿಗ್ರಹಕ್ಕೆ ಆರಾಧನೆ ನಡೆದಂತೆಯೇ ಉತ್ಸವ ಮೂರ್ತಿ ಊರ ತುಂಬ ಹೋಗಿ ಬಂದು ಕಲಶ ಸ್ನಾನ ಮಾಡಿ ಪ್ರಥಮ ಬಾರಿಗೆ ಯೋಗ ಪಟ್ಟಾಭಿಷೇಕ ಮಾಡಿಸಿಕೊಂಡು ಸಾರ್ಥಕ ಮನೋಭಾವನೆ ಮೂಡಿಸಿದ್ದು ಗ್ರಾಮೀಣ ಪ್ರದೇಶದವರಿಗೆ ಒದಗಿಬಂದ ಯೋಗಾಯೋಗವೇ.
ಭುವನೇಶ್ವರಿ ಹೆಗಡೆ