Advertisement

Yakshagana; ಬಣ್ಣದ ವೇಷದ ರಂಗು ಮಂಕಾಗುತ್ತಿದೆ: ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯ

11:37 PM Jul 13, 2024 | Team Udayavani |

ಬ್ರಹ್ಮಾವರ ತಾಲೂಕಿನ ನೀಲಾವರ ಸಮೀಪದ ಎಳ್ಳಂಪಳ್ಳಿ ಎಂಬ ಕುಗ್ರಾಮದಲ್ಲಿ ಮಧ್ಯಮ ವರ್ಗದ ಶೀನ ಆಚಾರ್ಯ ಮತ್ತು ಅಕ್ಕಯ್ಯ ದಂಪತಿಯ ಪುತ್ರನಾಗಿ 1956ರಲ್ಲಿ ಜನಿಸಿದ ಜಗನ್ನಾಥ ಆಚಾರ್ಯ ಅವರು, 5ನೇ ತರಗತಿಗೆ ವಿದ್ಯಾಭ್ಯಾಸವನ್ನು ನಿಲ್ಲಿಸಿ, ಬಾಲಗೋಪಾಲರಾಗಿ ಮಂದಾರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿದರು. ಆಗ ಮೇಳದಲ್ಲಿದ್ದ ಉಡುಪಿ ಬಸವ ನಾಯ್ಕ, ವಂಡ್ಸೆ ನಾರಾಯಣ ಗಾಣಿಗ, ಪೇತ್ರಿ ಮಾಧವ ನಾಯಕರಿಂದ ಪ್ರಾಥಮಿಕ ನೃತ್ಯ ಅಭ್ಯಾಸ ಮಾಡಿ ಅನಂತರ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ದಿ| ರಾಮ ನಾಯರಿಯವರಲ್ಲಿ ಯಕ್ಷಗಾನದ ವಿದ್ಯೆ ಕಲಿತರು. ಉಡುಪಿ ಯಕ್ಷಗಾನ ಕೇಂದ್ರದ ಖಾಯಂ ಸದಸ್ಯನಾಗಿ ಗುರು ವೀರಭದ್ರ ನಾಯಕ್‌, ನೀಲಾವರ ರಾಮಕೃಷ್ಣಯ್ಯ, ಹಿರಿಯಡಕ ಗೋಪಾಲ ರಾಯ, ಮಹಾಬಲ ಕಾರಂತ, ವೆಂಕಟರಮಣ ಗಾಣಿಗ ಅವರಿಂದ ಯಕ್ಷಗಾನದ ತಾಳ ಹೆಜ್ಜೆಗಾರಿಕೆಯಲ್ಲಿ ಪರಿಪೂರ್ಣತೆ ಸಾಧಿಸಿದರು. ವೀರಭದ್ರ ನಾಯಕರ ಮೆಚ್ಚಿನ ಶಿಷ್ಯನಾಗಿ ಮಟಪಾಡಿ ಶೈಲಿಯ ಪ್ರಾತಿನಿಧಿಕರಾಗಿ ಗುರುತಿಸಲ್ಪಟ್ಟರು.

Advertisement

ಬಡಗುತಿಟ್ಟಿನ ಯಕ್ಷಗಾನ ಕ್ಷೇತ್ರದಲ್ಲಿ ಬಣ್ಣದ ವೇಷ, ವೇಷಧಾರಿಗಳು ಮರೆಯಾಗುತ್ತಿದ್ದಾರೆ. ಪ್ರಾಮುಖ್ಯ ನಶಿಸುತ್ತಿದೆ ಎನ್ನುವ ಮಾತು ಯಕ್ಷಗಾನ ವಲಯದಲ್ಲಿದೆ. ಹೀಗೆ ಅಳಿದುಳಿದ ಸಾಂಪ್ರದಾಯಬದ್ಧ ಶ್ರೇಷ್ಠ ಬೆರಳೆಣಿಕೆಯ ಬಣ್ಣದ ವೇಷಧಾರಿಗಳಲ್ಲಿ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯರು ಓರ್ವರು.

ಮಂದಾರ್ತಿ, ಪೆರ್ಡೂರು, ಸಾಲಿಗ್ರಾಮ ವೃತ್ತಿ ಮೇಳದಲ್ಲಿ 35 ವರ್ಷಗಳ ಕಾಲ ಯಕ್ಷ ತಿರುಗಾಟ ನಡೆಸಿದ ಜಗನ್ನಾಥ ಆಚಾರ್ಯ ಜತೆಗೆ ಕೋಟ ಶಿವರಾಮ ಕಾರಂತರ ಯಕ್ಷಗಾನ ಕೇಂದ್ರದಲ್ಲಿ ಸಂಗೀತ ನಾಟಕ ಅಕಾಡೆಮಿ ಶಿಷ್ಯ ವೇತನದೊಂದಿಗೆ ಸಾಂಪ್ರದಾಯಿಕ ಶೈಲಿಯ ಬಣ್ಣದ ಮುಖವರ್ಣಿಕೆ, ಒಡ್ಡೋಲಗ ಕ್ರಮ, ವೇಷಭೂಷಣ, ನಡೆಗಳ ಕುರಿತಾದ ಸಮಗ್ರ ಅಧ್ಯಯನ ನಡೆಸಿ ಕಾರಂತರೊಂದಿಗೆ ರಷ್ಯಾ, ದುಬಾೖ, ಅಬುಧಾಬಿ ಸಹಿತ ವಿವಿಧ ರಾಷ್ಟ್ರಗಳಲ್ಲಿ ಹಾಗೂ ಭಾರತದ ಬೇರೆ-ಬೇರೆ ರಾಜ್ಯಗಳಲ್ಲಿ ತಿರುಗಾಟ ನಡೆಸಿದರು. ಲೀಲಾ ಉಪಾಧ್ಯರ ತಂಡದಲ್ಲಿ ಫ್ರಾನ್ಸ್‌ ಗೆ ಪ್ರಯಾಣ ಬೆಳೆಸಿದ್ದರು. ಪಂಚವಟಿಯ ಶೂರ್ಪನಖಾ, ರಾವಣ, ಹಿಡಿಂಬಾ ವಿವಾಹದ ಹಿಡಿಂಬೆ ಮತ್ತು ಹಿಡಿಂಬಾಸುರ, ಶ್ವೇತ ಕುಮಾರದ ದುರ್ಜಯಾಸುರ ಮುಂತಾದ ಬಣ್ಣ ಹಾಗೂ ಒತ್ತು ಬಣ್ಣದ ವೇಷಗಳು ಆಚಾರ್ಯರಿಗೆ ಕೀರ್ತಿ ತಂದಿವೆ. ಇವರ ಕಲಾ ಸಾಧನೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ ,ಗೋರ್ಪಾಡಿ ವಿಠಲ ಪಾಟೀಲ ಪ್ರಶಸ್ತಿ ಸಹಿತ ಹಲವಾರು ಪುರಸ್ಕಾರ, ಸಮ್ಮಾನಗಳು ಸಂದಿವೆ.

ಬಣ್ಣದ ವೇಷದ ಬಗ್ಗೆ ನಿಮಗೆ ಆಸಕ್ತಿ ಮೂಡಿದ್ದಾದರೂ ಹೇಗೆ?
ನಾನು ಆರಂಭದಲ್ಲಿ ಸ್ತ್ರೀವೇಷ, ಪುರುಷ ಪಾತ್ರಧಾರಿಯಾಗಿ ಮೇಳ ಪ್ರವೇಶ ಮಾಡಿದವನು. ಆದರೆ ಕ್ರಮೇಣ ದಿ| ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ, ರಾಮ ಬಳೆಗಾರ ಬೆಳೂ¤ರು, ಚೇರ್ಕಾಡಿ ಮಾಧವ ನಾಯ್ಕ ಮೊದಲಾದವರ ವೇಷಗಳನ್ನು ನೋಡಿ ಆ ಕಡೆಗೆ ಮೋಹಿತನಾದೆ.

ಹಿಂದೆ ಬಣ್ಣದ ವೇಷಕ್ಕೆ ಯಾವ ರೀತಿ ಮಹತ್ವವಿತ್ತು?
ಹಿಂದೆ ಬಣ್ಣದ ವೇಷಕ್ಕೆ ಪ್ರಾಧಾನ್ಯವಿತ್ತು. ಮೇಳದ ಚೌಕಿ ಯಲ್ಲಿ ಎರಡನೇ ವೇಷಧಾರಿ ಕುಳಿತುಕೊಳ್ಳುವ ಎದುರಿನ ಸ್ಥಾನ ಬಣ್ಣದ ವೇಷಧಾರಿಗೆ ಮೀಸಲಾಗಿತ್ತು. ಎರಡನೇ ವೇಷಧಾರಿಗಳು ರಜೆ ಇದ್ದಾಗ ಆ ವೇಷವನ್ನು ಪುರುಷ ವೇಷಧಾರಿಯೊಂದಿಗೆ ಬಣ್ಣದ ವೇಷಧಾರಿಯೂ ನಿರ್ವಹಿಸಬೇಕಾದಷ್ಟು ಪ್ರಬುದ್ಧತೆ ಅವರಲ್ಲಿ ಇರಬೇಕಿತ್ತು.

Advertisement

ಆ ಕಾಲದಲ್ಲಿ ಬಣ್ಣದ ವೇಷದ ಸೊಗಬು ಹೇಗಿತ್ತು?
ಆಗ ಮುಖವರ್ಣಿಕೆಗೆ ಹೆಚ್ಚಿನ ಮಹತ್ವವಿತ್ತು. ಆಟಕ್ಕೆ ಚೌಕಿಗೆ ಬರುವ ಪ್ರೇಕ್ಷಕರು ಎರಡನೇ ವೇಷ, ಪುರುಷ ವೇಷದ ಅನಂತರ ಬಣ್ಣದ ವೇಷ ಯಾರು ಎಂದು ಕೇಳುತ್ತಿದ್ದರು. ವೇಷಧಾರಿಗಳಿಗೂ ಉದ್ದನೆಯ ಆಳ್ತನ, ಸ್ವರಭಾರಗಳಿದ್ದವು. ಅದರಲ್ಲೂ ಬಡಗುತಿಟ್ಟಿಗೆ ಅದರದ್ದೇ ಆದ ಪ್ರತ್ಯೇಕ ವೇಷಭೂಷಣ, ಮುಖವರ್ಣಿಕೆಗಳಿದ್ದವು. ದಿನವೂ ಹುಳಿ ಅಕ್ಕಿಹಿಟ್ಟಿನ ಚಿಟ್ಟೆ ಇಡುವ ಕ್ರಮ ಇತ್ತು. ಮೇಳದಲ್ಲಿ ಅಡುಗೆ ಮಾಡುವ ಪಾಕ ವಿಭಾಗದವರು 2-3 ದಿನಕ್ಕೊಮ್ಮೆ ಅಕ್ಕಿ ರುಬ್ಬಿಕೊಡುತ್ತಿದ್ದರು. ಸುಮಾರು 2-3 ಗಂಟೆಗಳ ಕಾಲ ಚೌಕಿಯಲ್ಲಿ ಕುಳಿತು ಮುಖವರ್ಣಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದರು. ಮೂರು ಕೂಗಿನೊಂದಿಗೆ ರಂಗ ಪ್ರವೇಶಿಸಿ ಅನಂತರ ಸ್ನಾನ, ಸಂಧ್ಯಾವಂದನೆ, ಶಿವಪೂಜೆ ಅಭಿನಯದಿಂದ ಮಾಡಿ ತೋರಿಸಲಾಗುತ್ತಿತ್ತು. ಹೆಣ್ಣು ಬಣ್ಣಕ್ಕೂ ತುಸು ಭಿನ್ನವಾದ ಒಡ್ಡೋಲಗ ಕ್ರಮವಿತ್ತು. ಮಂದ ಬೆಳಕಿನಲ್ಲಿ ಆ ವೇಷದ ರೌದ್ರತೆ, ರಂಗಾಭಿನಯವನ್ನು ನೋಡಿ ಎಷ್ಟೋ ಮಂದಿ ಪ್ರೇಕ್ಷಕರು ಬೆಚ್ಚುವುದು, ಜ್ವರ ಬರುವುದು, ಮಕ್ಕಳು ಚಡ್ಡಿ ಒದ್ದೆ ಮಾಡಿಕೊಳ್ಳುತ್ತಿದ್ದ ಸನ್ನಿವೇಶಗಳಿದ್ದವು.

ಆ ಕಾಲದಲ್ಲಿ ಬಣ್ಣದ ವೇಷಧಾರಿಗಳಿಗೇ ಮೀಸಲಿದ್ದ ಪಾತ್ರಗಳಾವು?
ರಾವಣ, ಮೈರಾವಣ, ಘಟೋತ್ಕಚ, ಹಿಡಿಂಬಾಸುರ, ದುರ್ಜಯ, ಕಾಲಜಂಘ, ಶೂರ್ಪನಖಿ, ವೀರಭದ್ರ, ಲವಣಾಸುರ, ಉಗ್ರನರಸಿಂಹ, ಮಹಿಷಾಸುರ ಹೀಗೆ ಹಲವು ವೇಷಗಳು ಬಣ್ಣದವರಿಗೆ ಮೀಸಲಾಗಿತ್ತು.

ತೆಂಕಿನ ಬಣ್ಣಕ್ಕೂ-ಬಡಗಿನ ಬಣ್ಣಕ್ಕೂ ವ್ಯತ್ಯಾಸ ಇದೆಯಾ?
ಎರಡೂ ತಿಟ್ಟಿನ ಬಣ್ಣದ ವೇಷಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ತೆಂಕಿನ ಮುಖವರ್ಣಿಕೆ, ವೇಷಭೂಷಣ, ರಂಗದ ನಡೆಗಳೇ ಬೇರೆ, ಬಡಗಿನ ನಡೆಯೇ ಬೇರೆ. ಬಡಗಿನಲ್ಲಿ ಭಾಗವತರು ಬಣ್ಣದ ವೇಷ ಕುಣಿಸುವಾಗ ಚಕ್ರ ತಾಳ ಹಿಡಿಯುವ ಕ್ರಮ ಇರಲಿಲ್ಲ. ಆದರೆ ಈಗ ಚಕ್ರ ತಾಳ ಇಲ್ಲದೆ ಬಣ್ಣದ ವೇಷ ಕುಣಿಸುವುದೇ ಇಲ್ಲ ಎನ್ನುವಂತಾಗಿದೆ. ಆದರೆ ತೆಂಕುತಿಟ್ಟಿನಲ್ಲಿ ಈಗಲೂ ಬಣ್ಣದ ವೇಷಕ್ಕೆ ಅದರದ್ದೇ ಆದ ಮಾರ್ಯಾದೆ ಇದೆ ಮತ್ತು ಬೇಡಿಕೆ ಕೂಡ ಇದ್ದು ಪರಂಪರೆಯ ಮೇಳದಲ್ಲಿ ಎರಡು-ಮೂರು ಬಣ್ಣದ ವೇಷಧಾರಿಗಳಿಗೆ ಅವಕಾಶವಿದೆ. ಒಂದಷ್ಟು ಕಲಾವಿದರೂ ಅಲ್ಲಿ ತಯಾರಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಬಣ್ಣದ ವೇಷದ ಬಗ್ಗೆ ಯುವ ಕಲಾವಿದರು ಯಾಕೆ ಆಕರ್ಷಿತರಾಗುತ್ತಿಲ್ಲ?
ಹಿಂದೆ ನಿತ್ಯವೂ ಪೌರಾಣಿಕ ಪ್ರಸಂಗಗಳು ಪ್ರದರ್ಶನವಾಗುತ್ತಿದ್ದವು. ಆಗ ಪ್ರತೀ ದಿನ ಬಣ್ಣದ ವೇಷದ ಅಗತ್ಯತೆ, ಬೇಡಿಕೆ ಇತ್ತು. ಅನಂತರ ಸಾಮಾಜಿಕ ಪ್ರಸಂಗಗಳಲ್ಲೂ ಬಣ್ಣಕ್ಕೆ ಒಂದು ವೇಷ ಮೀಸಲಿಡುತ್ತಿದ್ದರು. ಆದರೆ ಇಂದಿನ ಸಾಮಾಜಿಕ ಪ್ರಸಂಗದಲ್ಲಿ ಇದಕ್ಕೆ ಬೇಡಿಕೆ ಇಲ್ಲವಾಗಿದೆ. ಇದ್ದರೂ ಸರಿಯಾದ ಸ್ಥಾನಮಾನ-ಗೌರವ ನೀಡುತ್ತಿಲ್ಲ. ಹಿಂದೆ ನಾವೆಲ್ಲ ಬಣ್ಣದ ಸಾಲಿನ ವೇಷ ಬಿಟ್ಟು ಬೇರೆ ವೇಷ ಮಾಡಬೇಕಾದ ಪರಿಸ್ಥಿತಿ ಬಂದಾಗ ಮೇಳ ಬಿಡುವುದಕ್ಕೂ ಸಿದ್ದರಿದ್ದೆವು. ಬಣ್ಣದ ವೇಷಕ್ಕೆ ಪ್ರಾಶಸ್ತ್ಯ  ಕಡಿಮೆಯಾದ್ದರಿಂದ ಆಸಕ್ತಿ ಇರುವ ಪ್ರಜ್ಞಾವಂತ ಪ್ರೇಕ್ಷಕರು ಕೂಡ ಕಡಿಮೆಯಾಗಿದ್ದಾರೆ. ಇದರಿಂದಾಗಿ ಯುವ ಕಲಾವಿದರು ಈ ಕಡೆ ಆಕರ್ಷಿತರಾಗುತ್ತಿಲ್ಲ.

ಬಣ್ಣದ ವೇಷದ ಉಳಿವಿಗೆ ಏನೇನು ಮಾಡಬಹುದು?
ದಾಖಲೀಕರಣ ಅಗತ್ಯ. ಜತೆಗೆ ಮೇಳದ ಯಜಮಾನರು, ಹಿಮ್ಮೇಳದವರಿಗೆ ಬಣ್ಣದ ಬಗ್ಗೆ ಪ್ರೀತಿ ಇರಬೇಕು. ಕಲಿಯುವ ಆಸಕ್ತಿ ಇರುವ ಯುವಕರಿಗೆ ಹೇಳಿ ಕೊಡುವ ಗುಣ ಬೇಕು ಹಾಗೂ ಆಳವಾದ ಅಧ್ಯಯನ ಬೇಕು. ಎರವಲು ಸಂಸ್ಕೃತಿಯ ಮೊರೆ ಹೋಗದೆ ಬಡಗುತಿಟ್ಟಿನ ಬಗ್ಗೆ ಅಭ್ಯಾಸ ನಡೆಸಬೇಕು.

ಬಣ್ಣದ ವೇಷದ ಉಳಿವಿಗಾಗಿ ಹಿರಿಯ ಕಲಾವಿದರಾಗಿ ನಿಮ್ಮ ಕೊಡುಗೆ ಎನು?
ನನ್ನಲ್ಲಿ ಆಸಕ್ತಿಯಿಂದ ಬಂದ ಹಲವು ಯುವ ಕಲಾವಿದರಿಗೆ ರಂಗದ ನಡೆಯನ್ನು ಹೇಳಿಕೊಟ್ಟಿದ್ದೇನೆ. ಬಣ್ಣದ ವೇಷಕ್ಕೆ ಮೀಸಲಾಗಿರುವ ತರಬೇತಿ ಶಿಬಿರ ಮಾಡಬೇಕು. ವೃತ್ತಿ ಮೇಳದಲ್ಲಿ ಬಣ್ಣದ ಬಗ್ಗೆ ಆಸಕ್ತಿ ಇರುವ ಯುವ ಕಲಾವಿದರು, ಇತರ ಹವ್ಯಾಸಿ ಯಕ್ಷಗಾನ ಸಂಘದ ಆಸಕ್ತರಿಗೆ ನನಗೆ ತಿಳಿದುದನ್ನು ಕಲಿಸಿಕೊಡಬೇಕು ಎನ್ನುವ ಇರಾದೆ ಇದೆ. ಮುಂದಿನ ದಿನಗಳಲ್ಲಿ ಯಾವುದಾದರು ಮುಜರಾಯಿ ದೇವಸ್ಥಾನಗಳು ಇದಕ್ಕೆ ಅವಕಾಶ ಮಾಡಿಕೊಟ್ಟರೆ ಖಂಡಿತವಾಗಿ ಒಂದು ತಿಂಗಳು ಬೇಕಾದರೂ ತರಬೇತಿ ಶಿಬಿರವೊಂದನ್ನು ಆಯೋಜಿಸಲು ತಯಾರಿದ್ದೇನೆ. ಈ ಬಗ್ಗೆ ಮೇಳದ ಯಜಮಾನರು, ಕಲಾವಿದರು, ಯಕ್ಷಪ್ರೇಮಿಗಳು ಎಲ್ಲರೂ ಒಟ್ಟಾಗಿ ಚರ್ಚಿಸಿ ತೀರ್ಮಾನಿಸಬೇಕಿದೆ.

ಪ್ರಶಸ್ತಿ-ಪುರಸ್ಕಾರಗಳ ಬಗ್ಗೆ ನಿಮಗೆ ಆಸಕ್ತಿ ಇಲ್ಲವೇ?
ಪ್ರಶಸ್ತಿ ಪುರಸ್ಕಾರಗಳನ್ನು ಲಾಬಿ ಮಾಡಿ, ಜನಪ್ರತಿ ನಿಧಿಗಳು, ಅಧಿಕಾರಿಗಳ ಮನೆಗೆ ಅರ್ಜಿ ಹಿಡಿದು ಸುತ್ತಾಡಿ ಪಡೆಯಬಾರದು ಎನ್ನುವುದು ನನ್ನ ಅಭಿಪ್ರಾಯ. ಅಕಾಡೆಮಿಯಿಂದ ನೀಡುವ ಪ್ರಶಸ್ತಿಗಳು ಲಾಬಿ ಮಾಡಿದವರಿಗೆ ನೀಡದೆ ಅರ್ಹರಿಗೆ ನೀಡಬೇಕು. ಸಾಂಪ್ರದಾಯಿಕ ಶೆ„ಲಿಯ ಬಣ್ಣದ ಮುಖವರ್ಣಿಕೆ, ಒಡ್ಡೋಲಗ ಕ್ರಮ, ವೇಷಭೂಷಣ ಕುರಿತಾದ ಸಮಗ್ರ ಅಧ್ಯಯನ ನಡೆಸಿದ್ದು, ಕಾರಂತರೊಂದಿಗೆ ಒಂದಷ್ಟು ಕೆಲಸ ಮಾಡಿದ ಕಾರಣಕ್ಕೆ ಪ್ರಶಸ್ತಿ ಸಿಗಬೇಕಿತ್ತು ಎಂದು ಅಭಿಮಾನಿಗಳು ಹೇಳುತ್ತಾರೆ. ಆದರೆ ನಾನು ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ಇಂದು ಬಡಗುತಿಟ್ಟಿನಲ್ಲಿ ಬಣ್ಣದ ವೇಷಕ್ಕೆ ಎಷ್ಟು ಮಹತ್ವವಿದೆ?
ಇಂದು ವೃತ್ತಿ ಮೇಳದಲ್ಲಿ ಬಣ್ಣದ ವೇಷ ಸಂಪೂರ್ಣವಾಗಿ ತನ್ನ ಮಹತ್ವ ಕಳೆದುಕೊಂಡಿದೆ. ಪೌರಾಣಿಕ ಪ್ರಸಂಗಗಳನ್ನು ಆಡುವ ಬಯಲಾಟದ ಮೇಳಗಳಲ್ಲಿ ಒಂದೆರಡು ಮೇಳ ಹೊರತುಪಡಿಸಿ ಬೇರೆ ಕಡೆ ಬಣ್ಣದ ವೇಷಧಾರಿಗಳಿಗೆ ಸ್ಥಾನವಿಲ್ಲವಾಗಿದೆ. ಬಣ್ಣದ ವೇಷದ ಹೆಸರಲ್ಲಿ ನಾಟಕೀಯ ವೇಷಗಳು ಬಂದು ಹೋಗುತ್ತವೆ. ಇರುವ ಬೆರಳೆಣಿಕೆಯ ಕಲಾವಿದರು ವೃತ್ತಿ ನಿರ್ವಹಿಸಬೇಕಾದರೆ ಯಾವುದ್ಯಾವುದೋ ವೇಷವನ್ನು ಮಾಡಬೇಕಾದ ಅನಿವಾರ್ಯತೆ ಇದೆ. ನಿನ್ನೆ-ಮೊನ್ನೆ ಬಂದ ಹುಡುಗರು ಬಣ್ಣದ ವೇಷಗಳನ್ನು ನಿರ್ವಹಿಸುವ ಪರಿಸ್ಥಿತಿ ಇದೆ ಹಾಗೂ ಬಡಗುತಿಟ್ಟಿನ ವೇಷಭೂಷಣ, ಮುಖವರ್ಣಿಕೆ ಎಲ್ಲವೂ ಮರೆಯಾಗಿ ಎರವಲು ವೇಷಭೂಷಣ, ರಂಗ ನಡೆ ರಾರಾಜಿಸುತ್ತಿದೆ. ಆ ನಿಟ್ಟಿನಲ್ಲಿ ಹವ್ಯಾಸಿ ತಂಡಗಳು, ಕಲಾವಿದರೇ ಸ್ವಲ್ಪ ಮಟ್ಟಿಗೆ ಈ ಸಂಪ್ರದಾಯವನ್ನು ಉಳಿಸುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಒಂದೆರಡು ದಶಕಗಳಲ್ಲೇ ಪಾರಂಪರಿಕ ಬಣ್ಣದ ವೇಷದ ಬಣ್ಣ ಮಾಸಿ ಹೋಗುವುದರಲ್ಲಿ ಅನುಮಾನವಿಲ್ಲ.

 ರಾಜೇಶ್‌ ಗಾಣಿಗ, ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next