Advertisement

ಯಕ್ಷಗಾನ ಪ್ರಸಂಗಕರ್ತ ಛಂದೋಬ್ರಹ್ಮ ಡಾ. N. ಶಿಮಂತೂರು ನಾರಾಯಣ ಶೆಟ್ಟಿ ಇನ್ನಿಲ್ಲ

07:52 PM Aug 26, 2020 | Hari Prasad |

ಮಂಗಳೂರು: ಯಕ್ಷಗಾನ ಪ್ರಸಂಗಕರ್ತ ಮತ್ತು ಕನ್ನಡ ಛಂದಸ್ಸುಗಳ ಕುರಿತಾಗಿ ಆಳವಾದ ಅಧ್ಯಯನವನ್ನು ನಡೆಸಿದ್ದ ಡಾ. ಎನ್. ಶಿಮಂತೂರು ಶೆಟ್ಟಿ ಅವರು ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

Advertisement

ನಾರಾಯಣ ಶೆಟ್ಟಿ ಅವರಿಗೆ 86 ವರ್ಷ ಪ್ರಾಯವಾಗಿತ್ತು. ಅವರು ರಚಿಸಿರುವ ‘ಯಕ್ಷಗಾನ ಛಂದೋಂಬುಧಿ’ ಮಹಾಗ್ರಂಥಕ್ಕೆ ಹಂಪಿ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪ್ರಧಾನ ಮಾಡಿತ್ತು.

ಯಕ್ಷಗಾನದಲ್ಲಿ ಛಂದಸ್ಸಿಗೆ ಸಂಬಂಧಿಸಿದಂತೆ ಶೆಟ್ಟರು ಒಟ್ಟು ನಾಲ್ಕು ಕೃತಿಗಳನ್ನು ರಚಿಸಿದ್ದಾರೆ. ಅವುಗಳೆಂದರೆ, ಯಕ್ಷಗಾನ ಛಂದೋಂಬುಧಿ, ಕನ್ನಡದ ಅನರ್ಘ್ಯ ಛಂದೋ ರತ್ನಗಳು, ವಿ-ಚಿತ್ರಾ ತ್ರಿಪದಿ, ದೇಸೀ ಛಂದೋಬಂಧಗಳ ಪುದುವಟ್ಟು.

ಕಳೆದ ಕೆಲವು ಸಮಯಗಳಿಂದ ಅನಾರೋಗ್ಯಕ್ಕೀಡಾಗಿದ್ದ ನಾರಾಯಣ ಶೆಟ್ಟರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಇಂದು ನಿಧನರಾಗಿದ್ದಾರೆ. ಶೆಟ್ಟರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ತಮ್ಮ ಎಳೆ ವಯಸ್ಸಿನಲ್ಲೇ ಅತ್ಯಂತ ಪ್ರತಿಭಾನ್ವಿತರಾಗಿದ್ದ ನಾರಾಯಣ ಶೆಟ್ಟರು ತಮ್ಮ 13ನೇ ವರ್ಷ ಪ್ರಾಯದಲ್ಲೇ ಗೋಪಾಲಕೃಷ್ಣ ಅಸ್ರಣ್ಣರ ಪ್ರೇರಣೆಯಿಂದ ‘ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ’ ಎಂಬ ಪ್ರಸಂಗವನ್ನು ರಚಿಸಿದ್ದರು. ಈ ಪ್ರಸಂಗ ಈಗಲೂ ಕಟೀಲು ಮೇಳದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.

Advertisement

ಬಳಿಕ SSLC ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿ ಅವರು ‘ಗೋವಾ ದುರಂತ’ವೆನ್ನುವ ಪ್ರಸಂಗವನ್ನು ರಚಿಸಿದ್ದರು. ಶಿಕ್ಷಣ ತರಬೇತಿಯನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ಶೆಟ್ಟರು ‘ಕೃಷಿ ವಿಜಯ’, ‘ಪಂಜುರ್ಲಿ ಸಂಧಾನ’, ‘ಕಟ್ಟೆಪುಣಿತ ಕಾಳಗ’ (ಗದ್ದೆ ಬದುವಿನ ಕಾಳಗ!) ಎಂಬ ಮೂರು ಪ್ರಸಂಗಗಳನ್ನು ರಚಿಸಿದ್ದರು.

ಬಳಿಕ ಅಂದು ತೆಂಕು ತಿಟ್ಟಿನ ಅಗ್ರಣಿ ಮೇಳವಾಗಿದ್ದ ಕರ್ನಾಟಕ ಮೇಳಕ್ಕಾಗಿ ನಾರಾಯಣ ಶೆಟ್ಟರು ‘ಸೊರ್ಕುದ ಸಿರಿಗಿಂಡೆ’, ‘ಬಿರ್ದ್ ದ ಬೈರವೆರ್’, ‘ಬೆಂಗ್ ದ ಬಾಲೆ ನಾಗಿ’, ‘ರಾಜ ಮುದ್ರಿಕಾ’ ಮತ್ತು ‘ಶ್ರೀ ಕೃಷ್ಣದೇವರಾಯ’ ಪ್ರಸಂಗಗಳನ್ನು ರಚಿಸಿಕೊಟ್ಟಿದ್ದರು. ಇನ್ನು ಬಡಗುತಿಟ್ಟಿನ ಪೆರ್ಡೂರು ಮೇಳದಲ್ಲಿ ಪ್ರದರ್ಶನಕ್ಕಾಗಿ ‘ದೀಕ್ಷಾ ಕಂಕಣ’ ಎಂಬ ಪ್ರಸಂಗವನ್ನೂಈ ಇವರು ರಚಿಸಿದ್ದರು.

ಡಾ. ಶಿಮಂತೂರು ನಾರಾಯಣ ಶೆಟ್ಟರು ಒಟ್ಟು 17 ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಆದರೆ ಶೆಟ್ಟರು ಯಕ್ಷಗಾನ ವಲಯದಲ್ಲಿ ಮತ್ತು ವಿದ್ವತ್ ಕ್ಷೇತ್ರದಲ್ಲಿ ತಾವು ಕನ್ನಡ ಛಂದಸ್ಸಿನ ವಿಷಯದಲ್ಲಿ ಮಾಡಿರುವ ಆಳವಾದ ಅಧ್ಯಯನದಿಂದಲೇ ಹೆಸರುವಾಸಿಯಾಗಿದ್ದಾರೆ.

ಪಾರ್ತಿಸುಬ್ಬ ಯಕ್ಷಗಾನ ಪ್ರಶಸ್ತಿ ಮೊದಲಿಗೆ ಸಲ್ಲಿಕೆಯಾಗಿದ್ದೇ ಡಾ. ಶಿಮಂತೂರು ನಾರಾಯಣ ಶೆಟ್ಟರಿಗೆ ಎನ್ನುವುದು ಅವರ ಸಾಧನೆಗೆ ಸಂದ ಹೆಗ್ಗಳಿಕೆಯೇ ಸರಿ. ಇದರ ಹೊರತಾಗಿ ‘ಯಕ್ಷಾಂಗಣ ಮಂಗಳೂರು’, ಪಟ್ಲ ಫೌಂಡೇಶನ್ ಪ್ರಶಸ್ತಿ, ಉಡುಪಿ ಕಲಾರಂಗ ಪ್ರಶಸ್ತಿಯೂ ಡಾ. ಶೆಟ್ಟರ ಪಾಲಿಗೆ ಸಂದಿವೆ.

ಯಕ್ಷ ಪಾಣಿನಿ, ಛಂದಶ್ಚತುರಾನನ, ಯಕ್ಷ ಛಂದೋ ಭಾರ್ಗವ, ಛಂದೋಂಬುಧಿ ಚಾರು ಚಂದ್ರ, ಛಂದೋ ವಾರಿಧಿ ಚಂದ್ರ, ಅಭಿನವ ನಾಗವರ್ಮ, ಛಂದೋಬ್ರಹ್ಮ ಖ್ಯಾತಿಯ ಡಾ. ಎನ್. ನಾರಾಯಣ ಶೆಟ್ಟಿ ಅವರ ಕುರಿತಾಗಿ ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ (ರಿ.), ಉಡುಪಿ-ಬೆಂಗಳೂರು ಚಿತ್ರೀಕರಿಸಿರುವ ಮಾಹಿತಿ ಪೂರ್ಣ ಡಾಕ್ಯುಮೆಂಟರಿ ಇಲ್ಲಿದೆ.

ಪೂರಕ ಮಾಹಿತಿ: ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ (ರಿ.), ಉಡುಪಿ-ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next