ಮೂಡುಬಿದಿರೆ: ಯಕ್ಷಗಾನದ ಹಿರಿಯ ನೇಪಥ್ಯ ಕಲಾವಿದ, ಮೂಡುಬಿದಿರೆ ನಾಗರಕಟ್ಟೆ ನಿವಾಸಿ ಬೊಕ್ಕಸ ಜಗನ್ನಾಥ ರಾವ್ (76) ಮಂಗಳೂರಿನ ಆಸ್ಪತ್ರೆ ಯಲ್ಲಿ ಶುಕ್ರವಾರ ನಿಧನ ಹೊಂದಿದ್ದಾರೆ.
ಪತ್ನಿ, ಸಹೋದರರು ಹಾಗೂ ಬಂಧುಬಳಗವನ್ನವರು ಅಗಲಿದ್ದಾರೆ.ತಂದೆ ರಾಮರಾಯರೊಂದಿಗೆ ವೇಷಭೂಷಣ ತಯಾರಿಕೆಯಲ್ಲಿ
ತೊಡಗಿಸಿಕೊಂಡಿದ್ದ ಅವರು ಯಕ್ಷಗಾನ ರಂಗದಲ್ಲಿ 6 ದಶಕಗಳಿಗೂ ಮಿಗಿಲಾಗಿ ಸೇವೆ ಸಲ್ಲಿಸಿದ್ದರು.ಸಂತೋಷ್ ಕಲಾ ಆರ್ಟ್ಸ್ ಎಂಬ ವೇಷಭೂಷಣ ಸಂಸ್ಥೆಯನ್ನು ಅವರು ಕಲಾವಿದ ಲಾಡಿ ಕೃಷ್ಣ ಶೆಟ್ಟಿ, ತನ್ನ ಸಹೋದರರು, ಸಹೋದರರ ಮಕ್ಕಳು ಮತ್ತು ಇತರರ ಸಹಕಾರದೊಂದಿಗೆ ನಡೆಸಿಕೊಂಡು ಬಂದಿದ್ದರು. ಯಕ್ಷಗಾನ, ನಾಟಕಗಳ ವೇಷಭೂಷಣ ಅಲ್ಲದೆ ಬೇತಾಳ, ಮದುವೆ ಮಂಟಪ, ಚಪ್ಪರ ಸಿಂಗಾರ ಕಲೆಯಲ್ಲೂ ಅವರು ನಿಷ್ಣಾತರಾಗಿದ್ದರು.
ಕುರಿಯ ವಿಠಲ ಶಾಸ್ತ್ರಿಯವರ ಸಂಸರ್ಗದಿಂದ ಧರ್ಮಸ್ಥಳ ಮೇಳಕ್ಕೆ ಅವರು ಪ್ರಥಮವಾಗಿ ವೇಷಭೂಷಣ ತಯಾರಿಸಿ ಕೊಟ್ಟಿದ್ದರು. ವೇಷಗಳನ್ನು ಸಿದ್ಧಪಡಿಸು, ಮಣಿಸರಕಿನ ಭೂಷಣಾದಿ ತಯಾರಿಸುವ ಕಲೆಯಲ್ಲಿ ಅವರದು ಎತ್ತಿದ ಕೈ. ಕುಂಬ್ಳೆ ಸುಂದರರಾಯರ ಚೌತಿಯ ತಿರುಗಾಟ ದಲ್ಲಿ ಅವರು ಹಲವು ವರ್ಷ ನೇಪಥ್ಯ ಕಲಾವಿದರಾಗಿದ್ದರು. ಶೇಣಿ, ಎಂಪೆಕಟ್ಟೆ, ಪುತ್ತೂರು ನಾರಾಯಣ ಹೆಗ್ಡೆ ಸಹಿತ ಹಿರಿ ಕಿರಿಯ ಕಲಾವಿದರೆಲ್ಲರ ಒಡನಾಟ ಅವರಿಗಿತ್ತು.
ಎಲ್ಲ ಪ್ರಸಂಗಗಳ ಸಂಪೂರ್ಣ ಮಾಹಿತಿ ಅವರಿಗಿತ್ತು. ಒಂದೊಮ್ಮೆ ಶ್ರೀದೇವೀ ಮಹಾತ್ಮೆಯ ಎಲ್ಲ ವೇಷಗಳನ್ನು ಒಬ್ವರೇ ಕಟ್ಟಿ ಕೊಟ್ಟ ಚ್ಯಾಲೆಂಜಿಂಗ್ ನೇಪಥ್ಯ ಕಲಾವಿದರು ಅವರು ಕಳೆದ ವರುಷ ಆಗಷ್ಟ್ 27ರಂದು ಮಂಗಳೂರು ಪುರಭವನದಲ್ಲಿ ನಡೆದಿದ್ದ ಭ್ರಾಮರೀ ಯಕ್ಷಮಿತ್ರರು ರಿ. ಮಂಗಳೂರು ಇವರ 5 ನೇ ವಾರ್ಷಿಕೋತ್ಸವದಲ್ಲಿ ಅವರು ಸಮ್ಮಾನ ಸ್ವೀಕರಿಸಿದ್ದರು. ಅದಕ್ಕೂ ಮುನ್ನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಉಡುಪಿಯ ಯಕ್ಷಗಾನ ಕಲಾರಂಗ, ಇರುವೈಲು ಮೇಳ ಸಹಿತ ಹಲವೆಡೆ ಅವರು ಸಮ್ಮಾನಿಸಲ್ಪಟ್ಟಿದ್ದರು.