Advertisement

ಸಾಹಿತ್ಯದ ಪರಿಗಣನೆಗೆ ಬಾರದ ಯಕ್ಷಗಾನ ಬರವಣಿಗೆ

04:20 PM Sep 02, 2018 | Team Udayavani |

ಶಿರಸಿ: ಯಕ್ಷಗಾನ ಸರಳ ಬರವಣಿಗೆಯ ಶಕ್ತಿ ಅಪಾರವಾಗಿದ್ದರೂ ಸಹ ಯಕ್ಷಗಾನ ಬರವಣಿಗೆ ಸಾಹಿತ್ಯ ಎಂದು ಪರಿಗಣನೆ ಆಗದಿರುವುದು ಬೇಸರದ ಸಂಗತಿ ಎಂದು ಯಕ್ಷಗಾನ ಸಂಘಟಕ, ಅಕಾಡೆಮಿ ಸದಸ್ಯ ನಾಗರಾಜ್‌ ಜೋಶಿ ವಿಷಾದ ವ್ಯಕ್ತಪಡಿಸಿದರು. ಅವರು ಶನಿವಾರ ನಗರದ ಯೋಗ ಮಂದಿರದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಕಾರದಲ್ಲಿ ಮಹಿಳಾ ಹಾಗೂ ಮಕ್ಕಳ ಯಕ್ಷಗಾನ ತಂಡ ಯಕ್ಷ ಗೆಜ್ಜೆ ಹಮ್ಮಿಕೊಂಡ ಯಕ್ಷಗಾನ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

Advertisement

ಪ್ರತ್ಯೇಕ ಯಕ್ಷಗಾನ ಅಕಾಡೆಮಿ ಸ್ಥಾಪನೆಯಾಗಲು ಯಕ್ಷಗಾನ ಸಂಘಟಕರು, ಕಲಾವಿದರ ಶ್ರಮ ಹೆಚ್ಚಿದೆ. ಆದರೆ ಬಯಲಾಟ ಹಾಗೂ ಯಕ್ಷಗಾನ ಅಕಾಡೆಮಿಗೆ ಅನುದಾನ ಹಂಚಿಕೆಯಲ್ಲಿ ಪಾಲು ಮಾಡಿದ್ದು ಆತಂಕ ಸೃಷ್ಟಿಸಿದ್ದರೂ ನಂತರ 1.10 ಕೋ.ರೂ. ಅನುದಾನವನ್ನು ಸರಕಾರ ನೀಡಿತು ಎಂದ ಅವರು, ಸರಕಾರಿ ಪ್ರಾಯೋಜಿತ ಯಕ್ಷಗಾನ ಪ್ರದರ್ಶನ ಒಂದು ನಡೆಸಿ, ಅದಕ್ಕೆ ಐದಾರು ಫಲಕ ಹಾಕಿ ಹಣ ಮಾಡುವ ಕೆಲವರ ನಡೆ ಸರಿಯಲ್ಲ. ಹೊರ ಜಿಲ್ಲೆಗಳಲ್ಲಿ ಇರುವ ಇಂಥ ಕಾರ್ಯ ನಮ್ಮ ಜಿಲ್ಲೆಗೆ ಬಾರದಂತೆ ನೋಡಿಕೊಳ್ಳಬೇಕು. ಕಾಗದ ಪತ್ರಗಳಲ್ಲಿ ಮಾತ್ರ ಹತ್ತಾರು ಯಕ್ಷಗಾನ ಪ್ರದರ್ಶನ ನೀಡಿದ್ದೇವೆ ಎಂದು ತಿಳಿಸಿ ಹಣ ಮಾಡುತ್ತಿರುವ ಸಂಘಟನೆಗಳ ಬಗ್ಗೂ ನಾವು ಜಾಗೃತರಾಗಿರಬೇಕು ಎಂದರು.

ಮಕ್ಕಳಿಗೆ ಯಕ್ಷಗಾನದ ಪ್ರೋತ್ಸಾಹ ನೀಡಿದರೆ ಮಾತ್ರ ಯಕ್ಷಗಾನ ಉಳಿಯಲು ಸಾಧ್ಯ. ಈ ಕಾರಣದಿಂದ ಅಕಾಡೆಮಿ ಈ ವರ್ಷ 60 ತರಬೇತಿ ಶಿಬಿರಗಳಿಗೆ ಅನುಮತಿ ನೀಡಿದೆ. ಇಷ್ಟೊಂದು ವ್ಯಾಪಕವಾಗಿ ತರಬೇತಿ ನಡೆಸುತ್ತಿರುವ ಅಕಾಡೆಮಿ ಇದೇ ಮೊದಲು. ಉಳಿದ ಅಕಾಡೆಮಿಗಳಿಗೆ ಇಲ್ಲಿ ಯಶಸ್ಸು ಆದರೆ ಮಾದರಿಯಾಗಿ ಅನುಷ್ಠಾನಗೊಳ್ಳಬಹುದು ಎಂದರು.

ರಂಗಕರ್ಮಿ ರಮಾನಂದ ಐನಕೈ ಮಾತನಾಡಿ, ಮಕ್ಕಳನ್ನು ಗುಲಾಮರನ್ನಾಗಿಸುವ ಶೈಕ್ಷಣಿಕ ಕಲಿಕೆಯ ಒತ್ತಡದ ಹೊರಗೆ ಪರಿಪೂರ್ಣತೆಗೆ ಒಯ್ಯುವ ಸಾಂಸ್ಕೃತಿಕ ನಡೆಯನ್ನೂ ರೂಢಿಸಬೇಕು. ಮನುಷ್ಯನ ಪರಿಪೂರ್ಣತೆಯ ಬೆಳವಣಿಗೆಗೆ ಅನೇಕ ಕಾರ್ಯಗಳು ಕೊರತೆಯನ್ನುಂಟು ಮಾಡುತ್ತಿದೆ. ಜೀವನಕ್ಕಾಗಿ ಕಲಿಯಬೇಕೆ ವಿನಃ ಉದ್ಯೋಗಕ್ಕಾಗಿ ಅಲ್ಲ. ಚೆನ್ನಾಗಿ ಓದಿಕೊಂಡು ಇಂಜಿನಿಯರ್‌, ಡಾಕ್ಟರ್‌ ಆಗಬಹುದು. ಆದರೆ ಉತ್ತಮ ಕಲಾವಿದನಾಗಲು ಸಾಧ್ಯವಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಭಾಗವತ ಗಜಾನನ ಭಟ್ಟ ತುಳಗೇರಿ, ಯಕ್ಷಗಾನ ಶಿಕ್ಷಣ ಪಡೆದು ಸಂಸ್ಕಾರಯುತವಾಗಿ ಬದುಕಲೂ ಅವಕಾಶ ಆಗುತ್ತದೆ. ನೋಡುವುದನ್ನೂ ಈ ತರಬೇತಿ ಕಲಿಸುತ್ತದೆ ಎಂದರು. ಯೋಗ ಮಂದಿರ ಆಡಳಿತ ಮಂಡಳಿ ಅಧ್ಯಕ್ಷ ಎಸ್‌.ಎನ್‌. ಭಟ್ಟ, ಎಂ.ಕೆ. ಹೆಗಡೆ ಗೋಳಿಕೊಪ್ಪ, ಸತೀಶ ಹೆಗಡೆ ಸಾಮ್ರಾಟ ಇತರರು ಇದ್ದರು. ಯಕ್ಷ ಗೆಜ್ಜೆ ಅಧ್ಯಕ್ಷೆ ನಿರ್ಮಲಾ ಹೆಗಡೆ ಗೋಳಿಕೊಪ್ಪ ಸ್ವಾಗತಿಸಿದರು. ಲತಾ ಗಿರಿಧರ ಹೊನ್ನೆಗದ್ದೆ ನಿರೂಪಿಸಿದರು.

Advertisement

ಯಕ್ಷಗಾನ ಮಕ್ಕಳಲ್ಲಿ ವ್ಯಕ್ತಿತ್ವ ರೂಪಿಸುತ್ತದೆ. ವೈಜ್ಞಾನಿಕ ಚಿಂತನಾ ಕ್ರಮ ಕೂಡ ಕಲಿಸುತ್ತದೆ. ಯಕ್ಷಗಾನ ಕಲೆಯನ್ನು ಸೈದ್ಧಾಂತಿಕವಾಗಿ ಮಂಡಿಸುವಂತಾಗಬೇಕು.
 ರಮಾನಂದ ಐನಕೈ,
  ರಂಗಕರ್ಮಿ

Advertisement

Udayavani is now on Telegram. Click here to join our channel and stay updated with the latest news.

Next